ಗುರುವಾರ , ಡಿಸೆಂಬರ್ 8, 2022
18 °C

ಜನಾಭಿನಂದನಕ್ಕೆ ಕಾಂಗ್ರೆಸ್‌ ತೀವ್ರ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಕೆಂಪೇಗೌಡರ ಪ್ರತಿಮೆ ಸ್ಥಾಪನೆಯ ಲಾಭ ಪಡೆಯಲು ತಾಲ್ಲೂಕಿನಲ್ಲಿ ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮುಖಂಡರು ಪೈಪೋಟಿಗೆ ಇಳಿದಿದ್ದಾರೆ.

ಪ್ರಗತಿ ಪ್ರತಿಮೆ ನಿರ್ಮಾಣಕ್ಕೆ ಶ್ರಮಿಸಿದ ಗಣ್ಯರಿಗೆ ನ. 25ರಂದು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿರುವ ಜನಾಭಿನಂದನ ಸಮಾರಂಭಕ್ಕೆ ತಾಲ್ಲೂಕಿನ ಒಕ್ಕಲಿಗ ಸಮುದಾಯ ಮುಖಂಡರು ಹಾಗೂ ಕಾಂಗ್ರೆಸ್‌ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ.

ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ. ಬೈರೇಗೌಡ, ಕೆಎಂಎಫ್‌ ನಿರ್ದೇಶಕ ಬಿ.ಸಿ. ಆನಂದಕುಮಾರ್, ಮುಖಂಡ ಡಿ.ಸಿ. ಶಶಿಧರ್ ಅವರು, ‘ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯ ಉದ್ಘಾಟನೆಯು ಸರ್ಕಾರಿ ಕಾರ್ಯಕ್ರಮ ಎಂದು ಬಿಜೆಪಿ ಬಿಂಬಿಸಿತ್ತು. ಆದರೆ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲೆಯ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಶರತ್‌ ಬಚ್ಚೇಗೌಡ, ಟಿ. ವೆಂಕಟರಮಣಯ್ಯ ಅವರನ್ನು ಕಡೆಗಣಿಸಿ ಲೋಪ ಎಸಗಿದ್ದರು’ ಎಂದು
ದೂರಿದರು.

ಈಗ ದೊಡ್ಡಬಳ್ಳಾಪುರದಲ್ಲಿ ನಾಡಪ್ರಭು ಕೆಂಪೇಗೌಡ ಬಳಗದ ಮೂಲಕ ಬಿಜೆಪಿ ಮುಖಂಡರು ಪ್ರತಿಮೆ ಹೆಸರಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಕೆಂಪೇಗೌಡರ ಮೇಲೆ ಅಭಿಮಾನದಿಂದ ಕಾರ್ಯಕ್ರಮ ಮಾಡುತ್ತಿಲ್ಲ‌. ಬದಲಾಗಿ ಶಾಂತಿಪ್ರಿಯ ತಾಲ್ಲೂಕಿನಲ್ಲಿ ಜಾತಿಗಳ ಜಗಳದ ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರತಿಮೆ ನಿರ್ಮಾಣ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ, ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ನಾಮಕರಣ ಮಾಡುವಲ್ಲಿ ಯಾರ ಶ್ರಮ ಇದೆ ಎನ್ನುವ ಇತಿಹಾಸವನ್ನು ಬಿಜೆಪಿ ಮುಖಂಡರು ಮರೆಮಾಚುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ದೂರಿದರು.

ಕೆಂಪೇಗೌಡರ ಹೆಸರು, ಪ್ರತಿಮೆಯನ್ನು ರಾಜಕೀಯಕ್ಕಾಗಿ ಬಳಸಿಕೊಂಡು ಒಕ್ಕಲಿಗ ಸಮುದಾಯ ಸೇರಿದಂತೆ ಕೆಂಪೇಗೌಡರ ಅಭಿಮಾನಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದು
ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್‌ ನಗರ ಬ್ಲಾಕ್‌ ಅಧ್ಯಕ್ಷ ಕೆ.ಪಿ. ಜಗನ್ನಾಥ್‌, ಕೆಪಿಸಿಸಿ ಸದಸ್ಯ ಬಿ.ಜಿ. ಹೇಮಂತರಾಜ್‌, ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರಮೂರ್ತಿ, ಮುಖಂಡರಾದ ನಾರಾಯಣಗೌಡ, ರಾಜಣ್ಣ, ಆರೂಢಿ ಹರೀಶ್, ಶ್ರೀನಿವಾಸ್‌ ರೆಡ್ಡಿ, ಅಶೋಕ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.