ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮನ್ವಯದಿಂದ ಕಾಮಗಾರಿ: ಅಧಿಕಾರಿಗಳಿಗೆ ಸೂಚನೆ

ಬಿಬಿಎಂಪಿ ಯಲಹಂಕ ವಲಯ: ಕಾಮಗಾರಿ ಪ್ರಗತಿ ಪರಿಶೀಲನೆ
Last Updated 16 ನವೆಂಬರ್ 2021, 20:41 IST
ಅಕ್ಷರ ಗಾತ್ರ

ಯಲಹಂಕ: ಬಿಬಿಎಂಪಿ ಯಲಹಂಕ ವಲಯ ವ್ಯಾಪ್ತಿಗೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು, ಮಳೆಯಿಂದ ರಸ್ತೆಹಾನಿ ಮತ್ತು ಅದರ ಕಾಮಗಾರಿ, ತ್ಯಾಜ್ಯ ವಿಂಗಡಣೆ ಸೇರಿದಂತೆ ವಿವಿಧ ಕಾಮಗಾರಿಗಳ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳೊಂದಿಗೆ ಮಿನಿ ವಿಧಾನಸೌಧದಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಮಳೆಗಾಲದಲ್ಲಿ ಬಿಬಿಎಂಪಿ ವಾರ್ಡ್‌ ಎಂಜಿನಿಯರ್‌ಗಳು ಹಾಗೂ ಜಲಮಂಡಳಿ ಅಧಿಕಾರಿಗಳು ಸಮನ್ವಯ ಮಾಡಿಕೊಂಡು ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯಕ್ರಮಗಳನ್ನು ಕೈಗೊಳ್ಳಬೇಕು. ಮನೆಗಳಿಗೆ ನೀರುನುಗ್ಗುವ ಮತ್ತು ರಸ್ತೆಗಳಲ್ಲಿ ನೀರು ಸಂಗ್ರಹವಾಗುವ ಸ್ಥಳಗಳನ್ನು ಗುರುತಿಸಿ ಕೂಡಲೇ ಸಮಸ್ಯೆ ಬಗೆಹರಿಸಬೇಕು. ರಾಜಕಾಲುವೆಗೆ ಸಂಪರ್ಕ ಕಲ್ಪಿಸುವ ಕಾಲುವೆಗಳಲ್ಲಿ ಹೂಳನ್ನು ತೆರವುಮಾಡಿ ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು. ರಸ್ತೆಬದಿಯ ಶೋಲ್ಡರ್ ಡ್ರೈನ್‌ಗಳನ್ನು ಸ್ವಚ್ಛವಾಗಿ ರುವಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

110 ಹಳ್ಳಿಗಳಿಗೆ ಸಂಬಂಧಿಸಿದಂತೆ 16 ಹಳ್ಳಿಗಳು ಈ ವ್ಯಾಪ್ತಿಗೆ ಸೇರಿದ್ದು, ಜಲಮಂಡಳಿಯಿಂದ ನಡೆಯುತ್ತಿರುವ ಒಳಚರಂಡಿ, ನೀರು ಮತ್ತು ಕಾವೇರಿ 5ನೇಹಂತದ ಪೈಪ್‌ಲೈನ್‌ ಕಾಮಗಾರಿ ಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಪಟ್ಟಿಯನ್ನು ನೀಡಬೇಕು. ಆ ಬಳಿಕ ಪುನಶ್ಚೇತನ ಕಾಮಕಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಲಯ ವ್ಯಾಪ್ತಿಗೆ ಬರುವ ಪ್ರಮುಖ ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು. ಥಣಿಸಂದ್ರ ಮುಖ್ಯರಸ್ತೆಯ ರಾಷ್ಟ್ರೋತ್ಥಾನ ಶಾಲೆಯ ಬಳಿ ಮೇಲ್ಸೇತುವೆ ಸಮೀಪ ಕೆಪಿಟಿಸಿಎಲ್‌ನಿಂದ 66 ಕೆವಿ ವಿದ್ಯುತ್ ಮಾರ್ಗದ ಕಾರ್ಯ ಹಾಗೂ ಕಾವೇರಿ 5ನೇ ಹಂತದ ನೀರಿನ ಮಾರ್ಗದ ಕಾಮಗಾರಿ ಇನ್ನೂ ಮುಗಿಯದ ಕಾರಣ, ಸರ್ವಿಸ್ ರಸ್ತೆ ತೀರಾ ಹದಗೆಟ್ಟಿದೆ. ಈ ದಿಸೆಯಲ್ಲಿ ಕೂಡಲೇ ರಸ್ತೆ ದುರಸ್ತಿಕಾರ್ಯ ಕೈಗೊಂಡು ಸುಗಮಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.

ಕಸ ವಿಲೇವಾರಿ-ನಿಗಾವಹಿಸಿ: ಒಣ ಮತ್ತು ಹಸಿ ಕಸ ಸರಿಯಾಗಿ ವಿಂಗಡಣೆ ಆಗುವಂತೆ ನೋಡಿಕೊಳ್ಳಬೇಕು. ಕಸ ವಿಲೇವಾರಿ ಜಾಗಗಳನ್ನು ಗುರುತಿಸಿ, ಕೂಡಲೇ ತೆರವುಗೊಳಿಸಿ ಕಸ ಸುರಿಯುವ ಸ್ಥಳಗಳು ನಿರ್ಮಾಣವಾಗದಂತೆ ಮಾಡಬೇಕು. ಎಲ್ಲ ಕೆರೆಗಳನ್ನು ಸರಿಯಾಗಿ ನಿರ್ವಹಣೆ ಮಾಡುವ ಮೂಲಕ ಸರಾಗವಾಗಿ ಕೆರೆಗಳಿಗೆ ನೀರು ಹರಿದುಹೋಗುವಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಶಾಸಕ ಎಸ್.ಆರ್.ವಿಶ್ವನಾಥ್ ಅವರು, ‘ಒಳಚರಂಡಿ ಮತ್ತು ನೀರಿನ ಮಾರ್ಗ, ಬೆಸ್ಕಾಂ ನೆಲದಡಿ ಕೇಬಲ್ ಅಳವಡಿಕೆ, ಗ್ಯಾಸ್ ಲೈನ್, ಒಎಫ್‌ಸಿ ಕೇಬಲ್ ಅಳವಡಿಕೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ರಸ್ತೆ ಪುನಶ್ಚೇತನ ಕಾರ್ಯವನ್ನು ಕೂಡಲೇ ಮುಗಿಸಬೇಕು. 110 ಹಳ್ಳಿಗಳಿಗೆ ಒಳಚರಂಡಿ ಮತ್ತು ನೀರಿನ ಪೈಪ್‌ಲೈನ್‌ ಕಾಮಗಾರಿ ವಿಳಂಬವಾಗಿದ್ದು, ರಸ್ತೆ ದುರಸ್ತಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಜಲಮಂಡಳಿ ಅಧಿಕಾರಿಗಳು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದರು.

ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ಬಿಬಿಎಂಪಿ ವಲಯ ಆಯುಕ್ತ ಕೆ.ಎ. ದಯಾನಂದ್, ಯಲಹಂಕ ವಲಯದ ಜಂಟಿ ಆಯುಕ್ತೆ ಪಿ.ವಿ.ಪೂರ್ಣಿಮಾ, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್ ಖಾನ್, ಪ್ರಹ್ಲಾದ್, ಸುಗುಣಾ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT