14 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ನಷ್ಟ

ಗುರುವಾರ , ಜೂಲೈ 18, 2019
23 °C
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಚಿತ್ರಣ ನೀಡಿದ ಜಂಟಿ ನಿರ್ದೇಶಕ

14 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ನಷ್ಟ

Published:
Updated:
Prajavani

ದೇವನಹಳ್ಳಿ: ಸರ್ಕಾರದ ಉದ್ದೇಶಿತ ಮಹಾತ್ವಾಕಾಂಕ್ಷಿ ಯೋಜನೆಗಳು ಸಕಾಲದಲ್ಲಿ ಅರ್ಹರಿಗೆ ತಲುಪಬೇಕು ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಮುಂಗಾರು ಬೆಳೆ ನಷ್ಟದ ಪರಿಹಾರ ಎಷ್ಟು ಹೆಕ್ಟೇರ್‌ಗೆ, ಒಟ್ಟು ಎಷ್ಟು ಕೋಟಿ ನೀಡಬೇಕು ಎಂದು ಅವರು ಕೃಷಿ ಇಲಾಖೆ ಜಂಟಿ ನಿರ್ದೇಶಕ ಗಿರೀಶ್ ಅವರಿಗೆ ಮಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ಜಂಟಿ ನಿರ್ದೇಶಕ, 14 ಸಾವಿರ ಹೆಕ್ಟೇರ್‌ನಲ್ಲಿ ವಿವಿಧ ಬೆಳೆ ನಷ್ಟವಾಗಿದೆ. ಒಟ್ಟು ₹ 500 ಕೋಟಿ ನಷ್ಟವಾಗಿದ್ದು 3800 ಫಲಾನುಭವಿಗಳ ಖಾತೆಗೆ ಜಮೆ ಆಗಿದೆ ಎಂದು ತಿಳಿಸಿದರು.

2017–18 ನೇ ಸಾಲಿನಲ್ಲಿ ಪರಿಹಾರದ ಮೊತ್ತ ಇನ್ನೂ ಬಂದಿಲ್ಲ, ಜಿಲ್ಲೆಯಲ್ಲಿ ಮಾರ್ಚ್‌ ನಂತರ 1200 ಕೃಷಿ ಹೊಂಡ ನಿರ್ಮಾಣವಾಗಿದೆ. ಎರಡು ವರ್ಷಗಳಲ್ಲಿ 5 ಸಾವಿರ ಕೃಷಿ ಹೊಂಡ ನಿರ್ಮಾಣವಾಗಿದೆ. ರೈತರಿಗೆ ವಿವಿಧ ಬಿತ್ತನೆ ಬೀಜ, ರಸಗೊಬ್ಬರ, ಲಘು ಪೋಷಕಾಂಶ ಗೊಬ್ಬರಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.

ಸಚಿವ ನಾಗರಾಜ್ ಅವರು ಮಾತನಾಡಿ, ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಪರಿಹಾರ ಮೊತ್ತ ಬಂದಿಲ್ಲ ಎಂಬ ದೂರುಗಳು ಬರುತ್ತಿವೆ, ರೈತರು ಪಾವತಿಸಿದ ವಿಮೆ ಹಣ ವಿಮಾ ಕಂಪನಿ ಅಭಿವೃದ್ಧಿಯಾಗುತ್ತಿದೆ, ಈ ಕಂಪನಿಗಳ ಹಣೆಬರಹ ಇಷ್ಟೇ ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಅಧಿಕಾರಿಗಳೇ ಪೂರ್ಣ ಜಿಲ್ಲೆಗೆ 30 ಕ್ವಿಂಟಲ್ ಕಡಲೆಕಾಯಿ ಬೀಜ ಎಂದರೆ ಹೇಗೆ, ತೂಬುಗೆರೆ ಹೋಬಳಿ ಒಂದಕ್ಕೆ 10 ಕ್ವಿಂಟಲ್ ಬೇಕು, ಈ ರೀತಿಯಾದರೆ ಹೇಗೆ ಎಂದರು.

ಸಚಿವ ನಾಗರಾಜ್ ಮಾತನಾಡಿ, ಆರೇಳು ವರ್ಷಗಳಿಂದ ಒಂದೇ ಏಜೆನ್ಸಿಗೆ ಗುತ್ತಿಗೆ ನೀಡುತ್ತಿದ್ದಾರೆ, 950 ಅಡಿ ಕೊರೆಯಿಸಿ 1200 ಅಡಿ ಎಂದು ಲೆಕ್ಕ ತೋರಿಸುತ್ತೀರಾ ಇದೊಂದು ಅಕ್ರಮ ದಂಧೆಯಾಗಿದೆ, ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ 615 ಶುದ್ಧ ಕುಡಿಯುವ ನೀರಿನ ಘಟಕಗಳಿವೆ, ಎಷ್ಟು ಚಾಲನೆಯಲ್ಲಿವೆ ಒಂದು ಘಟಕಕ್ಕೆ ಸರ್ಕಾರ ₹ 8.5 ಲಕ್ಷ ನೀಡುತ್ತಿದೆ. ಖಾಸಗಿಯಾಗಿ ನಿರ್ಮಾಣ ಮಾಡಿದರೆ ₹ 4 ಲಕ್ಷ ಆದರೂ ರಿಪೇರಿಗೆ ಬರಲ್ಲ, ಸರ್ಕಾರದ ಹಣ ವ್ಯರ್ಥವಾಗುತ್ತಿದೆ. ವಿಫಲವಾಗಿರುವ ಕೊಳವೆ ಬಾವಿಯ ಪೈಪ್, ಮೊಟಾರ್ಸ್ ಕೇಬಲ್ ಎಲ್ಲಿವೆ ನೂತನ ಕೊಳವೆ ಬಾವಿಗೆ ಯಾಕೆ ಬಳಸಬಾರದು ಎಂದರು.

‘ಗಿಡ್ಡಪ್ಪನಹಳ್ಳಿ ಪಂಚಾಯಿತಿಯಲ್ಲಿ ಅಧ್ಯಕ್ಷ ಮತ್ತು ಪಿ.ಡಿ.ಒ ಸೇರಿ ಲಕ್ಷಾಂತರ ಮೌಲ್ಯದ ಕೊಳವೆ ಬಾವಿಯ ಪರಿಕರ ಮಾರಾಟ ಮಾಡಿ ಕಳ್ಳತನವಾಗಿದೆ ಎಂದು ದೂರು ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ತಕ್ಷಣ ತನಿಖೆ ನಡೆಸಿ ಅಧಿಕಾರಿಯನ್ನು ಅಮಾನತು ಮಾಡಿ ಎಂದು ಸೂಚಿಸಿದರು. ಸಾರ್ವಜನಿಕರ ತೆರಿಗೆಯಿಂದ ಸರ್ಕಾರ ಅನುದಾನ ನೀಡುತ್ತಿದೆ ಎಂಬುದನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು ಪಾರದರ್ಶಕತೆಯಿಂದ ಕೆಲಸ ಮಾಡಬೇಕು’ ಎಂದು ಸಚಿವರು ಹೇಳಿದರು.

ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಪಶು ಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 853 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ. ಹೆಚ್ಚುವರಿ ಪಟ್ಟಿಯಲ್ಲಿರುವವರ ಕತೆ ಏನು, ಪಶು ರೋಗ ಪತ್ತೆ ಹಚ್ಚುವ ಜಿಲ್ಲಾ ಮಟ್ಟದ ಪ್ರಯೋಗಾಲಯಕ್ಕೆ ದೇವನಹಳ್ಳಿಯಲ್ಲಿ ಎಲ್ಲಿ ಜಾಗ ಗುರುತಿಸಿದ್ದೀರಾ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕರೀಗೌಡ, ಜಾಗ ಪರಿಶೀಲಿಸಲಾಗಿದ್ದು ತ್ವರಿತವಾಗಿ ಇಲಾಖೆಗೆ ಹಸ್ತಾಂತರಿಸಲಾಗುವುದೆಂದು ಹೇಳಿದರು.

ಸಚಿವ ಮಾತನಾಡಿ, ನರೇಗಾ ಯೋಜನೆಯಡಿ 14.73 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಿ ₹ 65 ಕೋಟಿ ವೆಚ್ಚ ಮಾಡಿರುವ ಮಾಹಿತಿ ಇದೆ. ಇದು ಕಳೆದ ವರ್ಷದ್ದು, ಈ ವರ್ಷ 2.45 ಲಕ್ಷ ಮಾನವ ದಿನಗಳು ₹ 15 ಕೋಟಿ ವೆಚ್ಚ ಎಂದರೆ ತೀರ ಕಡಿಮೆ ಎಂದರು.

ಶಾಸಕರಾದ ವೆಂಕಟರಮಣಯ್ಯ, ಡಾ.ಶ್ರೀನಿವಾಸ್ ಮೂರ್ತಿ ಮಾತನಾಡಿ, ನೀರಾವರಿ ಇಲಾಖೆ ಕೆರೆಗೆ ಜೋಡಣೆಯಾಗಿರುವ ರಾಜಕಾಲುವೆಯನ್ನು ಮೊದಲು ದುರಸ್ತಿ ಮಾಡಬೇಕು ಎಂದು ಹೇಳಿದರು.

‘ಬಮೂಲ್’ ಶಿಬಿರ ಕಚೇರಿ ವ್ಯವಸ್ಥಾಪಕ ಡಾ.ಗಂಗಯ್ಯ ಮಾತನಾಡಿ, 2018–19 ನೇ ಸಾಲಿನಲ್ಲಿ ಹಾಲು ಉತ್ಪಾದಕರಿಗೆ ಸರ್ಕಾರದ ಪ್ರೋತ್ಸಾಹಧನ ₹ 564 ಕೋಟಿ ವಿತರಣೆಯಾಗಿದೆ. ಸರ್ಕಾರ ಪ್ರೋತ್ಸಾಹ ಧನ ನೀಡಲು ಆರಂಭಿಸಿದ ವರ್ಷದಿಂದ ಈವರೆಗೆ ₹ 1,530 ಕೋಟಿ ಜಿಲ್ಲೆಯಲ್ಲಿ ನೀಡಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ , ಉಪಾಧ್ಯಕ್ಷೆ ಕನ್ಯಾಕುಮಾರಿ, ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !