ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗುವಳಿ ಚೀಟಿ ಬಾಕಿ ಸಲ್ಲದು: ‌ದೇಶಪಾಂಡೆ

ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ
Last Updated 7 ಜೂನ್ 2019, 13:43 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಭೂಮಿ ಸಾಗುವಳಿ ಚೀಟಿಗಳನ್ನು ವಿಲೇವಾರಿ ಮಾಡದಿದ್ದರೆ ತಹಶೀಲ್ದಾರರೇ ನೇರ ಹೊಣೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.

ಅವರು ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ನೆಲಮಂಗಲ ತಾಲ್ಲೂಕಿನಲ್ಲಿ 176, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 59 ಸಾಗುವಳಿ ಚೀಟಿಗಳ ವಿತರಣೆ ಬಾಕಿ ಉಳಿಸಿಕೊಂಡಿರುವುದು ಸರಿಯಾದ ನಡವಳಿಕೆ ಅಲ್ಲ. ಮೂರು ದಿನಗಳ ಒಳಗಾಗಿ ಸಾಗುವಳಿ ಚೀಟಿಗಳನ್ನು ವಿತರಣೆ ಮಾಡಿ ವರದಿ ಸಲ್ಲಿಸಬೇಕು’ ಎಂದರು.

‘ಬಡವರು, ರೈತರು ಖರೀದಿಸುವ 10 ಗುಂಟೆ ಭೂಮಿಗೂ 79 ಎಬಿ (ಕೃಷಿ ಭೂ ಖರೀದಿಗೆ ಆದಾಯ ಮಿತಿ ಕಾಯ್ದೆ) ದೂರು ದಾಖಲಿಸಿಕೊಳ್ಳುವುದು ತಪ್ಪು. ಈ ಬಗ್ಗೆ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳನ್ನು ಅಧಿಕಾರಿಗಳು ಗಮನಿಸಬೇಕು. ವಿನಾಕಾರಣ ರೈತರಿಗೆ ತೊಂದರೆ ನೀಡುವುದು ಬೇಡ’ ಎಂದು ತಿಳಿಸಿದರು.

‘ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ರಚಿಸಬೇಕಾಗಿದ್ದ ಬಗರ್‌ ಹುಕುಂ, ಭೂ ನ್ಯಾಯಮಂಡಳಿ ಸದಸ್ಯರ ನೇಮಕಾತಿಗಳು ಒಂದು ವಾರದಲ್ಲಿ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗುವುದು. ಇನ್ನು ಕೆಲವು ತಾಲ್ಲೂಕುಗಳ ಶಾಸಕರು ಸದಸ್ಯರ ಪಟ್ಟಿಯನ್ನು ನೀಡಿಲ್ಲ’ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಅತ್ಯಂತ ಕಳಪೆ ಸಾಧನೆ ನೆಲಮಂಗಲ ತಾಲ್ಲೂಕಿನಲ್ಲಿ ಆಗಿದೆ. ಸಾಗುವಳಿ, ಚೀಟಿ, ಸಾಮಾಜಿಕ ಭದ್ರತಾ ಯೋಜನೆ, ಸಕಾಲ ಅರ್ಜಿಗಳ ವಿಲೇವಾರಿ ಎಲ್ಲದರಲ್ಲೂ ಅತ್ಯಂತ ಹಿಂದುಳಿದಿದೆ. ಈ ಬಗ್ಗೆ ಖುದ್ದಾಗಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ಜಿಂದಾಲ್‌ ಕಂಪನಿಗೆ ಭೂಮಿ ನೀಡಲು ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ದೇಶಪಾಂಡೆ ಸಮರ್ಥಿಸಿಕೊಂಡರು.

‘ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ಜಿಲ್ಲಾಧಿಕಾರಿ ಖಾತೆಗೆ ₹ 50 ಲಕ್ಷ ಜಮಾ ಮಾಡಲಾಗಿದೆ. ಕೊಳವೆ ಬಾವಿ ಕೊರೆಸುವುದಷ್ಟೇ ಅಲ್ಲದೆ ನೀರಿನ ಸೌಲಭ್ಯಕ್ಕೆ ಅಗತ್ಯ ಇರುವ ಎಲ್ಲದಕ್ಕೂ ಈ ಹಣವನ್ನು ಬಳಸಿಕೊಂಡು ಸೂಕ್ತ ಲೆಕ್ಕಪತ್ರಗಳನ್ನು ನೀಡಲು ಸೂಚನೆ ನೀಡಲಾಗಿದೆ’ ಎಂದರು.

‘ಪ್ರಕೃತಿ ವಿಕೋಪದಲ್ಲಿ ಮೃತಪಟ್ಟ ವ್ಯಕ್ತಿಗಳಿಗೆ ತುರ್ತಾಗಿ ₹5 ಲಕ್ಷ ಪರಿಹಾರ ನೀಡಲು ಆದೇಶ ನೀಡಲಾಗಿದೆ. ಹಾಗೆಯೇ ಸಿಮೆಂಟ್‌ ಶೀಟ್‌, ಹೆಂಚಿನ ಮನೆಯ ಮೇಲ್ಚಾವಣಿ ಹಾರಿ ಹೋದರೆ ₹ 75 ಸಾವಿರದವರೆಗೆ ಪರಿಹಾರ ನೀಡಲು 10 ತಿಂಗಳ ಹಿಂದೆಯೇ ಸುತ್ತೋಲೆ ಹೊರಡಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ಪ್ರತಿಯೊಂದು ಟ್ಯಾಂಕರ್‌ಗೂ ಕಡ್ಡಾಯವಾಗಿ ಜಿಪಿಆರ್‌ಎಸ್‌ ಅಳವಡಿಸಬೇಕು’ ಎಂದರು.

‘ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರನ್ನು ರೇಷ್ಮೆ ನೂಲು ಬಿಚ್ಚಾಣಿಕೆ ಸೇರಿದಂತೆ ಇತರೆ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಪುರಸಭೆಯಿಂದ ಅಕ್ರಮವಾಗಿ ಸಂಪರ್ಕ ಪಡೆಯಲಾಗಿದೆ ಎನ್ನುವ ಬಗ್ಗೆ ಮಾಹಿತಿ ಇದೆ. ಇಂತಹ ಪ್ರಕರಣಗಳ ಬಗ್ಗೆ ಉಪವಿಭಾಗಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸಚಿವರು ಸೂಚಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ಘಾಟಿ ಕ್ಷೇತ್ರದ ವಿಶ್ವೇಶ್ವರಯ್ಯ ಪಿಕಪ್‌ ಡ್ಯಾಂನಲ್ಲಿ ನೀರು ತುಂಬಿದರೆ ತೂಬಗೆರೆ ಹೋಬಳಿಯ ಸುಮಾರು ನಾಲ್ಕು ಪಂಚಾಯಿತಿಗಳ ಕುಡಿಯುವ ನೀರಿನ ಬವಣೆ ನೀಗಲಿದೆ. ಇದನ್ನು ಅಭಿವೃದ್ದಿ ಪಡಿಸಲು ಸರ್ಕಾರ ಅನುದಾನ ನೀಡಬೇಕು’ ಎಂದರು.

‘ದೇವನಹಳ್ಳಿ ಮಿನಿ ವಿಧಾನಸೌಧದಲ್ಲಿ ಲಿಫ್ಟ್‌ ಸೌಲಭ್ಯ ಕಲ್ಪಿಸಬೇಕು. 94ಸಿ ನಿಯಮದಡಿ ಮನೆಗಳ ಅಕ್ರಮ ಸಕ್ರಮಕ್ಕೆ ಇರುವ ನಿವೇಶನ ಹಾಗೂ ಮನೆಯ ವಿಸ್ತೀರ್ಣಕ್ಕೆ ಇರುವ ಮಿತಿಯನ್ನು ಹೆಚ್ಚಿಸುವಂತೆ ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಮಿ ವಶಪಡಿಸಿಕೊಂಡ ಸಂದರ್ಭದಲ್ಲಿ ನಮೂನೆ 53ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ರೈತರ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಈ ರೈತರಿಗೆ ಇನ್ನು ಪರಿಹಾರ ನೀಡಿಲ್ಲ’ ಎಂದು ಶಾಸಕರು ಸಚಿವರ ಗಮನಕ್ಕೆ ತಂದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ‘ಪಿಂಚಣಿ ಹಣ ನೀಡುವಲ್ಲಿ ಅಂಚೆ ಇಲಾಖೆ ನೌಕರರು ಸಾಕಷ್ಟು ಮೋಸ ಮಾಡುತ್ತಿದ್ದಾರೆ. ಇದರಿಂದ ಹಿರಿಯ ನಾಗರಿಕರು ತೊಂದರೆಗೆ ಸಿಲುಕುವಂತಾಗಿದೆ. ಇದಕ್ಕೆ ಸೂಕ್ತ ಪರಿಹಾರವನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ತಾಲ್ಲೂಕಿನಲ್ಲಿ ಕೆಆರ್‌ಡಿಎಲ್‌ ಸಂಸ್ಥೆ ವತಿಯಿಂದ ನಿರ್ಮಿಸಲಾಗಿರುವ 23 ಶುದ್ದ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ. ಸಾಸಲು ಹೋಬಳಿಯ ಕೊಟ್ಟಿಗೆ ಮಾಚೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೋರಿ ಮಳೆ ನೀರಿಗೆ ಕೊಚ್ಚಿ ಹೋಗಿದೆ. ಇದಕ್ಕೆ ಕನಿಷ್ಠ ₹ 10 ಲಕ್ಷ ನೀಡಿದರೆ ಮಾತ್ರ ಸೂಕ್ತ ರೀತಿಯಲ್ಲಿ ನಿರ್ಮಿಸಲು ಸಾಧ್ಯ’ ಎಂದರು.

ತಹಶೀಲ್ದಾರ್‌ಗೆ ತರಾಟೆ: ಪ್ರಕೃತಿ ವಿಕೋಪದ ಅಡಿಯಲ್ಲಿ ಮನೆಗಳು ಹಾನಿಗೆ ಒಳಗಾದರೆ ಎಷ್ಟು ಪರಿಹಾರ ನೀಡಲು ಅವಕಾಶ ಇದೆ ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡದ ತಹಶೀಲ್ದಾರ್‌ಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.

ಸಭೆಗೆ ಗೈರು: ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್‌, ನೆಲಮಂಗಲ ಶಾಸಕ ಡಾ.ಶ್ರೀನಿವಾಸ್‌ ಗೈರುಹಾಜರಾಗಿದ್ದರು.

ಸಭೆಯಲ್ಲಿ ಸಂಸತ್ ಸದಸ್ಯ ಬಿ.ಎನ್.ಬಚ್ಚೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್‌, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಸಿಇಒ ಆರ್.ಲತಾ, ಉಪವಿಭಾಗಾಧಿಕಾರಿ ಸಿ.ಮಂಜುನಾಥ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT