ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ವಿರುದ್ಧ ಕ್ರಿಮಿನಲ್ ಪ್ರಕರಣ: ನೋಟಿಸ್ ಹಿಂಪಡೆಯಲು ನಿರ್ಣಯ

ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ನಿರ್ಧಾರ
Last Updated 19 ಜೂನ್ 2019, 13:30 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಕಾರ್ಮಿಕರನ್ನು ನೊಂದಾಯಿಸಿಕೊಂಡು, ಗುರುತಿನ ಚೀಟಿ ವಿತರಿಸಿರುವ ಕಾರ್ಮಿಕ ಇಲಾಖೆಯೇ, ಕ್ರಿಮಿನಲ್ ಪ್ರಕರಣ ದಾಖಲಿಸಲು ನೋಟಿಸ್ ನೀಡಿದೆ’ ಎಂದು ಸರ್ವಸದಸ್ಯರು ಕಾರ್ಮಿಕ ಇಲಾಖೆ ವಿರುದ್ಧ ಹರಿಹಾಯ್ದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ತಾಲ್ಲೂಕು ಪಂಚಾಯಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ‘ಕಳೆದ ಎರಡೂವರೆ ವರ್ಷಗಳಿಂದ ಕಾರ್ಮಿಕ ಇಲಾಖೆ ಅಧಿಕಾರಿಗಳು ಗ್ರಾಮಪಂಚಾಯಿತಿಗೆ ಬಂದು ಕಾರ್ಮಿಕರನ್ನು ಗುರುತಿಸಿ ಕಾರ್ಡ್ ನೀಡಿದ್ದಾರೆ. ಕಾರ್ಮಿಕ ಕಲ್ಯಾಣ ಮಂಡಳಿಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಿದಾಗ ಪರಿಶೀಲನೆ ಮಾಡುವ ನೆಪದಲ್ಲಿ ವಾಸಸ್ಥಳದ ಮಹಜರ್ ಮಾಡಲು ಬಂದ ಅಧಿಕಾರಿಗಳಿಗೆ ಅಕ್ಕಪಕ್ಕದ ಮನೆಯವರು ನೀಡಿದ ಸುಳ್ಳು ಮಾಹಿತಿ ಮೇರೆಗೆ ಕಾರ್ಮಿಕ ಶ್ರೀಕಂಠಾಚಾರ್‌ಗೆ ನೋಟಿಸ್ ನೀಡಲಾಗಿದೆ. ಈ ರೀತಿ ಮಾಡುವುದು ಸರಿಯೇ’ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದನ್ನುಸದಸ್ಯರಾದ ಭೀಮ್ ರಾಜ್, ಗೋಪಾಲಸ್ವಾಮಿ, ಸಾವಿತ್ರಮ್ಮ ಬೆಂಬಲಿಸಿದರು. ‘ಮಣ್ಣು ಅಗೆಯುವವರು, ಬೇರೆಯವರ ಮನೆಗೆಲಸ ಮಾಡುವವರು ಸೇರಿದಂತೆ 50ಕ್ಕೂ ಹೆಚ್ಚು ವಿವಿಧ ರೀತಿಯ ಕೆಲಸಗಾರರನ್ನು ಕಾರ್ಮಿಕ ಇಲಾಖೆ ಗುರುತಿಸಿ ಕಾರ್ಡ್ ನೀಡಿದೆ. ಆ ವೇಳೆ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕಿತ್ತು. ನೋಟಿಸ್ ನೀಡಲಿ, ಆದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಿದರೆ ಹೋರಾಟ ಅನಿವಾರ್ಯವಾಗಲಿದೆ’ ಎಂದು ಎಚ್ಚರಿಸಿದರು.

ಇದರಿಂದ ಕುಪಿತರಾದ ಸದಸ್ಯರು, ಸುಳ್ಳು ಮಾಹಿತಿ ನೀಡಿರುವವರಿಗೆ ಎಚ್ಚರಿಕೆ ನೋಟಿಸ್ ನೀಡಿ ಕ್ರಿಮಿನಲ್ ಪ್ರಕರಣ ದಾಖಲು ಮಾಡದಂತೆ ನಿರ್ಣಯ ಕೈಗೊಂಡರು.

ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಮಂಜುನಾಥ್ ಮಾತನಾಡಿ ‘ದ್ರಾಕ್ಷಿ ಬೆಳೆಗಾರರು ಒಂದು ಎಕರೆ ಬೆಳೆಗೆ ವಿಮೆ ಮಾಡಿಸಲು ₹ 5 ಸಾವಿರ ವಿಮಾ ಕಂತಿನ ಶುಲ್ಕ ಪಾವತಿಸಬೇಕು. ಬೆಳೆ ನಷ್ಟವಾದರೆ ಸಕಾಲದಲ್ಲಿ ಪರಿಹಾರ ಸಿಗಲಿದೆ. ಮುಂಗಾರಿನಲ್ಲಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ 205 ಎಕರೆಯಲ್ಲಿ, ವಿವಿಧ ಬೆಳೆಯ ಮೌಲ್ಯ ಅಂದಾಜು ₹ 3.9 ಕೋಟಿ ನಷ್ಟವಾಗಿದೆ. ರಾಷ್ಟ್ರೀಯ ಪ್ರಕೃತಿ ವಿಕೋಪದ ಅಡಿಯಲ್ಲಿ ಪ್ರತಿ ಎಕರೆಗೆ ₹ 7.500 ಮಾತ್ರ ಸಿಗಲಿದೆ’ ಎಂದು ಹೇಳಿದರು.

‘ಪ್ರತಿ ಎಕರೆಗೆ ₹ 5,600 ವಿಮೆ ಪಾವತಿಸಲು ಬೆಳೆಗಾರರಿಗೆ ಕಷ್ಟವಾಗಲಿದೆ. ಯಾವುದೇ ಬೆಳೆಗೆ ವಿಮೆ ಇಲ್ಲದೆ ಪರಿಹಾರ ಯಾಕೆ ನೀಡಬಾರದು. ನೀವು ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹಾಕಿ’ ಎಂದು ಸದಸ್ಯರಾದ ವೆಂಕಟೇಶ್, ಶೈಲಜಾ, ಕಾರಹಳ್ಳಿ ಶ್ರೀನಿವಾಸ್, ಅಧ್ಯಕ್ಷೆ ಭಾರತಿ ಲಕ್ಷ್ಮಣ್ ಗೌಡ ಒತ್ತಾಯಿಸಿದರು.

‘ವಿಮೆ ಇಲ್ಲದೆ ಪರಿಹಾರ ಸಿಗಲು ನಮ್ಮ ವ್ಯಾಪ್ತಿಯಲ್ಲಿ ಅಧಿಕಾರವಿಲ್ಲ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಿರಿಯ ಅಧಿಕಾರಿಗಳು ತೀರ್ಮಾನಿಸಬೇಕು’ ಎಂದು ಜಿ.ಮಂಜುನಾಥ್ ಸ್ಪಷ್ಟನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಟಿ.ಮುರುಡಯ್ಯ, ಸಹಾಯಕ ನಿರ್ದೇಶಕ ಪ್ರದೀಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT