ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೀಕ್ಷೆ ಆಧಾರದಲ್ಲಿ ಟಿಕೆಟ್‌ ನೀಡಲಿ: ಬಿ.ಸಿ.ಆನಂದ್‌ಕುಮಾರ್‌

ಜ.20ರೊಳಗೆ ಹೈಕಮಾಂಡ್‌ ಸೂಕ್ತ ನಿರ್ಧಾರ ಕೈಗೊಳ್ಳಲು ಮುಖಂಡರ ಒತ್ತಾಯ
Last Updated 5 ಜನವರಿ 2023, 21:40 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿ ಘೋಷಣೆ ಮಾಡಬೇಕೆ ಹೊರತು, ಬೆಂಗಳೂರಿನಲ್ಲಿ ಕುಳಿತು ಜೈಕಾರ ಹಾಕುವ ಕಾರ್ಯಕರ್ತರನ್ನು ನಂಬಿ ಅಲ್ಲ ಎಂದು ಕೆಎಂಎಫ್‌ ನಿರ್ದೇಶಕ ಹಾಗೂ ಕಾಂಗ್ರೆಸ್‌ ಯುವ ಮುಖಂಡ ಬಿ.ಸಿ.ಆನಂದ್‌ಕುಮಾರ್‌ ಆಗ್ರಹಿಸಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಅವರ ಪರವಾಗಿ ಜನಾಭಿಪ್ರಾಯ ಇಲ್ಲ ಎಂದರು.

ಜ.20ರ ಒಳಗಾಗಿ ಪಕ್ಷದ ಹೈಕಮಾಂಡ್‌ ಸೂಕ್ತ ನಿರ್ಧಾರ ಕೈಗೊಂಡು ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕೆಂದು ಎಂದು ಒತ್ತಾಯಿಸಿದರು.

‘ಕಾಂಗ್ರೆಸ್‌ ಕಾರ್ಯಕರ್ತರು ಹಣಕ್ಕಾಗಿ ಮತಹಾಕುವುದಿಲ್ಲ. ಶಾಸಕರು ಹಣ ಬಲದ ಆಧಾರದ ಮೇಲೆ ಚುನಾವಣೆ ನಡೆಸುವ ಭ್ರಮೆಯಲ್ಲಿ ಇದ್ದಾರೆ. ನಾನು ಸಹ ಕೂಲಿ ಮಾಡಿಕೊಂಡು ಬದುಕು ರೂಪಿಸಿಕೊಂಡವನು. ಗ್ರಾಮ ಪಂಚಾಯಿತಿ ಹಂತದಿಂದ ಜಿಲ್ಲಾ ಪಂಚಾಯಿತಿ, ಬಮೂಲ್‌ ಸೇರಿದಂತೆ ಎಲ್ಲ ಹಂತದ ಅಧಿಕಾರದಲ್ಲೂ ಯಾವುದೇ ರೀತಿಯ ಹಗರಣ ಇಲ್ಲದಂತೆ ಪಕ್ಷಕ್ಕೆ ಗೌರವ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದೇನೆ. ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್‌ ನೀಡುವಂತೆ ಅರ್ಜಿ ಸಲ್ಲಿದ್ದೇನೆ ಎಂದರು.

ಕ್ಷೇತ್ರದಲ್ಲಿ ಶಾಸಕರ ಹಿಂದೆ ಶೇ.60ರಷ್ಟು ಜನ ಬೆಂಬಲಿಗರು ಬೆನ್ನಿಗೆ ಚೂರಿ ಹಾಕುವವರೇ ಇದ್ದಾರೆ. ಶಾಸಕರನ್ನು ಟೀಕಿಸುತ್ತ ಓಡಾಡುತ್ತಿದ್ದವರು ಈಗ ಅವರ ಪರವಾಗಿ ಮಾತಾಡುತ್ತಿದ್ದಾರೆ. ಈ ಪತ್ರಿಕಾಗೋಷ್ಠಿಗೆ ಆಗಮಿಸಿರುವ ಕಾರ್ಯಕರ್ತರು ಪಕ್ಷದ ನಿಷ್ಠರೇ ಹೊರತು, ಹಣಕ್ಕಾಗಿ ತಮ್ಮನ್ನು ಮಾರಿಕೊಳ್ಳುವವರಲ್ಲ. ಈ ಹಿಂದೆ ಪಕ್ಷದ ಜಿಲ್ಲಾ ಉಸ್ತುವಾರಿಯಾಗಿದ್ದ ಕೃಷ್ಣಭೈರೇಗೌಡ ಅವರಿಗೆ ತಾಲ್ಲೂಕಿನ ವಾಸ್ತವದ ಅರಿವಿತ್ತು. ಈಗಿನ ಉಸ್ತುವಾರಿ ಎಸ್.ರವಿ ಅವರು ಇಲ್ಲಿನ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳುತ್ತಿಲ್ಲ ಎಂದು ಅವರು ಅಸಮಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಹಿರಿಯ ಮುಖಂಡ ತಿ.ರಂಗರಾಜ್, ನಗರಸಭೆ ಸದಸ್ಯ ಎಂ.ಜಿ.ಶ್ರೀನಿವಾಸ್‌ ಮಾತನಾಡಿ, ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವುದೇ ಟಿಕೆಟ್‌ ನೀಡಲು ಮಾನದಂಡವಾಗಬಾರದು. ಪಕ್ಷದ ಮುಖಂಡರು ಈಗಾಗಲೇ ನಡೆಸಿರುವ ಎಲ್ಲಾ ರೀತಿಯ ಆಂತರಿಕ ಸಮೀಕ್ಷೆಗಳಲ್ಲಿ ಕ್ಷೇತ್ರದ ಹಾಲಿ ಶಾಸಕರಿಗೆ ಟಿಕೆಟ್‌ ನೀಡಿದರೆ ಮೂರನೇ ಸ್ಥಾನ ಪಡೆಯುವುದು ಖಚಿತವಾಗಿದೆ. ಈ ಸಮೀಕ್ಷೆಯ ಆಧಾರದ ಮೇಲೆಯೇ ಪಕ್ಷದ ವರಿಷ್ಠರು ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್‌ ಅವರಿಗೆ ಅರ್ಜಿ ಸಲ್ಲಿಸಲು ಸೂಚಿಸಿದ್ದರು. ಆದರೆ ಪಕ್ಷದ ಜಿಲ್ಲಾ ಉಸ್ತುವಾರಿ ಮಾಜಿ ಸಚಿವ ಆರ್‌.ರಾಮಲಿಂಗಾರೆಡ್ಡಿ ಅವರು ಸೋಲುವ ಅಭ್ಯರ್ಥಿಯನ್ನೇ ಬೆಂಬಲಿಸುತ್ತ ಮಾತನಾಡುತ್ತಿರುವುದು ಖಂಡನೀಯ ಎಂದರು.

ನಮಗೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಉಳಿಯಬೇಕು. ಕಾರ್ಯಕರ್ತರು ಒಪ್ಪುವ ಹಾಗೂ ಗೆಲ್ಲುವ ಯಾವುದೇ ಅಭ್ಯರ್ಥಿಗೆ ಟಿಕೆಟ್‌ ನೀಡಿದದೂ ಸಹ ಕೆಲಸ ಮಾಡುತ್ತೇವೆ. ಆದರೆ ಹಾಲಿ ಶಾಸಕ ಟಿ.ವೆಂಕಟರಮಣಯ್ಯ ಅವರಿಗೆ ಟಿಕೆಟ್‌ ನೀಡಿದರೆ ನಾವು ಪಕ್ಷದ ಪರ ಕಾರ್ಯನಿರ್ವಹಿಸುವುದಿಲ್ಲ ಎಂದು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಮಧುರೆ ಶನಿಮಹಾತ್ಮ ದೇವಾಲಯ ಸಮಿತಿ ಅಧ್ಯಕ್ಷ ಪ್ರಕಾಶ್, ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್‌, ಕಾಂಗ್ರೆಸ್‌ ಮುಖಂಡರಾದ ಆಂಜನಪ್ಪ, ಬಿ.ಎಚ್‌.ಕೆಂಪಣ್ಣ, ಹಸನ್‌ಘಟ್ಟ ರವಿ, ಅಂಬರೀಶ್, ವೆಂಕಟರಾಮ್, ಸಿದ್ದಬೈರೇಗೌಡ, ಮನ್ಸೂರು, ರಾಘವೇಂದ್ರ, ಹರೀಶ್, ಅಬ್ದುಲ್‌, ಗಂಗಣ್ಣ, ನಟರಾಜ್‌, ಬೈರೇಗೌಡ, ಷಣ್ಮುಖ ಆಚಾರ್‌ ಉಪಸ್ದಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT