ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ವಿಳಂಬ: ಚುನಾವಣೆ ನೆರಳು?

ಇಎಸ್‌ಐ ಆಸ್ಪತ್ರೆ ನಿಧಾನಗತಿ ಕಾಮಗಾರಿಗೆ ಕಾರ್ಮಿಕರ ಆಕ್ರೋಶ
Last Updated 16 ಸೆಪ್ಟೆಂಬರ್ 2022, 4:01 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಅರೆಹಳ್ಳಿಗುಡ್ಡದಹಳ್ಳಿ ಸಮೀಪ ಒಂಬತ್ತು ವರ್ಷಗಳ ಹಿಂದೆ ಶಂಕುಸ್ಥಾಪನೆಯಾದ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ನಿರ್ಮಾಣ ಕಾಮಗಾರಿ ಈಗಷ್ಟೇ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಆದರೆ, ಉದ್ಘಾಟನೆ ಭಾಗ್ಯ ಇನ್ನೂ ದೊರೆತಿಲ್ಲ.

2014ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಹಲವಾರು ಕಾನೂನು ತೊಡಕುಗಳಿಂದ ಕುಂಟುತ್ತಾ ಸಾಗಿದ್ದ ಇಎಸ್‌ಐ ಆಸ್ಪತ್ರೆ ಕಟ್ಟಡ ಕಾಮಗಾರಿ ಈಗಷ್ಟೇ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ನಿಧಾನಗತಿಯ ಕಾಮಗಾರಿ ಮತ್ತು ಆಸ್ಪತ್ರೆ ಉದ್ಘಾಟನೆಯ ವಿಳಂಬ ಧೊರಣೆ ಹಿಂದೆ ಚುನಾವಣೆ ರಾಜಕೀಯ ಕೆಲಸ ಮಾಡುತ್ತಿದೆ ಎನ್ನುತ್ತವೆ ಕಾರ್ಮಿಕ ಸಂಘಟನೆಗಳು.

‘ಚುನಾವಣೆ ಹತ್ತಿರ ಬಂದಾಗ ಉದ್ಘಾಟನೆ ಮಾಡುವ ಮೂಲಕ ಪ್ರಚಾರಗಿಟ್ಟಿಸಿಕೊಳ್ಳುವ ಉದ್ದೇಶದಿಂದಲೇ ಕೆಲ ಸಣ್ಣಪುಟ್ಟ ಕಾಮಗಾರಿಗಳನ್ನು ಬಾಕಿ ಉಳಿಸಿಕೊಂಡು ನಿಧಾನಗತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಸರ್ಕಾರ ಕೈಗಾರಿಕೆಗಳ ಸ್ಥಾಪನೆ ಮತ್ತು ವಿಸ್ತರಣೆಗೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಕಾರ್ಮಿಕರ ಆರೋಗ್ಯದ ಕಡೆಗೆ ನೀಡುತ್ತಿಲ್ಲ’ ಎನ್ನುವುದು ಸ್ಥಳೀಯ ಕಾರ್ಮಿಕ ಸಂಘಟನೆಗಳ ವಾದ.

‘ವಾರದ ಹಿಂದೆಯಷ್ಟೇ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸರ್ಕಾರದ ಮೂರು ವರ್ಷದ ಸಾಧನೆ ಬಿಂಬಿಸುವ ‘ಜನಸ್ಪಂದನ’ ಕಾರ್ಯಕ್ರಮ ನಡೆಸಿದರು. ಕಾರ್ಮಿಕರ ಆರೋಗ್ಯ ಸೇವೆಗೆ ಸಿದ್ದವಾಗಿದ್ದ ಇಎಸ್‌ಐ ಆಸ್ಪತ್ರೆಯನ್ನಾದರೂ ಈ ಸಮಯದಲ್ಲಿ ಉದ್ಘಾಟನೆ ಮಾಡಿದ್ದರೆ ಕಾರ್ಮಿಕರು ಸದಾ ನೆನೆಯುತ್ತಿದ್ದರು’ ಎನ್ನುತ್ತಾರೆ ಸಿಐಟಿಯು ಜಿಲ್ಲಾ ಘಟಕದ ಉಪಾಧ್ಯಕ್ಷ ಪಿ.ಎ.ವೆಂಕಟೇಶ್‌.

ರಾಜಕೀಯ ಲಾಭನಷ್ಟದ ಲೆಕ್ಕಾಚಾರ ಬದಿಗೊತ್ತಿ ಕಾರ್ಮಿಕರ ಆರೋಗ್ಯದ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಇಎಸ್‌ಐ ಆಸ್ಪತ್ರೆಯನ್ನು ಶೀಘ್ರವಾಗಿ ಉದ್ಘಾಟಿಸಬೇಕು. ಇದೇ ರೀತಿಯ ವಿಳಂಬ ದೋರಣೆ ಮಾಡುತ್ತಲೇ ಇದ್ದರೆ ಆಸ್ಪತ್ರೆ ಮುಂದೆಯೇ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT