ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಗುರುತಿಸುವ ಕಾರ್ಯ ಆರಂಭ

ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ನಿವೇಶನ ಭಾಗ್ಯ; ಸಭೆಯಲ್ಲಿ ಶಾಸಕ ಕೆ.ಎಸ್.ಮಂಜುನಾಥಗೌಡ ಹೇಳಿಕೆ
Last Updated 27 ಮಾರ್ಚ್ 2018, 10:02 IST
ಅಕ್ಷರ ಗಾತ್ರ

ಮಾಲೂರು: ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲ್ಲೂಕು ಆಡಳಿತ ಪಟ್ಟಣದ ನಿವೇಶನ ರಹಿತರಿಗೆ ನಿವೇಶನ ನೀಡಲು ಭೂಮಿ ಗುರುತಿಸುವ ಕಾರ್ಯ ಆರಂಭಿಸಿದ್ದು, ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ನಿವೇಶನ ನೀಡಲಾಗುವುದು ಎಂದು ಶಾಸಕ ಕೆ.ಎಸ್.ಮಂಜುನಾಥಗೌಡ ತಿಳಿಸಿದರು.

ಪಟ್ಟಣದ ಶ್ರೀರಂಗಂ ಕಲ್ಯಾಣ ಮಂದಿರದಲ್ಲಿ ಇತ್ತೀಚೆಗೆ ಪುರಸಭೆಯಿಂದ ಹಮ್ಮಿಕೊಂಡಿದ್ದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಆರ್ಹ ಫಲಾನುಭವಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ 15 ವರ್ಷಗಳ ಹಿಂದೆ ನಿವೇಶನ ರಹಿತರಿಂದ ಅರ್ಜಿ ಸ್ವಿಕರಿಸಿದ್ದ ಪುರಸಭೆ ನಿವೇಶನ ರಹಿತರಿಂದ ತಲಾ ₹ 5 ಸಾವಿರ, ಪರಿಶಿಷ್ಟ ಜಾತಿ ಮತ್ತು ವರ್ಗ ದವರಿಂದ ತಲಾ ₹ 2.500 ಪಡೆಯಲಾಗಿತ್ತು. ಒಟ್ಟು 1373 ಮಂದಿ ಆಯ್ಕೆ ಮಾಡಲಾಗಿತ್ತು. ಇದಕ್ಕಾಗಿ ಪುರಸಭೆಯಿಂದ 16 ಎಕರೆ ಭೂಮಿ ಖರೀದಿಸಲಾಗಿತ್ತು ಎಂದು ವಿವರಿಸಿದರು.

2012–13ರಲ್ಲಿ ಅಂದಿನ ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರ ಸೂಚನೆಯಂತೆ ₹ 5 ಸಾವಿರದ ಜತೆಗೆ 35 ಸಾವಿರ ಹಣವನ್ನು ಪುರಸಭೆ ಫಲಾನುಭವಿಗಳಿಂದ ಪಡೆಯಲಾಗಿದ್ದು, ಇದರಲ್ಲಿ 2 ಎಕರೆ ಭೂಮಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗಿದೆ. ಒಟ್ಟು 1373 ಫಲಾನುಭವಿಗಳಿಗೆ ನಿವೇಶನ ನೀಡಲು ಭೂಮಿಯ ಕೊರತೆ ಉಂಟಾಗಿದೆ ಎಂದರು.

ಪ್ರಸ್ತುತ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಈಗಾಗಲೇ ಕಂದಾಯ ಅಧಿಕಾರಿಗಳು 3 ಎಕರೆ ಭೂಮಿ ಗುರುತಿಸಿದ್ದು, ಉಳಿದ 13 ಎಕರೆ ಭೂಮಿಯನ್ನು ಪುರಸಭೆಯಿಂದ ಖರೀದಿಸಲಾಗುವುದು. ಶೀಘ್ರವಾಗಿ ಉತ್ತಮ ಬಡಾವಣೆಗಳನ್ನಾಗಿ ನಿರ್ಮಿಸಿ ಫಲಾನುಭವಿಗಳಿಗೆ ನೀಡಲಾಗುವುದು ಎಂದು ತಿಳಿಸಿದರು.

ಪುರಸಭಾಧ್ಯಕ್ಷ ಎಂ.ರಾಮಮೂರ್ತಿ ಮಾತನಾಡಿ, ಜಿಲ್ಲಾಧಿಕಾರಿಗಳ ಸೂಚನೆಯಂತೆ ನಿವೇಶನ ರಹಿತ ಫಲಾನುಭವಿಗಳ ಸಭೆ ಕರೆಯಲಾಗಿದೆ. ಅವರಿಂದ ಸಲಹೆ ಮತ್ತು ಸೂಚನೆ ಪಡೆಯುವ ಮೂಲಕ ಶೀಘ್ರವಾಗಿ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದರು.

ಪುರಸಭೆ ಉಪಾಧ್ಯಕ್ಷೆ ಗೀತಮ್ಮ, ಸದಸ್ಯರಾದ ಸಿ.ಪಿ.ನಾಗರಾಜ್, ಎಂ.ವಿ.ವೇಮನ್ನ, ವಿ.ಮಂಜುನಾಥ್, ಗೀತಮ್ಮ, ಸುಲೋಚನ, ಭಾರತಮ್ಮ, ಮುಖ್ಯಾಧಿಕಾರಿ ಗೀತಾ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋದಮ್ಮ, ಸದಸ್ಯರಾದ ಚಿನ್ನಸ್ವಾಮಿಗೌಡ , ಶ್ರೀನಿವಾಸ್ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತ್ರಿವರ್ಣ, ಉಪಾಧ್ಯಕ್ಷೆ ನಾಗವೇಣಿ ಇದ್ದರು.

**

ಚುನಾವಣೆ ಗಿಮಿಕ್: ಸದಸ್ಯರ ಧರಣಿ

ಶಾಸಕರು ಚುನಾವಣೆ ಸಮಯದಲ್ಲಿ ನಿವೇಶನ ನೀಡುವುದಾಗಿ ಚುನಾವಣೆ ಗಿಮಿಕ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯ ಸಿ.ಲಕ್ಷ್ಮಿನಾರಾಯಣ್ ಮತ್ತು ಸಿ.ಪಿ.ವೆಂಕಟೇಶ್ ಕಲ್ಯಾಣ ಮಂದಿರದ ಬಳಿ ಪ್ರತಿಭಟನೆ ನಡೆಸಿದರು.

ಶಾಸಕ ಕೆ.ಎಸ್.ಮಂಜುನಾಥಗೌಡ ಮತ್ತು ಪುರಸಭಾಧ್ಯಕ್ಷ ಎಂ.ರಾಮಮೂರ್ತಿ ನಿವೇಶನ ರಹಿತ ಫಲಾನುಭವಿಗಳನ್ನು ನಿವೇಶನಗಳ ಹಕ್ಕು ಪತ್ರ ನೀಡುವುದಾಗಿ ನಂಬಿಸಿ ಸಭೆಗೆ ಆಹ್ವಾನಿಸಿದ್ದು, ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ದೂರಿದರು.

ಫಲಾನುಭವಿಗಳಿಗೆ ಹಕ್ಕುಪತ್ರ ನೀಡದಿದ್ದರೆ ಪುರಸಭೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪುರಸಭೆ ಸದಸ್ಯರಾದ ಎ.ಅಶ್ವತ್ಥರೆಡ್ಡಿ, ರಮೇಶ್, ಸಂಪತ್, ಅಪ್ಸರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT