ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಮಾರ್ಗಸೂಚಿ ಉಲ್ಲಂಘನೆ ಕೊರೊನಾ ಸೋಂಕು ಹೆಚ್ಚಳ

Last Updated 22 ಅಕ್ಟೋಬರ್ 2020, 4:12 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನಲ್ಲಿ ಕೋವಿಡ್–19 ಮಾರ್ಗಸೂಚಿ ಪಾಲನೆಯಾಗದಿರುವ ಪರಿಣಾಮ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.

ಐದಾರು ತಿಂಗಳ ಹಿಂದೆ ಒಂದಿಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಬರಲು ಜನರು ಭಯಪಡುತ್ತಿದ್ದರು. ಈಗ ಮಾರ್ಗಸೂಚಿ ‍ಪಾಲಿಸುತ್ತಿಲ್ಲ. ಯಾವುದೇ ಭಯ ಇಲ್ಲದೆ ನಿರ್ಭಯವಾಗಿ ಓಡಾಡುತ್ತಾ ದೈನಂದಿನ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಜನರ ಈ ವರ್ತನೆಯು ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಮಾಸ್ಕ್‌ ಧರಿಸದಿದ್ದರೆ ಪೊಲೀಸರು ದಂಡ ವಸೂಲಿ ಮಾಡುತ್ತಾರೆ ಎಂಬ ಏಕೈಕ ಕಾರಣದಿಂದ ಬೆರಳೆಣಿಕೆಯಷ್ಟು ಮಂದಿ ಮಾಸ್ಕ್‌ ಧರಿಸುತ್ತಾರೆ. ಅದನ್ನು
ಹೊರತುಪಡಿಸಿದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು; ಎಲ್ಲೆಂದರಲ್ಲಿ ಉಗುಳಬಾರದು ಎಂಬ ಸಾಮಾಜಿಕ ಪ್ರಜ್ಞೆ ಕಣ್ಮರೆಯಾಗಿದೆ.

ಪ್ರತಿದಿನ ವ್ಯಾಪಾರ ವಹಿವಾಟು ನಡೆಸುವ ಬಹುತೇಕ ಹೋಟೆಲ್, ಕಿರಾಣಿ ಅಂಗಡಿ, ಜವಳಿ ಅಂಗಡಿ, ಆಭರಣದ ಅಂಗಡಿಗಳ ಮಾಲೀಕರು ಸ್ಯಾನಿಟೈಜ್ ಮರೆತಿದ್ದಾರೆ. ಬೆರಳೆಣಿಕೆಯಷ್ಟು ಅಂಗಡಿಗಳಲ್ಲಿ ಮಾತ್ರ ಸೋಂಕಿನ ಕಡಿವಾಣಕ್ಕೆ ನಿಯಮ ಪಾಲನೆಯಾಗುತ್ತಿದೆ. ತರಕಾರಿ ಮಾರುಕಟ್ಟೆ, ಸಂತೆ ನಡೆಯುವ ಸಂದರ್ಭದಲ್ಲಿಯೂ ನಾಗರಿಕರು ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಇದರಿಂದ ಸೋಂಕು ಉಲ್ಪಣಿಸುತ್ತಿದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಗ್ರಾಮಾಂತರ ಜಿಲ್ಲೆಯಲ್ಲಿ ಈವರೆಗೆ ಸೋಂಕು ದೃಢಪಟ್ಟ ಪ್ರಕರಣಗಳು 13,606. ಈ ಪೈಕಿ ಬೇರೆ ರಾಜ್ಯ ಮತ್ತು ಹೊರಜಿಲ್ಲೆಯ 822 ಪ್ರಕರಣಗಳೂ ಸೇರಿವೆ. 11,006 ಸೋಂಕಿತರು ಈಗಾಗಲೇ ಗುಣಮುಖರಾಗಿ
ದ್ದಾರೆ. 109 ಸೋಂಕಿತರು ಮರಣ ಹೊಂದಿದ್ದಾರೆ. ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕಿನಲ್ಲಿ ಅತಿಹೆಚ್ಚು ಸೋಂಕಿತರು ಮರಣ ಹೊಂದಿದ್ದಾರೆ.

‘ಅ. 16ರಂದು ಒಂದೇ ದಿನ ಜಿಲ್ಲೆಯಲ್ಲಿ 345 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ ದೇವನಹಳ್ಳಿ ತಾಲ್ಲೂಕಿನ 101 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇದನ್ನು ಅವಲೋಕಿಸಿದರೆ ಸೋಂಕಿನ ವೇಗ ಹೆಚ್ಚುತ್ತಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾ ದೇವಿ.

‘ಸೋಂಕಿಗೆ ಕಡಿವಾಣ ಹಾಕುವುದು ಆರೋಗ್ಯ ಇಲಾಖೆ, ಪುರಸಭೆಯ ಜವಾಬ್ದಾರಿಯಲ್ಲ. ಇದು ಎಲ್ಲರ ಜವಾಬ್ದಾರಿ. ಪ್ರತಿಯೊಬ್ಬರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಎನ್ನುವಂತಿಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಸೋಂಕು ತಡೆ ಸಾಧ್ಯ’ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT