ದೊಡ್ಡಬಳ್ಳಾಪುರ: ಸತ್ತವರ ಹೆಸರನ್ನು ಪಡಿತರ ಚೀಟಿಯಿಂದ ಡಿಲೀಟ್ ಮಾಡಿಸಬೇಕೆಂದು ಸರ್ಕಾರ ಸಾಕಷ್ಟ ಅರಿವು ಮೂಡಿಸಿದರೂ ಜನ ಸತ್ತವರ ಹೆಸರಲ್ಲಿ ಪಡಿತರ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಪಡಿತರ ಚೀಟಿಯಲ್ಲಿ ಹೆಸರು ಇರುವ ಮನೆಯ ಯಜಮಾನಿಗೆ ‘ಗೃಹಲಕ್ಷ್ಮೀ’ ಯೋಜನೆಯಲ್ಲಿ ರಾಜ್ಯ ಸರ್ಕಾರ ₹2,000 ನೀಡುವ ಯೋಜನೆಯಿಂದಾಗಿ ತಾಲ್ಲೂಕಿನ ಪಡಿತರ ಚೀಟಿಯಲ್ಲಿ 13 ಸತ್ತವರ ಹೆಸರನ್ನು ಡಿಲೀಟ್ ಮಾಡಿಸದೇ ಪಡಿತರ ಪಡಿಯುತ್ತಿದ್ದು ಬೆಳಕಿಗೆ ಬಂದಿದೆ.
ಮನೆ ಯಜಮಾನಿಗೆ ಗೃಹಲಕ್ಷ್ಮಿ ಹಣ ಬರಲಿದೆ. ಇದಕ್ಕಾಗಿ ಮನೆ ಯಜಮಾನಿಯ ಹೆಸರನ್ನು ತಾಲ್ಲೂಕಿನಲ್ಲಿ ಹೊಸದಾಗಿ ಸೇರಿಸಲಾಗಿತಿದ್ದು, ಈ ಹಿಂದೆ ಯಜಮಾನಿ ಸ್ಥಾನದಲ್ಲಿದ್ದ ಸತ್ತವರ ಹೆಸರು ಡಿಲೀಟ್ ಮಾಡಿಸಲು ತಾಲ್ಲೂಕಿನ ಜನ ಮುಂದಾಗುತ್ತಿದ್ದಾರೆ.
ಇದರಿಂದಾಗಿ ಪ್ರತಿ ತಿಂಗಳು 1,300 ಕ್ವಿಂಟಾಲ್ ಅಕ್ಕಿ ಸರ್ಕಾರಕ್ಕೆ ಉಳಿತಾಯವಾಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರ ಸೇರಿದಂತೆ ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿಯೊಂದಿಗೆ ಗ್ರಾಹಕರು ಸಾಲುಗಟ್ಟಿ ನಿಂತು ಮರಣ ಪ್ರಮಾಣ ಪತ್ರ ನೀಡಿ ಪಡಿತರ ಚೀಟಿಯಲ್ಲಿನ ಹೆಸರು ತೆಗೆಸಿ ಹಾಕುತ್ತಿದ್ದಾರೆ. ಹಾಗೆಯೇ ಜೀವಂತವಾಗಿರುವ ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳನ್ನು ನೀಡುವ ಮೂಲಕ ಮನೆಯ ಯಜಮಾನಿಯ ಹೆಸರನ್ನು ಸೇರ್ಪಡೆ ಮಾಡುತ್ತಿದ್ದಾರೆ.
ಆಹಾರ ಇಲಾಖೆಯ ತಾಲ್ಲೂಕಿನ ಶಿರಸ್ತೆದಾರ್ ಶ್ರೀಧರ್ ನೀಡಿರುವ ಅಂಕಿ ಅಂಶದಂತೆ, ದೊಡ್ಡಬಳ್ಳಾಪುರದಲ್ಲಿ 2,912 ಅಂತ್ಯೋದಯ ಪಡಿತರ ಕಾರ್ಡ್(ಕಡುಬಡವರು), ಬಡತನ ರೇಖೆಗಿಂತಲು ಕೆಳಗಿನ (ಬಿಪಿಎಲ್) ಕಾರ್ಡ್‌ಗಳ ಸಂಖ್ಯೆ 66,624, ಬಡತನ ರೇಖೆಗಿಂತ ಮೇಲಿನ(ಎಪಿಎಲ್) 1,290 ಕಾರ್ಡ್‌ಗಳು ಇವೆ. ಈ ಎಲ್ಲಾ ಕಾರ್ಡ್‌ಗಳಿಂದ 13,000 ಜನ ಮರಣ ಹೊಂದಿರುವ ಹೆಸರು ತೆಗೆಯುವಂತೆ ಜನನ-ಮರಣ ನೋಂದಣಿ ಇಲಾಖೆಯ ‘ಇ-ಜನ್ಮ’ ವಿಭಾಗದಿಂದ ಮಾಹಿತಿ ಈ ಹಿಂದೆಯೇ ಬಂದಿದೆ ಎಂದರು.
ಮರಣ ಹೊಂದಿರುವವರ ಹೆಸರುಗಳು ಪ್ರತಿ ವರ್ಷವು ಬರುತ್ತಲೇ ಇರುತ್ತದೆ. ಮರಣ ಹೊಂದಿರುವವರ ಹೆಸರು ತೆಗೆಯುವ ಅವಕಾಶ ಆನ್‌ಲೈನ್ ಮೂಲಕ ಇಲಾಖೆಗೆ ಇರಲಿಲ್ಲ. ಆದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಕುಟುಂಬದ ಸದಸ್ಯರೆ ಮರಣ ಪ್ರಮಾಣ ಪತ್ರ ನೀಡಿ ತೆಗೆಸಬೇಕಿತ್ತು. ಕೆಲವರು ಮಾತ್ರ ತೆಗೆಸುತ್ತಿದ್ದರು. ಉಳಿದವರು ತೆಗೆಸದೆ ಹಾಗೆಯೇ ಪಡಿತರ ಪಡೆಯುತ್ತಿದ್ದರು. ಈಗ ಗೃಹಲಕ್ಷ್ಮೀ ಯೋಜನೆಯಲ್ಲಿ ಹಣ ಪಡೆಯಲು ಅನಿವಾರ್ಯವಾಗಿ ಮರಣ ಹೊಂದಿರುವವರ ಹೆಸರು ತೆಗೆಸಬೇಕು. ಹಾಗೆಯೇ ‘ಇಕೆವೈಸಿ’ ಮಾಡಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
***
ಅಂಕಿ- ಅಂಶ
2,912 ಅಂತ್ಯೋದಯ ಕಾರ್ಡ್
66,624 ಬಿಪಿಎಲ್ ಕಾರ್ಡ್
1,290 ಕಾರ್ಡ್
13,000 ಮರಣ ಹೊಂದಿರುವ ಸಂಖ್ಯೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.