ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗರ್ ಹುಕುಂ ಭೂ ಮಂಜೂರಾತಿ ಸಮಿತಿ ರಚಿಸಿ

ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಎಸ್.ವಿ.ನರಸಪ್ಪ ಒತ್ತಾಯ
Last Updated 28 ಡಿಸೆಂಬರ್ 2019, 14:00 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ರಾಜ್ಯ ಸರ್ಕಾರ ಬಗರ್ ಹುಕುಂ ಭೂ ಮಂಜೂರಾತಿ ಸಮಿತಿಗಳನ್ನು ರಾಜ್ಯಾದ್ಯಂತ ರಚಿಸುವುದರೊಂದಿಗೆ ಬಾಕಿ ಇರುವ ಭೂ ಮಂಜೂರಾತಿ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು’ ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಎಸ್.ವಿ.ನರಸಪ್ಪ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಬಗರ್ ಹುಕುಂ ರೈತರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ಸರ್ಕಾರಕ್ಕೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗಿದೆ. ನಮೂನೆ 53ರಲ್ಲಿ ಅರ್ಜಿ ಸಲ್ಲಿಸಿ ಇದುವರೆಗೆ ಬಾಕಿ ಉಳಿಸಿರುವ ಅರ್ಜಿಗಳನ್ನು ಸರ್ಕಾರವೇ ವಿಸ್ತರಿಸುವ (ಎರಡು ವರ್ಷದ ಒಳಗೆ) ಅವಧಿಯೊಳಗೆ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಿಕೊಡಬೇಕು. ನಮೂನೆ 53ರಲ್ಲಿ ಅರ್ಜಿಗಳನ್ನು ಸಲ್ಲಿಸಿ ಈ ಹಿಂದಿನ ಬಗರ್ ಹುಕುಂ, ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ ಮಂಜೂರಾತಿ ನೀಡಿದ್ದರೂ ಇಂತಹ ಅರ್ಜಿಗಳನ್ನು ಅಧಿಕಾರಿಗಳು ವಿಲೇವಾರಿ ಮಾಡದೆ ತಡೆ ಹಿಡಿದಿದ್ದಾರೆ. ಅವುಗಳನ್ನು ತುರ್ತಾಗಿ ವಿಲೇವಾರಿಗೊಳಿಸಬೇಕು’ ಎಂದರು

‘ಬಗರ್ ಹುಕುಂ ಸಾಗುವಳಿದಾರರು ಸುಮಾರು 40 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದರೂ ಭೂ ಹಕ್ಕುಪತ್ರ ಪಡೆಯಲು ಪಹಣಿಯಲ್ಲಿ ಗೋಮಾಳ ಅಥವಾ ಅರಣ್ಯ ಎಂದು ನಮೂದಾಗಿರುವುದು ಅಡ್ಡಿಯಾಗಿದೆ. ಇವುಗಳ ಜಂಟಿ ಸರ್ವೇಯನ್ನು ತುರ್ತಾಗಿ ನಡೆಸಿ ಪಹಣಿ ತಿದ್ದುಪಡಿಗೊಳಿಸಬೇಕು. ಬಗರ್ ಹುಕುಂ ಸಾಗುವಳಿದಾರರ ಭೂಮಿ ಗುರುತಿಸಬೇಕು’ ಎಂದು ಹೇಳಿದರು.

‘ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಸರ್ಕಾರಿ ಆದೇಶದಂತೆ ಗಣಕೀಕೃತ ರಶೀದಿಯನ್ನು ಸಾಗುವಳಿದಾರರಿಗೆ ನೀಡಬೇಕು. ಅರ್ಜಿ ವಿಲೇವಾರಿಯನ್ನು ಸರ್ಕಾರ ಸಂಪೂರ್ಣ ಗಣಕೀಕೃತಗೊಳಿಸಬೇಕು’ ಎಂದರು.

‘ನಮೂನೆ 57 ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಸಂದರ್ಭದಲ್ಲಿ ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಮತ್ತು ಸರ್ವರ್ ತೊಂದರೆಯಿಂದ ಕೆಲ ನಾಡ ಕಚೇರಿಗಳಲ್ಲಿ ಅರ್ಜಿ ಸ್ವೀಕರಿಸಿರಲಿಲ್ಲ. ಹಾಗಾಗಿ ಕೆಲ ರೈತರು ಅರ್ಜಿ ಸಲ್ಲಿಕೆಯಿಂದ ವಂಚಿತರಾಗಿದ್ದಾರೆ. ಆದ್ದರಿಂದ ಅರ್ಜಿ ಸಲ್ಲಿಸುವ ದಿನಾಂಕವನ್ನು 30 ದಿನಗಳವರೆಗೆ ಹೆಚ್ಚುವರಿಯಾಗಿ ವಿಸ್ತರಿಸಬೇಕು’ ಎಂದರು.

‌‘ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷ ವೇತನ, ಅಂಗವಿಕಲರ ವೇತನ, ವಿಧವಾ ವೇತನ, ಬುದ್ಧಿಮಾಂಧ್ಯರ ವೇತನ 3-4 ತಿಂಗಳ ಸಮಯಕ್ಕೆ ಸರಿಯಾಗಿ ಬಾರದಿರುವುದು ಮತ್ತು ಬಂದಿರುವ ವೇತನವನ್ನು ಕೆಲ ಅಂಚೆ ಕಚೇರಿಗಳಲ್ಲಿ ವಿತರಿಸದಿರುವುದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT