ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾ.ಸದಾಶಿವ ವರದಿ ಅನುಷ್ಠಾನಗೊಳಿಸದಿದ್ದರೆ ರಾಜ್ಯದಾದ್ಯಂತ ಹೋರಾಟ: ಬಿಜ್ಜವಾರ

Last Updated 18 ಸೆಪ್ಟೆಂಬರ್ 2020, 6:11 IST
ಅಕ್ಷರ ಗಾತ್ರ

ವಿಜಯಪುರ: ದಲಿತರಲ್ಲಿ ಬಹುಸಂಖ್ಯಾತರಾಗಿರುವ ಮಾದಿಗ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿ ಅನುಷ್ಠಾನಗೊಳಿಸದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡುವುದು ಅನಿವಾರ್ಯಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ, ಸದಾಶಿವ ಆಯೋಗದ ಹೋರಾಟಗಾರ ಬಿಜ್ಜವಾರ ನಾಗರಾಜ್‌ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘30 ವರ್ಷಗಳಿಂದ ಪರಿಶಿಷ್ಟ ಜಾತಿಯ ಎಡಗೈ ಮಾದಿಗ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡುವಂತೆ ಹೋರಾಟ ನಿರಂತರವಾಗಿ ನಡೆಯುತ್ತಿವೆ. ನಮ್ಮನ್ನು ಆಳುವ ಪಕ್ಷಗಳು ಸಮುದಾಯದ ಬೇಡಿಕೆ ಬಗ್ಗೆ ತಿರಸ್ಕಾರ ಮನೋಭಾವದಿಂದ ನೋಡುತ್ತಿರುವುದು ದೊಡ್ಡ ದುರಂತವಾಗಿದೆ’ ಎಂದರು.

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸರ್ಕಾರಕ್ಕೆ 2012ರಲ್ಲಿ ಸಲ್ಲಿಸಲಾಗಿದೆ. ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲು ಇದುವರೆಗೂ ಯಾವುದೇ ಸರ್ಕಾರಗಳೂ ಮುಂದಾಗಿಲ್ಲ. ಈ ಹಿಂದಿನ ಕಾಂಗ್ರೆಸ್‌ ಸರ್ಕಾರದ ಹಾದಿಯಾಗಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರ, ಅದಕ್ಕೂ ಮೊದಲು ಬಿಜೆಪಿ ಸರ್ಕಾರವೂ ಸ್ಪಂದಿಸಲಿಲ್ಲ. ಈಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಸಮುದಾಯದ ಪ್ರಮುಖ ಬೇಡಿಕೆ ಒಪ್ಪಿಕೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಅದನ್ನು ಈಗಿನ ಸರ್ಕಾರ ವಿಧಾನ ಮಂಡಲ ಅಧಿವೇಶನದಲ್ಲಿ ಮಾಡದಿದ್ದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ’ ಎಂದರು.

‘ಶತಮಾನಗಳಿಂದ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಮಾದಿಗ ಸಮುದಾಯಕ್ಕೆ ಶೇ 15 ಮೀಸಲಾತಿ ಕಲ್ಪಿಸಬೇಕು. ಉದ್ಯೋಗ, ಶಿಕ್ಷಣ, ರಾಜಕೀಯ ಮೀಸಲಾತಿಯಲ್ಲಿ ಮಾದಿಗ ಸಮುದಾಯಕ್ಕೆ ದೊಡ್ಡ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದೆ. ನಿಜವಾದ ದಲಿತರಾಗಿರುವ ಹೊಲೆ, ಮಾದಿಗರಿಗೆ ಸರ್ಕಾರದ ಯಾವುದೇ ಸೌಕರ್ಯ ಸಿಗುತ್ತಿಲ್ಲ. ನಿಜವಾಗಿ ಅಸ್ಪೃಶ್ಯತೆಯ ನೋವನ್ನು ಅನುಭವಿಸದೇ ಇರುವಂತಹವರು ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ’ ಎಂದರು.

‘ಒಳಮೀಸಲಾತಿ ಜಾರಿಯಾದರೆ, ಯಾವುದೇ ಸಮುದಾಯಗಳಿಗೂ ಅನ್ಯಾಯವಾಗುವುದಿಲ್ಲ. ಅವರವರ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಅವರು ಮೀಸಲಾತಿ ಪಡೆದುಕೊಳ್ಳಲಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿರುವ ಪರಿಶಿಷ್ಟ ಜಾತಿಯಲ್ಲಿನ ಇತರ ಸಮುದಾಯಗಳ ನಾಯಕರು, ಜನಸಂಖ್ಯೆ ಹಾಗೂ ಒಳಮೀಸಲಾತಿಯಿಂದ ಆಗುವಂತಹ ಪ್ರಯೋಜನಗಳ ಕುರಿತು ಅರಿತುಕೊಳ್ಳಬೇಕು. ವಿನಾಕಾರಣ ವಿರೋಧಿಸುವುದು ಸರಿಯಲ್ಲ’ ಎಂದರು.

‘ನಾವು ಯಾರ ಹಕ್ಕುಗಳನ್ನು ಕಸಿದುಕೊಳ್ಳಲು ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವಂತೆ ಕೇಳುತ್ತಿಲ್ಲ. ಸಂವಿಧಾನದಡಿಯಲ್ಲಿ ನಮಗೆ ಸಿಗಬೇಕಾಗಿರುವ ಹಕ್ಕುಗಳನ್ನೆ ಕೇಳುತ್ತಿದ್ದೇವೆ. ಮಾದಿಗ ಸಮುದಾಯದ ಶೇ 80ರಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಎಸ್ಎಸ್ಎಲ್‌ಸಿ ನಂತರದ ಶಿಕ್ಷಣ ಕನಸಾಗಿ ಉಳಿಯುತ್ತಿದೆ. ಉನ್ನತ ಹುದ್ದೆಗಳನ್ನು ಅಲಂಕರಿಸಿಲ್ಲ. ರಾಜಕೀಯವಾಗಿ ಸಬಲರಾಗುತ್ತಿಲ್ಲ. ನಮಗೆ ಅನ್ಯಾಯವಾಗುತ್ತಿದ್ದರೂ ನಾವು ಇದುವರೆಗೂ ಕೈ ಕಟ್ಟಿಕೊಂಡು ಕುಳಿತಿದ್ದೇವೆ. ಇನ್ನು ನಮಗೆ ಅನ್ಯಾಯ ಮಾಡಿಕೊಂಡು ನಮಗೆ ನಾವೇ ಶೋಷಣೆ ಮಾಡಿಕೊಳ್ಳಲಿಕ್ಕೆ ನಾವು ತಯಾರಿಲ್ಲ. ನಾವೂ ಕೂಡಾ ಸರ್ಕಾರದ ವಿರುದ್ಧ ಬೀದಿಗಿಳಿಯಬೇಕಾಗಿರುವುದು ಅನಿವಾರ್ಯವಾಗಲಿದೆ’ ಎಂದರು.

ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು, ‘ಈ ದೇಶದ ಶೋಷಿತರ, ದಲಿತರ ಏಳಿಗೆಗಾಗಿ ಮೀಸಲಾತಿಯನ್ನು ಕಲ್ಪಿಸಿಕೊಟ್ಟಿದ್ದರು. ಆದರೆ, ಕೆಲ ರಾಜಕಾರಣಿಗಳ ಕುತಂತ್ರದಿಂದ ಅಂಬೇಡ್ಕರ್‌ ಅವರ ಮೂಲ ಆಶಯವೇ ಈಡೇರುತ್ತಿಲ್ಲ. ಬೇಡಿಕೆಗೆ ಆಗ್ರಹಿಸಿ ಕೂಡಲ ಸಂಗಮದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನವರೆಗೆ ಮಾದಿಗರ ಬೃಹತ್‌ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಹುಬ್ಬಳ್ಳಿ ಸಮಾವೇಶದಲ್ಲೂ ಆಶ್ವಾಸನೆ ನೀಡಲಾಗಿತ್ತು. ಯಾವುದನ್ನೂ ಈಡೇರಿಸಲಿಲ್ಲ. ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಶೇಷ ಅಧಿವೇಶನ ಕರೆದು, ಮೀಸಲಾತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳು ಕೂಡ ವಿಶೇಷ ಅಧಿವೇಶನ ಕರೆಯುವಂತೆ ಒತ್ತಡ ಹೇರಬೇಕು. ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡ ಬೇಕು. ಜತೆಗೆ ಸಮಾಜದ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT