ಶನಿವಾರ, ಜೂನ್ 6, 2020
27 °C
ಮದ್ಯಮಾರಾಟಕ್ಕೆ ಅನುಮತಿ ನೀಡಿದ ಪರಿಣಾಮ

ದೊಡ್ಡಬಳ್ಳಾಪುರ: ಯಥಾಸ್ಥಿತಿಗೆ ಮರಳಿದ ಅಪರಾಧ, ಅಪಘಾತ

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ಮಾರ್ಚ್‌ 25 ರಂದು ಲಾಕ್‌ಡೌನ್‌ ಜಾರಿಯಾದ ನಂತರದ ಒಂದು ವಾರಗಳ ಕಾಲ ಸಣ್ಣಪುಟ್ಟ ಜಗಳ, ಅಪಘಾತ, ಮಹಿಳೆಯರು ಕಾಣೆಯಾಗುತ್ತಿದ್ದ ಪ್ರಕರಣಗಳು ಮಾತ್ರ ದಾಖಲಾಗುತ್ತಿದ್ದವು.

ಲಾಕ್‌ಡೌನ್‌ ಮುಂದುರಿದಂತೆ ಇವೂ ಅಪರೂಪದ ಪ್ರಕರಣಗಳಾಗಿ ಪೊಲೀಸ್‌ ಠಾಣೆಯ ಕಡೆಗೆ ಜನರೇ ಬಾರದಂತಾಗಿತ್ತು. ಆದರೆ ಲಾಕ್‌ಡೌನ್‌ ಜಾರಿಯಲ್ಲಿ ಕೊಂಚ ಸಡಿಲಿಕೆಯಾಗಿ ಮದ್ಯಮಾರಾಟಕ್ಕೆ ಅನುಮತಿ ನೀಡಿದ ನಂತರ ಅಪರಾಧ ಪ್ರಕರಣಗಳು ಮತ್ತೆ ಹಿಂದಿನ ಯಥಾಸ್ಥಿತಿಗೆ ಮರಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 6ರಂದು ಒಂದೇ ದಿನದಲ್ಲಿ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕೊಲೆ, ಅಪಘಾತ, ಜಗಳ, ಕಳವು, ಆತ್ಮಹತ್ಯೆ ಸೇರಿದಂತೆ ಒಟ್ಟು 13, ಮೇ 7 ರಂದು 14 ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳ ಒಂದು ದಿನ ಮೊದಲು, ನಂತರದ ದಿನದಲ್ಲಿ ಎಲ್ಲಾ ರೀತಿಯ ಅಪರಾಧ ಪ್ರಕರಣಗಳು ಹೆಚ್ಚು. ಹೀಗಾಗಿಯೇ ಈ ಎರಡು ದಿನಗಳ ಕಾಲ ರಾತ್ರಿ ಗಸ್ತುಗಳನ್ನು ಸಹಜವಾಗಿಯೇ ಹೆಚ್ಚಿಸಲಾಗಿರುತ್ತದೆ. ಇಷ್ಟಾಗಿಯೂ ಸಹ ಅಪರಾಧಗಳು ನಡೆದೇ ಹೋಗುತ್ತವೆ ಎನ್ನುತ್ತಾರೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಗೃಹ ಹಿಂಸೆಯ ಪ್ರಮಾಣವೂ ಹೆಚ್ಚಾಗಿದೆ. ಆದರೆ ಬಹುತೇಕ ಪ್ರಕರಣಗಳು ಠಾಣೆಯವರೆಗೆ ಬರುವುದಿಲ್ಲ. ಮಹಿಳೆಯರು ಮೌನವಾಗಿ ನೋವು ನುಂಗಿಕೊಳ್ಳುತ್ತಿದ್ದಾರೆ. ಆರ್ಥಿಕ ಅಸ್ಥಿರತೆ ಜೊತೆಗೆ ಮದ್ಯ ವ್ಯಸನವೂ ಬದುಕಿಗೆ ಬರೆ ಎಳೆದಿದೆ ಎಂದರು ಅವರು.

ಏಪ್ರಿಲ್‌ ತಿಂಗಳಲ್ಲಿ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಯಿದ್ದ ಕೆಲ ದಿನಗಳಲ್ಲಿ ಇಡೀ ಜಿಲ್ಲೆಯ ಯಾವುದೇ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲೂ ಒಂದೂ ಅಪರಾಧ, ಅಪಘಾತ ಪ್ರಕರಣಗಳೇ ದಾಖಲಾಗಿರಲಿಲ್ಲ. ಇಲಾಖೆಯ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ಮಹತ್ವದ ದಿನಗಳಿವು.

ಲಾಕ್‌ಡೌನ್‌ ಜಾರಿಯಿದ್ದ ಉಳಿದ ದಿನಗಳಲ್ಲೂ ಸಹ ಜೂಜು, ಲಾಕ್‌ಡೌನ್‌ ಉಲ್ಲಂಘನೆಯಂತಹ ಕೆಲವೇ ಸಣ್ಣಪುಟ್ಟ ಪ್ರಕರಣಗಳನ್ನು ಹೊರತುಪಡಿಸಿದರೆ ಕೊಲೆ, ಕಳವು, ಸುಲಿಗೆ, ಅಪಘಾತ, ಜಗಳದಂತಹ ಪ್ರಕರಣಗಲೇ ವರದಿಯಾಗುತ್ತಿರಲಿಲ್ಲ. ಆದರೆ ಮದ್ಯಮಾರಾಟಕ್ಕೆ ಅನುಮತಿ ನೀಡುತ್ತಲೇ ಈ ಹಿಂದಿನ ಸಾಮಾನ್ಯ ದಿನಗಳಲ್ಲಿ 15 ರಿಂದ 20 ವಿವಿಧ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗುತ್ತಿದ್ದವು. ಈಗ ಮತ್ತೆ ಹಿಂದಿನ ಸ್ಥಿತಿಗೆ ಜನರು ಮರಳುತ್ತಿದ್ದಾರೆ ವಿನಃ ಲಾಕ್‌ಡೌನ್‌ ಜಾರಿ ಸಂದರ್ಭದಲ್ಲಿ ತಾವು ಅನುಭವಿಸಿದ ಕಷ್ಟಗಳನ್ನು ನೆನಪು ಮಾಡಿಕೊಂಡು ತಮ್ಮ ದಿನ ನಿತ್ಯದ ಬದುಕಿನಲ್ಲಿ ಯಾವುದೇ ರೀತಿಯ ಬದಲಾವಣೆ, ಪಾಠವನ್ನು ಕಲಿತಿಲ್ಲ ಎನ್ನುವುದೇ ಬೇಸರದ ಸಂಗತಿ ಎನ್ನುತ್ತಾರೆ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು