ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ: ವಿಮಾನ ನಿಲ್ದಾಣದಲ್ಲಿ ಜನಜಂಗುಳಿ

21 ಮಂದಿಗೆ ಕೋವಿಡ್ ಸೋಂಕು
Last Updated 9 ಜನವರಿ 2022, 5:33 IST
ಅಕ್ಷರ ಗಾತ್ರ

ದೇವನಹಳ್ಳಿ: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜನರು ಬೇರೆ ರಾಜ್ಯಗಳತ್ತ ತೆರಳಿದ ದೃಶ್ಯಗಳು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಕಂಡುಬಂತು.

ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕೋವಿಡ್ ಸೋಂಕು ಹಾಗೂ ಓಮೈಕ್ರಾನ್ ಸೋಂಕಿನ ಭೀತಿಯ ನಡುವೆ, ಜಾರಿಗೊಂಡಿರುವ ವಾರಾಂತ್ಯದ ಕರ್ಫ್ಯೂ ಮುಂದಿನ ದಿನಗಳಲ್ಲಿ ಲಾಕ್‌ಡೌನ್ ರೂಪ ಪಡೆದುಕೊಂಡರೆ ಬೇರೆ ರಾಜ್ಯಗಳತ್ತ ತೆರಳಲು ಕಷ್ಟವಾಗಬಹುದು ಎನ್ನುವ ಕಾರಣದಿಂದಾಗಿ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಗರ ಸೇರಿದಂತೆ ವಿವಿಧ ಕಡೆಗಳಿಂದ ಲಗೇಜುಗಳ ಸಮೇತವಾಗಿ ಬಂದಿದ್ದ ಪ್ರಯಾಣಿಕರು, ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ತರಾತುರಿಯಲ್ಲಿ ಟರ್ಮಿನಲ್‌ಗಳಿಗೆ ತೆರಳಲು ಹೊರಟಿದ್ದರು. ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ.

ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಾರದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಆಗಮನದ ದ್ವಾರ ಬಿಕೋ ಎನ್ನುತ್ತಿತ್ತು. ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಕೆಲವು ಮಂದಿ ಪ್ರಯಾಣಿಕರು ಮಾತ್ರ ವಿಮಾನಗಳಲ್ಲಿ ಬಂದಿದ್ದರು.

ಪ್ರಯಾಣಿಕರೊಬ್ಬರು ಮಾತನಾಡಿ, ಕಳೆದ ಎರಡು ಅಲೆಗಳಲ್ಲೂ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದ ನಂತರ, ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದಾಗ ಇದ್ದಕಿದ್ದಂತೆ ಲಾಕ್‌ಡೌನ್ ಜಾರಿಗೊಳಿಸಿದರು. ಆ ಸಮಯದಲ್ಲಿ ಪ್ರಯಾಣಕ್ಕೆ ತೊಂದರೆ ಅನುಭವಿಸುವಂತಾಯಿತು. ಅದಕ್ಕೆ ಈಗ ಮೊದಲೇ ಹೊರಟಿದ್ದೇವೆ ಎಂದರು.

21 ಮಂದಿಗೆ ಕೋವಿಡ್ ಸೋಂಕು ದೃಢ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಬಂದಿದ್ದ ಪ್ರಯಾಣಿಕರ ಪೈಕಿ 21 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಪ್ಯಾರಿಸ್‌ನಿಂದ ಬಂದಿರುವ 7 ಪ್ರಯಾಣಿಕರಿಗೆ, ದೊಹಾದಿಂದ ಬಂದಿರುವ 7 ಜನರಿಗೆ, ಕುವೈತ್‌ನಿಂದ ಬಂದಿರುವ 2, ದುಬೈನಿಂದ ಬಂದಿರುವ 1, ಫ್ರಾಂಕ್‌ಫರ್ಟ್ ನಿಂದ ಬಂದಿರುವ 1,ಶಾರ್ಜಾದಿಂದ ಬಂದಿರುವ ಒಬ್ಬರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಎಲ್ಲಾ ಸೋಂಕಿತರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT