ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ

ಮುಖಂಡ ಮುನಿನರಸಿಂಹಯ್ಯ ವಿಶ್ವಾಸ
Last Updated 29 ನವೆಂಬರ್ 2019, 13:00 IST
ಅಕ್ಷರ ಗಾತ್ರ

ವಿಜಯಪುರ: ‘ಉಪಚುನಾವಣೆ ನಡೆಯುವ 15 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವುದು ಖಚಿತ’ ಎಂದು ಕಾಂಗ್ರೆಸ್ ನಾಯಕ ಮುನಿನರಸಿಂಹಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಪಕ್ಷಕ್ಕೆ ತಳಮಟ್ಟದ ಕಾರ್ಯಕರ್ತರಲ್ಲಿನ ಪ್ರಾಮಾಣಿಕತೆಯೇ ಬಲ. ಕಾಂಗ್ರೆಸ್ ಮುಕ್ತ ಭಾರತದ ಕನಸು ಕಾಣುತ್ತಿರುವ ಬಿಜೆಪಿ; ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರಿಂದ ರಾಜೀನಾಮೆ ಕೊಡಿಸುವ ಮೂಲಕ ಉಪಚುನಾವಣೆಗೆ ಕಾರಣವಾಗಿದೆ. ಆ ಮೂಲಕ ಜನರ ಹಣ ಪೋಲು ಮಾಡುವುದರ ಜೊತೆಗೆ ವಿಶ್ವಾಸ ಕಳೆದುಕೊಂಡಿದೆ’ ಎಂದು ದೂರಿದರು.

‘ರಾಜ್ಯದ ರಾಜಕೀಯ ಇತಿಹಾಸದಲ್ಲಿ ಆಪರೇಷನ್ ಮೂಲಕ ಶಾಸಕರನ್ನು ಖರೀದಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿರುವ ಬಿಜೆಪಿ ಇಂದು ರಾಜ್ಯವನ್ನು ಅಭಿವೃದ್ಧಿಯಿಂದ ವಂಚಿತವಾಗುವಂತೆ ಮಾಡಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇವರಾಜ ಅರಸು ಅವರಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರು’ ಎಂದರು.

‘ನಮ್ಮ ಕ್ಷೇತ್ರ ಅಭಿವೃದ್ಧಿಯಾಗಲಿಲ್ಲ, ಅದಕ್ಕೆ ರಾಜೀನಾಮೆ ನೀಡಿದ್ದೇವೆ ಎಂದು ಹೇಳುವ ಅನರ್ಹ ಶಾಸಕರ ಮಾತನ್ನು ಜನ ನಂಬುವುದಿಲ್ಲ. ಜನರಿಗೆ ಸತ್ಯ ಗೊತ್ತಿದೆ. ಮೊದಲು ಅನರ್ಹ ಶಾಸಕರಿಗೂ ನಮಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಈಗ ಅನರ್ಹ ಶಾಸಕರಿಂದ ನಮ್ಮ ಸರ್ಕಾರ ರಚನೆಯಾಗಿದೆ ಎನ್ನುತ್ತಿದ್ದಾರೆ. ಇದೆಲ್ಲ ನಾಟಕ ಎಂದು ಜನರಿಗೆ ಗೊತ್ತಿದೆ’ ಎಂದರು.

‘ಹೊಸಕೋಟೆ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳ ಅಭಿವೃದ್ಧಿಗಾಗಿ ಹಿಂದೆ ಸಂಸದರಾಗಿದ್ದ ಎಂ.ವೀರಪ್ಪ ಮೊಯಿಲಿ ಅವರು ಹಲವು ಜನಪರ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ನಾನು ಶಾಸಕನಾಗಿದ್ದಾಗಲೂ ಸೂಲಿಬೆಲೆ ಅಭಿವೃದ್ಧಿ ಮಾಡಿದ್ದು, ಅದರ ಬಗ್ಗೆ ಜನರಲ್ಲಿ ವಿಶ್ವಾಸವಿದೆ. ಆದ್ದರಿಂದ ಹೊಸಕೋಟೆ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳೂ ಸೇರಿ 15 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ’ ಎಂದರು.

‘ರಾಜೀನಾಮೆ ನೀಡಿ ಬೇರೆ ಪಕ್ಷಗಳಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ದೇಶದ ಇತರ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಿದಂತೆ ರಾಜ್ಯದಲ್ಲೂ ಪಾಠ ಕಲಿಸಲಿದ್ದಾರೆ. ಅನರ್ಹರು ಖಾಯಂ ಅನರ್ಹರಾಗಲಿದ್ದಾರೆ’‍ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT