ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರಿಗೆ ಮಾರಕ ಕಾಯ್ದೆ ಹಿಂಪಡೆಯಲು ಒತ್ತಾಯ

Last Updated 27 ಸೆಪ್ಟೆಂಬರ್ 2020, 3:02 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಕೇಂದ್ರ ಸರ್ಕಾರ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿರುವುದು ದಲಿತರಿಗೆ ಮಾರಕವಾಗಲಿದ್ದು ಹಿಂಪಡೆಯಬೇಕು’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಒತ್ತಾಯಿಸಿದರು.

ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೊದಲು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ಭೂಸ್ವಾಧೀನ ಪರಿಹಾರ, ಭೂಸುಧಾರಣೆ, ಎ.ಪಿ.ಎಂ.ಸಿ ಮುಂತಾದ ಕಾಯ್ದೆಗಳನ್ನು ಜಾರಿ ಮಾಡುತ್ತಿದೆ. ಇದು ದಲಿತರಿಗೆ, ರೈತರಿಗೆ ಮತ್ತು ಕಾರ್ಮಿಕರಿಗೆ ಅಪಾಯಕಾರಿ ಕಾಯ್ದೆಗಳಾಗಲಿವೆ. ಎ.ಪಿ.ಎಂ.ಸಿ ಕಾಯ್ದೆಗೆ ತಿದ್ದುಪಡಿ ಮಾಡುವುದರಿಂದ ರೈತರಿಗೆ ಅನನುಕೂಲವಾಗಲಿದೆ. ದಲ್ಲಾಳಿಗಳ ಕಾಟ ತಪ್ಪಲಿದೆ ಎಂಬುದು ಬರಿ ಭ್ರಮೆ, ಯಾವುದೇ ಉತ್ಪಾದಿತ ವಸ್ತುಗಳಿಗೆ ಮಾರುಕಟ್ಟೆ ಸೌಲಭ್ಯ ಅಗತ್ಯ. ಕಾಯ್ದೆಯಿಂದ ರೈತರು ನೇರವಾಗಿ ಮಾರಾಟ ಮಾಡಬಹುದಾದರೂ ರೈತರ ಬಳಿಗೆ ಬರುವವರು ಯಾರು, ಖರೀದಿಸಲು ನೇರವಾಗಿ ಬಂದರೂ ಅವರು ಕೇಳಿದ ಬೆಲೆಗೆ ನೀಡಬೇಕು. ಸೂಕ್ತ ಬೆಲೆ ಸಿಗದಿದ್ದ ಸಂದರ್ಭದಲ್ಲಿ ಧಾನ್ಯ ಇತರ ವಸ್ತುಗಳಿಗೆ ರೈತರು ನಿರಾಕರಿಸಬಹುದು. ಸೊಪ್ಪುಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಎಷ್ಟು ದಿನ ಇಟ್ಟುಕೊಳ್ಳಲು ಸಾಧ್ಯ’ ಎಂದು ಆರೋಪಿಸಿದರು.

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಪ್ರಧಾನ ಸಂಚಾಲಕ ಅತ್ತಿಬೆಲೆ ನರಸಪ್ಪ ಮಾತನಾಡಿ, ‘ಪರಿಶಿಷ್ಟರು ಸ್ವಾಧೀನದಲ್ಲಿರುವ ತಮ್ಮ ಜಮೀನುಗಳಿಗೆ ಸಾಗುವಳಿ ಹಕ್ಕು ಪಡೆದು 20 ವರ್ಷದವರೆಗೆ ಪರಭಾರೆ ಮಾಡುವಂತಿಲ್ಲ. ಅನೇಕ ದಲಿತರ ಪಿತ್ರಾರ್ಜಿತ ಭೂಮಿ ವಿವಿಧ ರೀತಿಯಲ್ಲಿ ಮಾರಾಟ ಮಾಡಲಾಗಿದ್ದು ಜಮೀನು ಹಿಂಪಡೆಯಲು ಪಿ.ಟಿ.ಸಿ.ಎಲ್ ಪ್ರಕರಣ ದಾಖಲಾಗಿವೆ. ಪ್ರಸ್ತುತ ಭೂಸುಧಾರಣೆ ಕಾಯ್ದೆಯಡಿ ಯಾರು ಬೇಕಾದರು ಎಷ್ಟು ಎಕರೆಯಾದರೂ ಜಮೀನು ಖರೀದಿಸಬಹುದು. ವಿಪರ್ಯಾಸವೆಂದರೆ ಪಿ.ಟಿ.ಸಿ.ಎಲ್ ಕಾಯ್ದೆ ಸತ್ತುಹೋಗಲಿದೆ, ಸಾವಿರಾರು ದಲಿತ ಕುಟುಂಬಗಳು ಬೀದಿಪಾಲಾಗಲಿದೆ ಎಂದು ದೂರಿದರು.

ವಿವಿಧ ಘಟಕ ಪದಾಧಿಕಾರಿಗಳಾದ ಮುನಿರಾಜು, ರಮೇಶ್, ಮುರುಳಿ, ಕೃಷ್ಣಪ್ಪನಾಯಕ, ಅಂಬರೀಷ್, ಅತ್ತಿಬೆಲೆ ಮುರುಳಿ, ರವಿಕುಮಾರ್, ಕೆಂಪರಾಜ್, ಪ್ರಕಾಶ್, ಮುನಿಯಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT