ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆ ಸ್ವಾವಲಂಬನೆಗೆ ಶ್ರೀರಕ್ಷೆ

Last Updated 8 ಮಾರ್ಚ್ 2023, 6:15 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ಸಕಾಲದಲ್ಲಿ ಅವಕಾಶ ಲಭಿಸಿದರೆ ಮಹಿಳೆಯರು ಕೂಡ ಸಾಧನೆ ಮಾಡಬಲ್ಲರು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಹೋಬಳಿಯ ಮಂಡಿಬೆಲೆ ಗ್ರಾಮ ಪಂಚಾಯಿತಿಗೆ ಸೇರಿದ ಧರ್ಮಪುರ ಗ್ರಾಮದ ಡಿ. ಅನಿತಮ್ಮ.

ಅನಿತಮ್ಮ ಹುಟ್ಟಿದ್ದು ರೈತ ಕುಟುಂಬದಲ್ಲಿ. ಕೇವಲ ಒಂಬತ್ತನೇ ತರಗತಿವರೆಗೂ ಓದಿರುವ ಅವರು ಮದುವೆಯಾಗಿ ಗಂಡನ ಮನೆಗೆ ಬಂದಾಗ ಒಂದು ಹಸುವಿನಿಂದ ಇಡೀ ಕುಟುಂಬದ ಜೀವನ ನಿರ್ವಹಣೆ ನಡೆಯುತ್ತಿತ್ತು. ಆರ್ಥಿಕವಾಗಿ ತುಂಬಾ ಇಕ್ಕಟ್ಟಿಗೆ ಸಿಲುಕಿದ್ದ ಕುಟುಂಬವನ್ನು ಹೇಗಾದರೂ ಮಾಡಿ ಪಾರು ಮಾಡಬೇಕೆಂದು ಅವರು ನಿರ್ಧರಿಸಿದರು. ಸ್ವಾವಲಂಬನೆ ಸಾಧಿಸಬೇಕು ಎನ್ನುವ ಛಲ ತೊಟ್ಟ ಅವರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದರು.

ಪ್ರಸ್ತುತ 15 ಹಸುಗಳು, 10 ಕುರಿಗಳನ್ನು ಸಾಕಾಣಿಕೆ ಮಾಡುತ್ತಿರುವ

ಅವರು ದಿನನಿತ್ಯ ಬೆಳಿಗ್ಗೆ ಮತ್ತು ಸಂಜೆ 180 ಲೀಟರ್ ಹಾಲನ್ನು ಡೇರಿಗೆ ಸರಬರಾಜು ಮಾಡುತ್ತಾರೆ. ತಿಂಗಳಿಗೆ ಅವರಿಗೆ ಸುಮಾರು ₹ 1.80 ಲಕ್ಷಕ್ಕೂ ಹೆಚ್ಚು ಹಣ ಬರುತ್ತದೆ. ಖರ್ಚು ಕಳೆದು ಸುಮಾರು ₹ 45 ಸಾವಿರ ಸಂಪಾದನೆ ಮಾಡುತ್ತಿದ್ದಾರೆ.

ಸರ್ಕಾರ ಒಂದು ಲೀಟರ್ ಹಾಲಿಗೆ ₹ 5 ಪ್ರೋತ್ಸಾಹಧನ ನೀಡುತ್ತದೆ. ಇದರಿಂದ ದಿನಕ್ಕೆ ₹ 900ರಂತೆ ತಿಂಗಳಿಗೆ ₹ 27 ಸಾವಿರ ಸಂಪಾದನೆ ಮಾಡುತ್ತಾರೆ. ಒಟ್ಟಾರೆ ತಿಂಗಳಿಗೆ ₹ 70 ಸಾವಿರ ಪಡೆಯುವ ಅವರ ವಾರ್ಷಿಕ ಸಂ‍‍ಪಾದನೆ ₹ 8.40 ಲಕ್ಷ. ಈ ಸಂಪಾದನೆಯಲ್ಲಿ ಸ್ವಾವಲಂಬನೆಯ ಜೀವನ ರೂಪಿಸಿಕೊಂಡು ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ತಮಗಿರುವ ಒಂದು ಎಕರೆ ಭೂಮಿಯಲ್ಲಿ ಹುಲ್ಲು, ಜೋಳ ಬೆಳೆಯುತ್ತಾರೆ. ಇದಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಕಡಿಮೆ ನೀರಿನಲ್ಲಿ ಉತ್ತಮ ಮೇವಿನ ಬೆಳೆಗಳು ಬೆಳೆದು ಹಸುಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಹಸುಗಳಿಗೆ ಹಸಿ ಹುಲ್ಲಿನ ಕೊರತೆ ಬಾರದಂತೆ ನೋಡಿಕೊಂಡಿದ್ದಾರೆ. ರಾಸುಗಳಿಗೆ ಆಹಾರ, ಚೆಕ್ಕೆ, ಬೂಸ ನೀಡುತ್ತಾರೆ.

ಅವರ ಸಾಧನೆ ಗುರುತಿಸಿರುವ ಚೆನ್ನೈ ಇಂಡಿಯನ್ ಡೈರಿ ಅಸೋಸೊಯೇಷನ್ ದಕ್ಷಿಣ ಭಾರತದ ವಿಭಾಗದಲ್ಲಿ ಚಿಕ್ಕವಯಸ್ಸಿನಲ್ಲಿಯೇ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿರುವ ಅತ್ಯುತ್ತಮ ರೈತ ಮಹಿಳೆ ಎಂದು ಡಾ.ವರ್ಗೀಸ್ ಕುರಿಯನ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಪರಿಶ್ರಮಕ್ಕೆ ಕುಟುಂಬದ ಸದಸ್ಯರು ಕೂಡ ಪ್ರೋತ್ಸಾಹ ನೀಡುತ್ತಿದ್ದಾರೆ.

‘ನಮ್ಮಿಂದ ಆಗುವುದಿಲ್ಲ ಎಂದು ಕೈಕಟ್ಟಿಕೊಂಡು ಕೂರಬಾರದು. ನಾವು ಮಾಡುವಂತಹ ಕೆಲಸದಲ್ಲಿ ಶ್ರದ್ಧೆ, ನಂಬಿಕೆ ಇರಬೇಕು. ಯಾವುದೇ ಕೆಲಸ ಮಾಡಿದರೂ ಪ್ರಾಮಾಣಿಕತೆಯಿಂದ ಮಾಡಬೇಕು. ಎಲ್ಲಾ ಸಂದರ್ಭದಲ್ಲೂ ನಾವು ಯಶಸ್ಸು ಕಾಣಲು ಸಾಧ್ಯವಾಗುವುದಿಲ್ಲ. ಆದರೆ, ನಮ್ಮ ಪ್ರಯತ್ನ ಯಶಸ್ಸಿನ ಕಡೆಗೆ ಸಾಗಬೇಕು’ ಎಂಬುದು ಡಿ. ಅನಿತಮ್ಮ ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT