ಸೋಮವಾರ, ನವೆಂಬರ್ 18, 2019
28 °C

ಕಾಂಗ್ರೆಸ್ ನಾಯಕರ ಮೇಲೆ ದಾಳಿ ಖಂಡನೆ

Published:
Updated:
Prajavani

ದೇವನಹಳ್ಳಿ: ಕೇಂದ್ರದ ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷದಲ್ಲಿರುವ ಹಿರಿಯ ದಲಿತ ನಾಯಕರನ್ನು ಗುರಿಯಾಗಿಸಿ ಆದಾಯ ತೆರಿಗೆ ಅಧಿಕಾರಿಗಳ ಮೂಲಕ ದಾಳಿ ನಡೆಸುತ್ತಿರುವುದು ಖಂಡನೀಯ ಎಂದು ಕೆಪಿಸಿಸಿ ರಾಜ್ಯ ಎಸ್ಸಿ ಘಟಕ ಸಂಚಾಲಕ ಮಾಳಿಗೇನಹಳ್ಳಿ ಪ್ರಕಾಶ್ ಆರೋಪಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ದಲಿತ ನಾಯಕ ಡಾ ಜಿ. ಪರಮೇಶ್ ಅವರ ಮನೆ, ವೈದ್ಯಕೀಯ ಕಾಲೇಜು ಮೇಲಿನ ದಾಳಿಯನ್ನು ಖಂಡಿಸಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪರಮೇಶ್ವರ್ ರಾತ್ರೋರಾತ್ರಿ ಶ್ರೀಮಂತರಾಗಲಿಲ್ಲ, ನಾಯಕರಾಗಿ ಬೆಳೆದಿಲ್ಲ ಎಂದರು.

‘ಬರಲಿರುವ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ತೆರಳಬಾರದು ಎಂದು ಒಕ್ಕಲಿಗರ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ನಂತರ ಡಾ.ಜಿ.ಪರಮೇಶ್ವರ್ ಐಡಿ ಮತ್ತು ಐಟಿ ದಾಳಿ ಮೂಲಕ ಕಟ್ಟಿಹಾಕುವ ಪ್ರಯತ್ನಕ್ಕೆ ಮುಂದಾಗಿದೆ’ ಎಂದು ದೂರಿದರು.

‘ಬಿಜೆಪಿ ಕುತಂತ್ರ ರಾಜಕಾರಣದಿಂದ ಕಾಂಗ್ರೆಸ್ ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸುವುದರ ಮೂಲಕ ಬಲಿಪಶು ಮಾಡಲಾಗಿದೆ’ ಎಂದು ಆರೋಪಿಸಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಯುವ ಕಾಂಗ್ರೆಸ್ ಘಟಕ ಅಧ್ಯಕ್ಷ ಮಾರುತಿ ಮಾತನಾಡಿ, ‘ರಾಜ್ಯದಲ್ಲಿ ನೆರೆ ಹಾವಳಿಯಿಂದ ಸಂತ್ರಸ್ತರು ಪರಿತಪಿಸುತ್ತಿದ್ದಾರೆ, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಮಹಾರಾಷ್ಟ್ರ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ  ಸಂಪುಟ ಸಹುದ್ಯೋಗಿಯೊಂದಿಗೆ ಪ್ರಚಾರದಲ್ಲಿ ನಿರತರಾಗಿರುವುದು ರಾಜ್ಯದ ದುರಂತ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆರೆ ಸಂಭವಿಸಿ ಎರಡು ತಿಂಗಳು ಕಳೆದರೂ ಸಂತ್ರಸ್ತರ ಗೋಳು ಕೇಳುವವರಿಲ್ಲ, ಮುಂದಿನ ಚುನಾವಣೆಯಲ್ಲಿ ಸಂತ್ರಸ್ತರ ಶಾಪ ಬಿಜೆಪಿ ಪಕ್ಷಕ್ಕೆ ತಟ್ಟಲಿದೆ, ಕಾಂಗ್ರೆಸ್ ನಾಯಕರ ಮೇಲೆ ಮತ್ತೆ ದಾಳಿ ನಡೆದರೆ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಚಲವಾದಿ ಮಹಾಸಭಾ ತಾಲ್ಲೂಕು ಘಟಕ ಅಧ್ಯಕ್ಷ ಕೆ.ವಿ. ಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರ್, ಮುಖಂಡರಾದ ಮುನಿರಾಜು, ಶ್ರೀನಿವಾಸ್ ಗಾಂಧಿ ಇದ್ದರು.

ಪ್ರತಿಕ್ರಿಯಿಸಿ (+)