ವಿ.ಎಸ್.ಉಗ್ರಪ್ಪ ಚರಾಸ್ತಿ ಮುಟ್ಟುಗೋಲಿಗೆ ನ್ಯಾಯಾಲಯ ಆದೇಶ

7

ವಿ.ಎಸ್.ಉಗ್ರಪ್ಪ ಚರಾಸ್ತಿ ಮುಟ್ಟುಗೋಲಿಗೆ ನ್ಯಾಯಾಲಯ ಆದೇಶ

Published:
Updated:

ದೊಡ್ಡಬಳ್ಳಾಪುರ: ರಸ್ತೆ ಅಪಘಾತದ ಗಾಯಾಳುವಿಗೆ ಪರಿಹಾರ ಮತ್ತು ಬಡ್ಡಿ ಮೊತ್ತ ಪಾವತಿಸದ ಕಾಂಗ್ರೆಸ್‌ ಮುಖಂಡ ವಿ.ಎಸ್.ಉಗ್ರಪ್ಪ ಅವರಿಗೆ ಸೇರಿರುವ ಚರಾಸ್ತಿಯನ್ನು ಜಪ್ತಿ ಮಾಡಿಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿದೆ.

‘ಇಲ್ಲಿನ ಬೆಂಗಳೂರು ಹೆದ್ದಾರಿಯ ಮಮತಾ ಪಟ್ರೋಲ್ ಬಂಕ್ ಸಮೀಪ 2010ರಲ್ಲಿ ನಡೆದಿದ್ದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಕಲಾಪಕ್ಕೆ ಗೈರು ಹಾಜರಾಗಿರುವ ಹಾಗೂ ನ್ಯಾಯಾಲಯದ ಆದೇಶದಂತೆ ಗಾಯಾಳು ಬಾಲಾಜಿ ಎಂಬುವವರಿಗೆ ₹67,500 ಪರಿಹಾರ ಹಾಗೂ ಇದರ ಬಡ್ಡಿ ಹಣ ₹26,325 ಗಳನ್ನು ಪಾವತಿಸದ ಕಾರಣ ಈ ಆದೇಶ ನೀಡಲಾಗಿದೆ. ನಗರದ 4ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್ ಅವರು ಆದೇಶ ನೀಡಿದ್ದಾರೆ’ ಎಂದು ಗಾಯಾಳು ಬಾಲಾಜಿ ಪರ ವಕೀಲ ಆನಂದ್ ಕುಮಾರ್ ತಿಳಿಸಿದರು.

ಅವರು ಈ ಬಗ್ಗೆ ಮಾಹಿತಿ ನೀಡಿ, ‘ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರೂ ಆದ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಅವರು ಸಂಚಾರ ಮಾಡುತ್ತಿದ್ದ ಕಾರು, ಬಾಲಾಜಿ ಅವರ ಸ್ಕೂಟರ್ ಗೆ ಡಿಕ್ಕಿ ಹೊಡೆದಿತ್ತು. ಇದಾದ ನಂತರ ಗಾಯಾಳು ಬಾಲಾಜಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಚೇತರಿಸಿಕೊಂಡಿದ್ದಾರೆ’ ಎಂದರು.

ಪ್ರಕರಣದ ವಿಚಾರಣೆ ನಡೆದು, 2017 ಅಕ್ಟೋಬರ್‌ನಲ್ಲಿ ನ್ಯಾಯಾಲಯವು ₹67,500ವನ್ನು ಬಾಲಾಜಿ ಅವರಿಗೆ ಪಾವತಿಸಲು ಆದೇಶ ನೀಡಿತ್ತು. ಈ ಆದೇಶವನ್ನು ಪಾಲಿದ ವಿ.ಎಸ್.ಉಗ್ರಪ್ಪ ಅವರು ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದರಿಂದ ನ್ಯಾಯಾಲಯವು ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶ ನೀಡಿದೆ.

ನ್ಯಾಯಾಲಯಕ್ಕೆ ಗೌರವ ನೀಡಲಿ: ‘ವಿ.ಎಸ್.ಉಗ್ರಪ್ಪ ಅವರು ಸ್ವತಃ ವಕೀಲರಾಗಿದ್ದು, ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿರುವುದು, ನ್ಯಾಯಾಲಯಕ್ಕೆ ಗೈರು ಹಾಜರಾಗಿರುವುದು ಅವರು ನ್ಯಾಯಾಲಯಕ್ಕೆ ತೋರಿರುವ ಅಗೌರವ ಆಗಿದೆ’ ಎಂದು ಬಿಜೆಪಿ ಜಿಲ್ಲಾ ವಕ್ತಾರ ಅಮರ್ ತಿಳಿಸಿದ್ದಾರೆ.

‘ಅವರು ಪ್ರಯಾಣಿಸುತ್ತಿದ್ದ ವಾಹನ ಅಪಘಾತಕ್ಕೆ ಸಿಲುಕಿತ್ತು. ಅದರ ಜವಾಬ್ದಾರಿಯನ್ನು ಹೊರಲು ಸಿದ್ಧರಿಲ್ಲದವರಿಗೆ ಸಾರ್ವಜನಿಕ ಜೀವನದಲ್ಲಿ ಮುಂದುವರೆಯುವ ಯಾವುದೇ ನೈತಿಕತೆ ಇಲ್ಲ. ನ್ಯಾಯಾಲಯದ ಆದೇಶವನ್ನು ಗೌರವಿಸುವುದನ್ನು ಮೊದಲು ಕಲಿಯಬೇಕು’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !