ರಸ್ತೆ ವಿಭಜಕ ತೆರವಿಗೆ ಆಗ್ರಹ: ಸಮಸ್ಯೆ ಪರಿಹರಿಸದಿದ್ದರೆ ಮತದಾನ ಬಹಿಷ್ಕಾರ

ಶುಕ್ರವಾರ, ಏಪ್ರಿಲ್ 19, 2019
22 °C
ಗ್ರಾಮಸ್ಥರ ಎಚ್ಚರಿಕೆ

ರಸ್ತೆ ವಿಭಜಕ ತೆರವಿಗೆ ಆಗ್ರಹ: ಸಮಸ್ಯೆ ಪರಿಹರಿಸದಿದ್ದರೆ ಮತದಾನ ಬಹಿಷ್ಕಾರ

Published:
Updated:
Prajavani

ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿಗೆ ಹಾಕಲಾಗಿರುವ ರಸ್ತೆ ವಿಭಜಕ ತೆರವುಗೊಳಿಸಬೇಕು, ಇಲ್ಲದಿದ್ದಲ್ಲಿ ಏ.18 ರಂದು ಮತದಾನ ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಪಟ್ಟು ಹಿಡಿದ ಘಟನೆ ಮಂಗಳವಾರ ತಾಲ್ಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ನಡೆಯಿತು.

ವಿಭಜಕ ಸಮಸ್ಯೆ ಕುರಿತು ಸಹಾಯಕ ಚುನಾವಣಾಧಿಕಾರಿ ಬಾಳಪ್ಪ ಹಂದಿಗುಂದ ನೇತೃತ್ವದಲ್ಲಿ ನಡೆದ ಸ್ಥಳೀಯ ಗ್ರಾಮಸ್ಥರ ಸಭೆಯಲ್ಲಿ ಕನ್ನಮಂಗಲ ಪಾಳ್ಯದ ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್ ಮಾತನಾಡಿದರು.

ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರ ಕನ್ನಮಂಗಲ ಪಾಳ್ಯದ ಗೇಟ್‌ನಲ್ಲಿ ಎರಡೂವರೆ ವರ್ಷಗಳಿಂದ ಸಂಪರ್ಕ ಕಡಿತಗೊಳಿಸಿ ಸಿಮೆಂಟ್ ದಿಮ್ಮಿಗಳನ್ನು ಜೋಡಣೆ ಮಾಡಲಾಗಿದೆ. ಒಂದಿಬ್ಬರು ಅಪಘಾತದಲ್ಲಿ ಮಡಿದರು ಎಂಬ ಏಕೈಕ ಕಾರಣದಿಂದ ಹತ್ತಾರು ಗ್ರಾಮಗಳಿಗೆ ನೆರವಾಗುವ ಸಂಪರ್ಕ ರಸ್ತೆಯನ್ನು ಬಂದ್ ಮಾಡಿದರೆ ಸ್ಥಳೀಯರ ಪರಿಸ್ಥಿತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಪಘಾತಕ್ಕೆ ವೈಜ್ಞಾನಿಕ ಕಾರಣ ಹುಡುಕುವಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಫಲರಾಗಿದ್ದಾರೆ. ಸಂಪರ್ಕ ರಸ್ತೆ ಬಂದ್ ಮಾಡಿದ್ದರೂ ಅಪಘಾತಗಳು ನಿಂತಿಲ್ಲ. ಕೂಲಿ ಕಾರ್ಮಿಕರು ಪೋಷಕರು, ರೈತರು ಐದಾರು ಕಿ.ಮೀ ಸುತ್ತಿ ಬಳಸಿ ಗ್ರಾಮಗಳಿಗೆ ತೆರಳಬೇಕು ಎಂದರು.

ಬಿಎಂಟಿಸಿ ಬಸ್ ಮತ್ತು ಶಾಲಾ ಬಸ್‌ಗಳು ಸ್ಥಗಿತಗೊಂಡಿವೆ. ಅನೇಕ ಬಾರಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಿಲ್ಲವೆಂದರೆ ನಮಗೆ ಮತದಾನ ಬಹಿಷ್ಕರಿಸುವ ಮಾರ್ಗ ಬಿಟ್ಟರೆ ಬೇರೆ ಗತಿ ಇಲ್ಲ ಎಂದು ಹರಿಹಾಯ್ದರು.

ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರ್ ಮತ್ತು ಮುಖಂಡ ನಾರಾಯಣಪ್ಪ ಮಾತನಾಡಿ, ಒಂದು ಸಂಪರ್ಕ ರಸ್ತೆ ಬಂದ್ ನಿಂದ 28ಕ್ಕೂ ಹೆಚ್ಚು ಗ್ರಾಮದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಪರಿಪರಿಯಾಗಿ ತಹಶೀಲ್ದಾರ್‌ಗೆ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ನೀಡಿದ ಲಿಖಿತ ಮನವಿಯನ್ನು ಕಸದ ಬುಟ್ಟಿಗೆ ಹಾಕುತ್ತಿದ್ದಾರೆ ಎಂದರು.

ಏ.15 ರೊಳಗೆ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದಲ್ಲಿ ಏ.18 ರಂದು ಮತದಾನದ ದಿನ 28 ಗ್ರಾಮಗಳ ಸ್ಥಳೀಯರು ರಸ್ತೆ ವಿಭಜಕ ತೆರವುಗೋಳಿಸಲು ರಸ್ತೆ ಬಂದ್ ಮಾಡಿ ಪ್ರತಿಭಟಿಸುತ್ತೇವೆ. ಜೈಲಿಗೆ ಹೋಗಲೂ ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !