4
ದೊಡ್ಡಬಳ್ಳಾಪುರ ನಗರದ ಪ್ರಮುಖ ವೃತ್ತಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ

ಅಪರಾಧ ಸಂಖ್ಯೆ ಇಳಿಮುಖ– ಎಸ್‌ಐ

Published:
Updated:
ಕಾರ್ಯಾಗಾರದಲ್ಲಿ ನಗರ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಬಿ.ಕೆ.ಪಾಟೀಲ್‌ ಮಾತನಾಡಿದರು

ದೊಡ್ಡಬಳ್ಳಾಪುರ: ನಗರದ ಕೆಲವು ಪ್ರಮುಖ ವೃತ್ತಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಅಪರಾಧಗಳ ಸಂಖ್ಯೆಗೆ ಒಂದಿಷ್ಟು ಕಡಿವಾಣ ಬಿದ್ದಿದೆ ಎಂದು ನಗರ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಬಿ.ಕೆ. ಪಾಟೀಲ್‌ ಹೇಳಿದರು.

ಭಾನುವಾರ ನಗರದ ಮಹಿಳಾ ಸಮಾಜ ಕಸ್ತೂರಿಬಾ ಶಿಶು ವಿಹಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಕ್ಕಳ ಸಹಾಯವಾಣಿ ವತಿಯಿಂದ ನಡೆದ ‘ಕಿಶೋರಿಯರ ವ್ಯಕ್ತಿತ್ವ ವಿಕಸನ ಕಾರ್ಯಾಗಾರ’ದ ಎರಡನೇ ದಿನದ ವಿಚಾರ ಗೋಷ್ಠಿಯಲ್ಲಿ ‘ಹದಿ ವಯಸ್ಸಿನ ಅಪರಾಧಗಳು’ ಕುರಿತು ಮಾತನಾಡಿದರು.

ಈ ಹಿಂದೆ ನಗರದಲ್ಲಿ ದಾಖಲಾಗಿರುವ ಅಪರಾಧಗಳ ಸಂಖ್ಯೆಗೂ ಈಗಿನ ಸಂಖ್ಯೆಗೂ ಹೋಲಿಕೆ ಮಾಡಿದರೆ ಶೇ 50ರಷ್ಟು ಕಡಿಮೆಯಾಗಿವೆ. ನಗರದಲ್ಲಿ ವಾರ್ಡ್‌ ಬೀಟ್‌ ವ್ಯವಸ್ಥೆ ಜಾರಿಗೆ ಬಂದ ನಂತರ ಸಾರ್ವಜನಿಕರು ತಮ್ಮ  ಸಮಸ್ಯೆಗಳನ್ನು ಪೊಲೀಸರ ಬಳಿ ನಿರ್ಭಯವಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದರು.

‘ಇದರಿಂದ ಸಮಸ್ಯೆಗಳು ನಮ್ಮ ಗಮನಕ್ಕೆ ಬರುತ್ತಿವೆ. ಪೊಲೀಸರೆಂದರೆ ಭಯಬೀಳುವ ಜನ ಅಪರಾಧಗಳನ್ನು ಮಾಡಿದವರು ಹಾಗೂ ಕಾನೂನು ತಿಳಿವಳಿಕೆ ಇಲ್ಲದವರೇ ಹೊರತು ತಿಳಿವಳಿಕೆ ಇದ್ದವರು ಭಯಬೀಳುವ ಅಗತ್ಯ ಇಲ್ಲ’ ಎಂದರು. ಅಪರಾಧಗಳನ್ನು ತಡೆಯುವಲ್ಲಿ ಮಹಿಳೆಯರು ಹಾಗೂ ಹದಿಹರೆಯದ ಹೆಣ್ಣುಮಕ್ಕಳ ಜವಾಬ್ದಾರಿ ಹೆಚ್ಚಾಗಿದೆ. ತಮ್ಮ ಸುತ್ತ  ನಡೆಯುವ ಅಥವಾ ಮನೆಯಲ್ಲಿಯೇ ಗಂಡು ಮಕ್ಕಳು ದಾರಿ ತಪ್ಪಿ ನಡೆದಾಗ ತಮ್ಮ ಕೈಯಲ್ಲಿ ತಿದ್ದಲು ಸಾಧ್ಯವಾಗದೇ ಇದ್ದಾಗ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು ಎಂದರು. ಇದರಿಂದ ದೊಡ್ಡ ರೀತಿಯ ಅಪರಾಧಗಳು ನಡೆದು ಅಪರಾಧಿಗಳಾಗಿ ಜೈಲುಪಾಲಾಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ಪಾಟೀಲ್‌ ಹೇಳಿದರು.

ಪ್ರೇಮ ಪ್ರಕರಣ: ಹದಿಹರೆಯದಲ್ಲಿ ನಡೆಯುತ್ತಿರುವ ಅಪರಾಧಗಳಿಗಳಿಗೆ ಬಹುತೇಕ ಕಾರಣವಾಗಿರುವುದೇ ಪ್ರೇಮ ಪ್ರಕರಣಗಳು. ಇದರಲ್ಲಿ ಹುಡುಗರ ಪಾತ್ರದ ಜೊತೆಗೆ ಹುಡುಗಿಯರ ಪಾತ್ರವೂ ಇರುತ್ತದೆ ಎಂದರು. ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಬಳಸುವಾಗ ಎಚ್ಚರದಿಂದ ಉಪಯೋಗಿಸಬೇಕು. ಸಮಯ ವ್ಯರ್ಥ ಮಾಡಿಕೊಂಡು ಸಂದೇಶಗಳನ್ನು ಕಳುಹಿಸುತ್ತ ಕಾಲಹರಣ ಮಾಡುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಇದರಿಂದಲೇ ಸಾಕಷ್ಟು ಹೆಣ್ಣು ಮಕ್ಕಳು ಪ್ರೀತಿಯ ಮೋಸದ ಬಲೆಗೆ ಬೀಳಲು, ಅಪರಾಧಗಳು ನಡೆಯಲು ಕಾರಣವಾಗುತ್ತಿದೆ ಎಂದು ಎಚ್ಚರಿಸಿದರು.

ವಿವಾಹದ ವಯಸ್ಸು 18 ತುಂಬಿ, ಬದುಕನ್ನು ರೂಪಿಸಿಕೊಳ್ಳುವವರೆಗೂ ಪ್ರೀತಿಯ ಬಲೆಗೆ ಬೀಳದಿದ್ದರೆ ಇಡೀ ಜೀವನವನ್ನು ಸುಂದರವಾಗಿ ಕಳೆಯಬಹುದು ಎನ್ನುವ ಸತ್ಯವನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಿದೆ ಎಂದು ಹೇಳಿದರು. ಮಕ್ಕಳ ಸಹಾಯವಾಣಿ ಕುರಿತು ಮಾಹಿತಿ ನೀಡಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮು ಜೋಗಿಹಳ್ಳಿ, ಪ್ರಥಮ ಬಾರಿಗೆ ಮುಂಬೈನಲ್ಲಿ ಪ್ರಾರಂಭವಾದ ಇದು ಈಗ ಇಡೀ ದೇಶದಲ್ಲಿ ಎಲ್ಲ ರಾಜ್ಯಗಳ, ಎಲ್ಲ ತಾಲ್ಲೂಕುಗಳಲ್ಲೂ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ, ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳ ರಕ್ಷಣೆ ಸೇರಿದಂತೆ 18 ವರ್ಷದ ಒಳಗಿನ ಎಲ್ಲರೂ ಇದರ ನೆರವನ್ನು ಪಡೆಯಲು ಅರ್ಹರಾಗಿತ್ತಾರೆ. ಬಾಲ್ಯ ವಿವಾಹ ಸೇರಿದಂತೆ ಯಾವುದೇ ರೀತಿಯ ಮಾಹಿತಿಯನ್ನು ಸಹಾಯವಾಣಿಗೆ ಉಚಿತ ಕರೆ ಮಾಡಿ 1098ಕ್ಕೆ ದೂರು ನೀಡಿದರೆ ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ ಎಂದರು. ಕಷ್ಟದಲ್ಲಿ ಸಿಲುಕಿರುವ ಮಕ್ಕಳಿಗೆ ರಕ್ಷಣೆ, ನೆರವು ನೀಡಲಾಗುವುದು. ಆದರೆ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು.

ಕಾನೂನು ಅರಿವು ಕುರಿತು ಬೆಂಗಳೂರಿನ ಅರುಣೋದಯ ಕಾನೂನು ಕಾಲೇಜಿನ ಪ್ರಾಂಶುಪಾಲೆ ಟಿ.ಕೆ.ಶ್ರೀದೇವಿ ಮಾತನಾಡಿದರು. ವಿಚಾರ ಗೋಷ್ಠಿಗಳ ಅಧ್ಯಕ್ಷತೆಯನ್ನು ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್‌.ಪ್ರಭಾ ವಹಿಸಿದ್ದರು.

ಮಹಿಳಾ ಸಮಾಜದ ಉಪಾಧ್ಯಕ್ಷೆ ಕೆ.ಜಿ.ಕವಿತಾ, ಕಾರ್ಯದರ್ಶಿ ಎಲ್‌.ಸಿ.ದೇವಕಿ, ಖಜಾಂಚಿ ಜಿ.ವಿ.ಯಶೋಧ, ನಿರ್ದೇಶಕರಾದ ಎಂ.ಕೆ.ವತ್ಸಲ, ವಿ.ನಿರ್ಮಲ, ಎಸ್‌.ಗೌರಮ್ಮ, ಟಿ.ಪಿ. ವರಲಕ್ಷ್ಮೀ, ಬಿ.ಎ. ಗಿರಿಜ ಇದ್ದರು. ಈ ಕಾರ್ಯಾಗಾರದಲ್ಲಿ ನಗರದ ವಿವಿಧ ಕಾಲೇಜು, ಪ್ರೌಢ ಶಾಲೆಗಳ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !