ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಪಾವತಿ ವಿಳಂಬ, ಬಾಡಿಗೆ ಮನೆಗಳಿಗೆ ಬೀಗ

ಕಂಗಾಲಾದ ಬಾಡಿಗೆದಾರರ ಕಣ್ಣೀರು
Last Updated 21 ಜನವರಿ 2023, 11:07 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಖಾಸಗಿ ಬ್ಯಾಂಕ್‌ನಲ್ಲಿ ಮಾಡಿರುವ ಸಾಲ ತೀರಿಸಿಲ್ಲ ಎನ್ನುವ ಕಾರಣಕ್ಕೆ, 4ನೇ ವಾರ್ಡಿನಲ್ಲಿ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಬಾಡಿಗೆ ಮನೆಗಳಿಗೆ ಬೀಗ ಹಾಕಿದ್ದಾರೆ.

ನಿವಾಸಿ ಕೃಷ್ಣಪ್ಪ ಮಾತನಾಡಿ, ’ನಾವು ಸುಮಾರು 10 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ತಿಂಗಳಿಗೊಮ್ಮೆ ಬಾಡಿಗೆ ಕಟ್ಟುತ್ತಿದ್ದೇವೆ. ಆದರೆ, ಬ್ಯಾಂಕ್‌ನಿಂದ ಮೂರು ದಿನಗಳ ಹಿಂದೆ ಬಂದು ಮನೆ ಖಾಲಿ ಮಾಡುವಂತೆ ಹೇಳಿ ಹೋಗಿದ್ದರು. ಇದ್ದಕಿದ್ದಂತೆ ಖಾಲಿ ಮಾಡಿಕೊಂಡು ಎಲ್ಲಿಗೆ ಹೋಗಲು ಸಾಧ್ಯ. ಮನೆ ಸಾಮಾನು ಎತ್ತಿಕೊಳ್ಳುತ್ತೇವೆ ಎಂದು ಅಂಗಲಾಚಿದರೂ ಅವಕಾಶ ಕೊಡಲಿಲ್ಲ. ಪೊಲೀಸರೊಂದಿಗೆ ಬಲವಂತವಾಗಿ ಹೊರಗೆ ಕಳುಹಿಸಿ ಬೀಗಹಾಕಿದ್ದಾರೆ‘ ಎಂದು ಅಳಲು ತೋಡಿಕೊಂಡರು.

ಬಾಡಿಗೆಗೆ ಮನೆ ವಾಸಿ ವೀಣಾ ಶಿವರುದ್ರಪ್ಪ ಮಾತನಾಡಿ, ’ಯಜಮಾನರು ಕೆಲಸಕ್ಕೆ ಹೋಗಿದ್ದಾರೆ. ಮೊಮ್ಮಕ್ಕಳು ಶಾಲೆಗೆ ಹೋಗಿದ್ದಾರೆ. ಬಂದ ಮೇಲೆ ಬಟ್ಟೆ, ಪಾತ್ರೆಗಳನ್ನಾದರೂ ತೆಗೆದುಕೊಂಡು ಹೊರಗೆ ಹೋಗುತ್ತೇವೆ. ಒಂದು ಗಂಟೆ ಸಮಯ ಕೊಡಿ ಎಂದು ಅಂಗಲಾಚಿದರೂ ಕನಿಕರ ತೋರಿಸಲಿಲ್ಲ‘ ಎಂದು ಕಣ್ಣೀರು ಹಾಕಿದರು.

ಈ ಕುರಿತು ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಕೋರಮಂಗಲ ಶಾಖೆ ವ್ಯವಸ್ಥಾಪಕ ರಾಜು ಮಾತನಾಡಿ, 4ನೇ ವಾರ್ಡ್‌ನ ವಿ.ಮುನೀಂದ್ರ ಬ್ಯಾಂಕಿನಲ್ಲಿ ₹10 ಲಕ್ಷ ಸಾಲ ಪಡೆದಿದ್ದಾರೆ. 26ಕಂತು ಸಾಲ ಕಟ್ಟಿಲ್ಲ. ಒಟ್ಟು 18 ಲಕ್ಷ ಪಾವತಿಸಿಬೇಕು. ಹಲವು ಬಾರಿ ನೋಟಿಸ್‌ ನೀಡಿದರೂ ಸ್ಪಂದಿಸಿಲ್ಲ ಎಂದು ತಿಳಿಸಿದರು.

ಮನೆಗಳ ಮಾಲೀಕ ವಿ.ಮುನೀಂದ್ರ ಮಾತನಾಡಿ, ಖಾಸಗಿ ಬ್ಯಾಂಕಿನಲ್ಲಿ ಸಾಲ ಪಡೆದಿರುವುದು ನಿಜ. ಸಾಲ ಮರುಪಾವತಿಗೆ ಅವಕಾಶ ಕೇಳಿದ್ದೆ. ಆದರೆ, ಅವಕಾಶ ಕೊಟ್ಟಿಲ್ಲ. ಏಕಾಏಕಿ ಬಂದು ಬಾಡಿಗೆ ಮನೆಗಳಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಬ್ಯಾಂಕ್‌ನ ಮೇಲಧಿಕಾರಿಗಳೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸುತ್ತೇನೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಾ.ಈ. ರವಿಕುಮಾರ್ ಮಾತನಾಡಿ, ಬಾಡಿಗೆದಾರರು
ನಿರಾಶ್ರಿತರಾಗದಂತೆ ಪುರಸಭೆ ಅಧಿಕಾರಿಗಳೊಂದಿಗೆ ಮಾತನಾಡಿ ಆಶ್ರಯ ಕಲ್ಪಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT