ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ ಪುರಸಭೆ: ಮುನಿಯಪ್ಪ ಕ್ಷೇತ್ರದಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿ!

–ಸಂದೀಪ್
Published : 13 ಸೆಪ್ಟೆಂಬರ್ 2024, 4:17 IST
Last Updated : 13 ಸೆಪ್ಟೆಂಬರ್ 2024, 4:17 IST
ಫಾಲೋ ಮಾಡಿ
Comments

ದೇವನಹಳ್ಳಿ: ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಸೆ.13ರಂದು ಚುನಾವಣೆ ನಿಗದಿಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಸ್ವ-ಕ್ಷೇತ್ರದಲ್ಲಿಯೇ ಕಾಂಗ್ರೆಸ್‌–ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಮೀಸಲಾತಿ ಪಟ್ಟಿಯಂತೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗಕ್ಕೆ ಹಾಗೂ ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದೆ. ಪರಿಶಿಷ್ಟ ವರ್ಗಕ್ಕೆ ಸೇರಿದ ವಾರ್ಡ್ 20ರ ಕಾಂಗ್ರೆಸ್‌ನ ಪುರಸಭೆ ಸದಸ್ಯ ಮುನಿಕೃಷ್ಣ (ಗುಬ್ಬಿ) ಒಬ್ಬರೇ ಇರುವುದರಿಂದ ಅಧ್ಯಕ್ಷ ಸ್ಥಾನ ಅವಿರೋಧವಾಗಿ ಕಾಂಗ್ರೆಸ್ ಪಾಲಾಗಲಿದೆ.

ಒಟ್ಟು 23 ಸದಸ್ಯರ ಬಲ ಹೊಂದಿರುವ ಪುರಸಭೆಯಲ್ಲಿ 10 ಕಾಂಗ್ರೆಸ್‌ ಸದಸ್ಯರಿದ್ದು, ಇವರೊಂದಿಗೆ 3 ಪಕ್ಷೇತರರು, ಒಬ್ಬರು ಬಿಎಸ್‌ಪಿ ಸದಸ್ಯ ಕಾಂಗ್ರೆಸ್‌ ಪರವಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ಇದಾಗ್ಯೂ ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸಲು ಮೈತ್ರಿ ಮಾಡಿಕೊಂಡಿದೆ.

ಈ ವಿಚಾರವಾಗಿ ಅಸಮಾಧಾನಿತ ಕಾಂಗ್ರೆಸ್‌ ಪಕ್ಷ ಹಾಗೂ ಪಕ್ಷೇತರ ಸದಸ್ಯರು ಗುರುವಾರ ಬೆಳಗ್ಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಹೋಗಿ, ಪಟ್ಟಣದಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆ ಬರುತ್ತದೆ ಎಂದು ಒತ್ತಡ ಹೇರಿದ ಬೆನ್ನಲ್ಲೇ, ಚುನಾವಣಾ ವೀಕ್ಷಕರಾಗಿ ಎಂಎಲ್‌ಸಿ ಗೋವಿಂದರಾಜು ಅವರನ್ನು ನೇಮಕ ಮಾಡಲಾಗಿದೆ.

ಗುರುವಾರ ಸಂಜೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ ಪುರಸಭೆ ಸದಸ್ಯರು, ಪಟ್ಟಣದ ಮುಖಂಡರು, ಜಿಲ್ಲಾ ಉಸ್ತವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಅವರು, ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ, ಸಾಂಪ್ರದಯದಂತೆ ಉಪಾಧ್ಯಕ್ಷರ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟು, ಅವಿರೋಧವಾಗಿ ಆಯ್ಕೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ.

ಮುಖಂಡರ ಒತ್ತಡಕ್ಕೆ ಮಣಿದ ಸಚಿವರು

ಪುರಸಭೆ ಉಪಾಧ್ಯಕ್ಷ ಸ್ಥಾನವನ್ನು ಜೆಡಿಎಸ್‌ ಪಕ್ಷಕ್ಕೆ ಬಿಟ್ಟುಕೊಡುವ ಸಲುವಾಗಿ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಪ‍ಟ್ಟಣದ ಮುಖಂಡರ ಒತ್ತಡಕ್ಕೆ ಸಚಿವ ಕೆ.ಎಚ್‌.ಮುನಿಯಪ್ಪ ಮಣಿದಿದ್ದಾರೆ.

ಸಭೆಯಲ್ಲಿ ಬಿಜೆಪಿಯ ಜಿ.ಎನ್‌.ವೇಣುಗೋಪಾಲ್‌ ಕಾಣಿಸಿಕೊಂಡಿದ್ದು, ಪಟ್ಟಣದ ಪ್ರಬಲ ಮುಖಂಡರೊಂದಿಗೆ ಪಕ್ಷ ಭೇದ ಮರೆತು ಮೈತ್ರಿಗೆ ಸಹಕರಿಸುವಂತೆ ಮನವೊಲಿಸಿದ್ದಾರೆ. ಜೆಡಿಎಸ್‌ನಿಂದ ಬಹುತೇಕ ಜಿ.ಎನ್‌.ರವೀಂದ್ರ ಅವಿರೋಧವಾಗಿ ಪುರಸಭೆ ಉಪಾಧ್ಯಕ್ಷರಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT