ಬುಧವಾರ, ನವೆಂಬರ್ 13, 2019
18 °C
ಕೆವಿನ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮಸಕಿ ಯಾಶಿಮಾ ಸಾನ್

ಸಾಮಾಜಿಕ ಹೊಣೆಗಾರಿಕೆ ಜಾಗೃತಿ ಅನಿವಾರ್ಯ

Published:
Updated:
Prajavani

ದೇವನಹಳ್ಳಿ: ಸಾಮಾಜಿಕ ಹೊಣೆಗಾರಿಕೆ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕೆವಿನ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮಸಕಿ ಯಾಶಿಮಾ ಸಾನ್ ಹೇಳಿದರು.

ಇಲ್ಲಿನ ಸುಣ್ಣಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೆವಿನ್ ಕಂಪನಿ ವತಿಯಿಂದ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ₹38 ಲಕ್ಷ ವೆಚ್ಚದಲ್ಲಿ ಎರಡಂತಸ್ತಿನ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ನಡೆದ ಭೂಮಿ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.

‘ಯಾವುದೇ ಒಂದು ದೇಶ ಶಿಕ್ಷಣದಲ್ಲಿ ಪ್ರಗತಿಯಾದರೆ ಮಾತ್ರ ಭವಿಷ್ಯದ ಅಭಿವೃದ್ಧಿಗೆ ಪೂರಕವಾಗಲಿದೆ. ಭಾರತ ಹಳ್ಳಿಗಳ ದೇಶ ಎಂಬುದು ನಮಗೂ ಗೊತ್ತಿದೆ, ಕಂಪನಿಯ ಲಾಭಾಂಶದ ಶೇ 2 ರಷ್ಟು ಹಣವನ್ನು ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಸರ್ಕಾರಿ ಶಾಲೆಗಳ ಕಟ್ಟಡಗಳ ಕಾಮಗಾರಿ ಬಳಕೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ’ ಎಂದು ಹೇಳಿದರು.

‘ದೇವಾಲಯ, ಮಂದಿರ, ಚರ್ಚ್ ಗಿಂತ ಶಾಲೆಗಳು ಬೇಕು, ಗುಣಾತ್ಮಕ ಶಿಕ್ಷಣಕ್ಕೆ ಶೈಕ್ಷಣಿಕ ವಾತಾವರಣ ನಿರ್ಮಿಸಿ ಪೂರಕ ಮೂಲ ಸೌಲಭ್ಯ ನೀಡಬೇಕು, ಮಕ್ಕಳ ಶಿಕ್ಷಣದ ಹಕ್ಕು ಮೊಟಕುಗೊಳಿಸಬಾರದು, ಮಕ್ಕಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಿದಾಗ ಗುಣಮಟ್ಟದ ಫಲಿತಾಂಶ ಪಡೆಯಲು ಸಹಕಾರಿಯಾಗಲಿದೆ ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್ ಮಾತನಾಡಿ, ತಾಲ್ಲೂಕಿನಲ್ಲಿ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ 17 ಸರ್ಕಾರಿ ಶಾಲೆಗಳನ್ನು ಗುರುತಿಸಿ ಈಗಾಗಲೇ 15 ಶಾಲೆಗಳ ಕಾಮಗಾರಿ ಪೂರ್ಣಗೊಂಡು ಕಾರ್ಯ ನಿರ್ವಹಿಸುತ್ತಿವೆ. ದೇವನಹಳ್ಳಿ ಕೊರಚರ ಪಾಳ್ಯ ಮತ್ತು ಕನ್ನಮಂಗಲ ಶಾಲೆ ಕಾಮಗಾರಿ ನಡೆಯುತ್ತಿದೆ ಎಂದರು.

20ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ವಿಮಾನ ನಿಲ್ದಾಣ ಮತ್ತು ಇತರೆ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಎಲ್ಲ ಕಂಪನಿಗಳ ಮಾಲೀಕರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ ಎಂದು ಹೇಳಿದರು.

ವಾರ್ಷಿಕ ಕನಿಷ್ಠ 10 ಸರ್ಕಾರಿ ಶಾಲೆಗಳು ಹೈಟೆಕ್ ಮಾದರಿಯಲ್ಲಿ ರೂಪಗೊಂಡು ಉತ್ತಮ ಶಿಕ್ಷಣ ಸೌಲಭ್ಯ ಪಡೆದುಕೊಂಡು ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ಜಾಗೃತಿ ಸಮಿತಿ ಉಪಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಇದೇ ಕಂಪನಿ ಈ ಹಿಂದೆ ಗ್ರಾಮದಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿಕೊಟ್ಟಿದೆ. ಶಿTiಲಗೊಂಡಿರುವ ಶಾಲಾ ಕಟ್ಟಡವನ್ನು ಕಂಡು ಗ್ರಾಮದ ಮುಖಂಡರ ನಿಯೋಗದೊಂದಿಗೆ ಕಂಪನಿಗೆ ತೆರಳಿ ಮನವಿ ಮಾಡಿದಾಗ ಸ್ಪಂದಿಸಿ ಕಟ್ಟಡ ಕಾಮಗಾರಿಗೆ ಮುಂದಾಗಿದೆ. ಕಂಪನಿಗೆ ಗ್ರಾಮಸ್ಥರು ಅಭಾರಿಯಾಗಿದ್ದಾರೆ ಎಂದು ಹೇಳಿದರು.

ಕಂಪನಿ ಮುಖ್ಯಸ್ಥ ಟೊಮಡೋ ಸಾನು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷೆ ಪಿಳ್ಳಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ, ಗ್ರಾಮ ಪಂಚಾಯಿತಿ ಸದಸ್ಯ ಮರಿಯಪ್ಪ ಇದ್ದರು.

ಪ್ರತಿಕ್ರಿಯಿಸಿ (+)