ಆನೇಕಲ್: ಗೌರಿ ಗಣಪತಿ ಹಬ್ಬಕ್ಕೆ ವಿಶೇಷ ಆಕರ್ಷಣೆ ಗೌರಿ ಗಣಪನ ಮೂರ್ತಿಗಳು. ಪಟ್ಟಣದ ಕಲಾವಿದ ನಂಜುಂಡೇಶ್ವರ ಅವರ ಮನೆಯಲ್ಲಿ ತಯಾರಿಸಿರುವ ಬಗೆಬಗೆ ಗಣಪನ ಮೂರ್ತಿಗಳು ಹಾಗೂ ಮುದ್ದು ಮುದ್ದಾದ ಗುಂಡು ಗೌರಮ್ಮನ ಮೂರ್ತಿಗಳು ಎಲ್ಲರ ಆಕರ್ಷಣೆ ಆಗಿದೆ.
ಐದು ದಶಕಗಳಿಂದಲೂ ವಿಶಿಷ್ಟ ಗಣಪತಿಗಳನ್ನು ತಯಾರು ಮಾಡುವಲ್ಲಿ ತನ್ನದೇ ಹೆಗ್ಗಳಿಕೆ ಹೊಂದಿದ್ದಾರೆ. ತಾಲ್ಲೂಕಿನ ಹಲವು ಗ್ರಾಮಗಳ ಜನರು ಮತ್ತು ನೆರೆಯ ತಮಿಳುನಾಡಿನ ಕೆಲವು ಪ್ರದೇಶಗಳ ಜನರು ಗೌರಿ ಗಣಪತಿ ವಿಗ್ರಹಗಳನ್ನು ಖರೀದಿಸಲು ಆನೇಕಲ್‌ನ ಕಲಾವಿದ ಎಸ್.ನಂಜುಂಡೇಶ್ವರ ಅವರ ಮನೆಗೆ ಬರುವುದು ವಿಶೇಷ.
ಗಣಪನ ಮೂರ್ತಿಗಳಲ್ಲಿ ಪೌರಾಣಿಕೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯೊಂದಿಗೆ ಸಿದ್ಧಪಡಿಸಿ ಜನರ ಬೇಡಿಕೆಗೆ ಅನುಗುಣವಾಗಿ ಸಿದ್ಧಪಡಿಸುವ ಕೌಶಲ ನಂಜುಂಡೇಶ್ವರ ಅವರ ಕುಟುಂಬಕ್ಕೆ ಕರಗತವಾಗಿದೆ. ಅವರ ತಾಯಿ ಮುತ್ತಮ್ಮ ಸೇರಿದಂತೆ ಕುಟುಂಬದ ಎಲ್ಲರೂ ಪಾಲ್ಗೊಂಡು ಗೌರಿ–ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ.
ಈ ಬಾರಿ ರೂಪಿಸಿರುವ ಗಣಪತಿಗಳಲ್ಲಿ ಅಯೋಧ್ಯೆ ಬಾಲರಾಮ ಗಣಪತಿ, ರಾಘವೇಂದ್ರಸ್ವಾಮಿ ಗಣಪತಿ, ಯಕ್ಷಗಾನ ಗಣಪತಿ, ಸಂಗೀತ ಗಣಪತಿ, ಶುಕ ಗಣಪತಿ (ಗಿಣಿ), ಶಿವಾಜಿ ಗಣಪತಿ, ಮಯೂರ ಗಣಪತಿ ಸೇರಿದಂತೆ ವಿವಿಧ ರೂಪಗಳಲ್ಲಿ ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸಿದ್ದು ಸುಂದರ ಗಣಪತಿಗಳನ್ನು ಒಂದೆಡೆ ಕಣ್ತುಂಬಿಕೊಳ್ಳುವುದೇ ಆನಂದ.
ಒಂದೊಂದು ಗಣಪ ಕೂಡ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಬಗೆ ಬಗೆ ಗಣಪನನ್ನು ನೋಡಲು ಸಾರ್ವಜನಿಕರು ಗುಂಪು ಗುಂಪಾಗಿ ನಂಜುಂಡೇಶ್ವರ ಅವರ ಮನೆಗೆ ತೆರಳಿ ತಮಗೆ ಇಷ್ಟವಾದ ಗಣಪನನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ. ಪರಿಸರ ಸ್ನೇಹಿ ಗಣಪನ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ ಪರಿಸರ ಸ್ನೇಹಿ ಗಣಪನ ಮೂರ್ತಿಗಳನ್ನು ಸಿದ್ಧಪಡಿಸಲಾಗಿದೆ.
ಆನೇಕಲ್‌ನ ಪಸುವಲಪೇಟೆಯಲ್ಲಿರುವ ಭಜನೆಮನೆ ರಸ್ತೆ ಮುತ್ತಮ್ಮ ಅವರ ಕುಟುಂಬಕ್ಕೆ ಗಣಪತಿಗಳನ್ನು ತಯಾರು ಮಾಡುವಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆ ಇದೆ. ಮುತ್ತಮ್ಮ ಅವರು ಕಳೆದ ಆರು ದಶಕಗಳಿಗೂ ಹೆಚ್ಚು ಕಾಲದಿಂದ ಗಣಪತಿ ತಯಾರು ಮಾಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.
ಆರು ತಿಂಗಳು ಸಿದ್ಧಪಡಿಸುವ ಕೆಲಸ ಆನೇಕಲ್‌ನ ಕಲಾವಿರ ನಂಜುಂಡೇಶ್ವರ ಅವರು ವಿವಿಧ ಬಗೆ ಗಣಪತಿಗಳನ್ನು ತಯಾರು ಮಾಡುವಲ್ಲಿ ಖ್ಯಾತ ಪಡೆದಿದ್ದಾರೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಗಣಪತಿ ಸಿದ್ದಪಡಿಸುತ್ತಾರೆ. ನಂಜುಂಡೇಶ್ವರ ಅವರಿಗೆ ತಮ್ಮ ಕುಟುಂಬದ ಎಲ್ಲ ಸದಸ್ಯರು ಸಹಕಾರ ನೀಡುತ್ತಾರೆ. ತಮ್ಮ ಮಕ್ಕಳು ಸಿದ್ಧಪಡಿಸುವ ಗೌರಿ ಗಣಪನ ಮೂರ್ತಿಗಳಿಗೆ ನಂಜುಂಡೇಶ್ವರ ಅವರ ತಾಯಿ ಮುತ್ತಮ್ಮ ಅಂತಿಮ ಸ್ಪರ್ಶ ನೀಡುತ್ತಾರೆ. ಮುತ್ತಮ್ಮ ಅವರ ಮಕ್ಕಳಾದ ನಂಜುಂಡೇಶ್ವರ ವೇಣುಗೋಪಾಲ ನಾಗರಾಜ ಸೊಸೆಯರಾದ ಕಾತ್ಯಾಯಿಣಿ ಲೀಲಾವತಿ ಮಹೇಶ್ವರಿ ಮತ್ತು ಮೊಮ್ಮಕ್ಕಳು ಸೇರಿದಂತೆ ಮನೆ ಮಂದಿಯೆಲ್ಲ ಗೌರಿ ಗಣಪನ ಮೂರ್ತಿಗಳನ್ನು ಸಿದ್ಧಪಡಿಸುವ ಕಾಯಕದಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲ ತೊಡಗಿಸಿಕೊಂಡು ಗಣಪನ ಮೂರ್ತಿಗಳನ್ನು ಸಿದ್ಧಪಡಿಸುತ್ತಾರೆ. ಈ ವರ್ಷ ಮೂರು ಟ್ಯಾಕ್ಟರ್ ಮಣ್ಣು ತಂದು ಗಣಪತಿ ಸಿದ್ಧತೆ ಮಾಡಲಾಗಿದೆ ಎಂದು ಕಲಾವಿದ ನಂಜುಂಡೇಶ್ವರ ತಿಳಿಸಿದರು. ಬೆಂಗಳೂರು ಆನೇಕಲ್ ತಾಲ್ಲೂಕಿನ ಚಂದಾಪುರ ಹೆಬ್ಬಗೋಡಿ ವಿವಿಧ ಗ್ರಾಮಗಳ ಜನರು ಗಣಪತಿ ಕೊಳ್ಳಲು ಆಗಮಿಸುತ್ತಾರೆ. ನೆರೆಯ ತಮಿಳುನಾಡಿನ ಡೆಂಕಣಿಕೋಟೆ ಹೊಸೂರು ಥಳೀ ಸೇರಿದಂತೆ ಗಡಿ ಗ್ರಾಮಗಳ ಜನರು ಬರುತ್ತಾರೆ. ಗಣಪನ ಮೂರ್ತಿಗಳು ₹200ನಿಂದ ₹20ಸಾವಿರ ವರೆಗೆ ಮಾರಾಟವಾಗುತ್ತವೆ. ಗಾತ್ರ ಶೈಲಿಗಳಿಗೆ ತಕ್ಕಂತೆ ಬೆಲೆ ನಿಗದಿ ಮಾಡಲಾಗುತ್ತದೆ ಎಂದು ಮುತ್ತಮ್ಮ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.