ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಸೌಮ್ಯಚನ್ನಕೇಶವ ಜಾತ್ರೆಗೆ ಜನಸಾಗರ

ಧರ್ಮರಾಯಸ್ವಾಮಿ ದ್ರೌಪತಮ್ಮನ ಹೂವಿನ ಕರಗ ಮಹೋತ್ಸವ
Last Updated 8 ಮಾರ್ಚ್ 2023, 5:57 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ಪಟ್ಟಣದ ಗಾಂಧಿ ಚೌಕದಲ್ಲಿ ಸೌಮ್ಯಚನ್ನಕೇಶವಸ್ವಾಮಿ ರಥೋತ್ಸವ ಮಂಗಳವಾರ ಅದ್ದೂರಿಯಾಗಿ ನೆರವೇರಿತು.

ದೇವಾಲಯದ ಪ್ರಧಾನ ಅರ್ಚಕರಾದ ಮುರಳೀಧರ ಭಟ್ಟಾಚಾರ್ಯ ಹಾಗೂ ರಾಜು ಭಟ್ಟಾಚಾರ್ಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ವಿವಿಧ ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

ಸೌಮ್ಯಚನ್ನಕೇಶವಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು, ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮಾಡಲಾಯಿತು. ನಂತರ ಮಂಗಳವಾದ್ಯಗಳು ಹಾಗೂ ತಮಟೆ ವಾದನಗಳೊಂದಿಗೆ ರಥದತ್ತ ತರಲಾಯಿತು.

ದೇವರ ಪಲ್ಲಕ್ಕಿ ಬರುವ ರಸ್ತೆಯುದ್ದಕ್ಕೂ ಮಹಿಳೆಯರು ನೀರು ಹಾಕಿ, ರಂಗೋಲಿ ಬಿಡಿಸಿ ಪೂಜೆ ಸಲ್ಲಿಸಿದರು. ಬೀದಿಯುದ್ದಕ್ಕೂ ನಿಂತಿದ್ದ ಜನರು ಭಕ್ತಿಭಾವದಿಂದ ದೇವರಿಗೆ ನಮಸ್ಕರಿಸಿದರು. ಗಾಣಿಗ ಸಮುದಾಯದವರು ಭಾಗವತ ಸೇವೆ ನಡೆಸಿಕೊಟ್ಟರು.

ರಥೋತ್ಸವ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ತಮ್ಮ ಇಷ್ಟಾರ್ಥ ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿ ಬಾಳೆಹಣ್ಣಿಗೆ ದವನ ಸಿಕ್ಕಿಸಿ ರಥಕ್ಕೆ ಎಸೆದರು. ಕೆಲವರು ಬಾಳೆಹಣ್ಣಿನ ಮೇಲೆ ತಮ್ಮ ಇಷ್ಟಾರ್ಥಗಳು ಹಾಗೂ ತಮ್ಮ ಹೆಸರು ಬರೆದು ರಥಕ್ಕೆ ಎಸೆದರು. ಭಕ್ತರಿಗೆ ಕೋಸಂಬರಿ, ಪಾನಕ, ಮಜ್ಜಿಗೆಯನ್ನು ಉಚಿತವಾಗಿ ವಿತರಿಸಲಾಯಿತು.

ದೀಪೋತ್ಸವ: ಧರ್ಮರಾಯಸ್ವಾಮಿ ದ್ರೌಪತಮ್ಮನ ಹೂವಿನ ಕರಗ ಮಹೋತ್ಸವದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ನಡೆದವು. ಸೋಮವಾರ ರಾತ್ರಿ ದೀಪೋತ್ಸವ ಆಯೋಜಿಸಲಾಗಿತ್ತು.

ಮಹಿಳೆಯರು ಮತ್ತು ಹೆಣ್ಣು ಮಕ್ಕಳು ವಿವಿಧ ಬಗೆಯಲ್ಲಿ ಅಲಂಕರಿಸಿದ್ದ ದೀಪಗಳನ್ನು ಹೊತ್ತುಕೊಂಡು ಗಾಂಧಿ ಚೌಕ, ಗುರಪ್ಪನಮಠ, ಬಸ್ ನಿಲ್ದಾಣ, ಶಿವಗಣೇಶ ಸರ್ಕಲ್ ಮೂಲಕ ಧರ್ಮರಾಯಸ್ವಾಮಿ ದೇವಾಲಯಕ್ಕೆ ತೆರಳಿದರು. ಈ ವೇಳೆ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಜಾತ್ರಾ ಸಂಭ್ರಮ: ಹುಣ್ಣಿಮೆ ಹಬ್ಬ ಹಾಗೂ ರಥೋತ್ಸವದ ಅಂಗವಾಗಿ ಗಾಂಧಿ ಚೌಕ ಸೇರಿದಂತೆ ಹಳೇ ಕೆನರಾ ಬ್ಯಾಂಕ್‌ನ ಮುಖ್ಯರಸ್ತೆಯಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು.

ವಿವಿಧ ಬಗೆಯ ಮಿಠಾಯಿ ಅಂಗಡಿಗಳು, ಮಕ್ಕಳ ಅಟಿಕೆ ಅಂಗಡಿಗಳನ್ನು ಜೋಡಿಸಲಾಗಿತ್ತು. ರಥೋತ್ಸವ ಮುಗಿದ ನಂತರ ಮೇಲೂರು ಮುಖ್ಯರಸ್ತೆಯೂ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ಜನಸಂದಣಿ ಇತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT