ಶಾಸನಗಳ ಪತ್ತೆ: ವಾಸ್ತವಾಂಶ ತಿಳಿಸಲು ಆಗ್ರಹ

ಮಂಗಳವಾರ, ಜೂಲೈ 23, 2019
27 °C

ಶಾಸನಗಳ ಪತ್ತೆ: ವಾಸ್ತವಾಂಶ ತಿಳಿಸಲು ಆಗ್ರಹ

Published:
Updated:
Prajavani

ದೇವನಹಳ್ಳಿ: ತಾಲ್ಲೂಕಿನಲ್ಲಿ ಕಳೆದ ಐದು ವರ್ಷಗಳಿಂದ ನೂರಾರು ಶಾಸನಗಳನ್ನು ಪತ್ತೆ ಹಚ್ಚಲಾಗಿದ್ದು ಸಂಬಂಧಿಸಿದ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು ಅಧ್ಯಯನ ನಡೆಸಿ ಇತಿಹಾಸದ ವಾಸ್ತವನ್ನು ತಿಳಿಸಬೇಕಾಗಿದೆ ಎಂದು ಶಾಸನಗಳ ಪತ್ತೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಬಿಟ್ಟಸಂದ್ರ ಗುರುಸಿದ್ಧಯ್ಯ ಒತ್ತಾಯಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಇಲ್ಲಿನ ಬಿನ್ನಮಂಗಲ ಕೆರೆ ತೂಬಿಗೆ ಅಳವಡಿಸಿರುವ ಕಲ್ಲಿನಲ್ಲಿ ಕೆತ್ತಲಾಗಿರುವ ಗಜಲಕ್ಷ್ಮೀ ಮತ್ತು ನೂರಕ್ಕೂ ಹೆಚ್ಚು ತಮಿಳು, ಕನ್ನಡ ಮತ್ತು ಸಂಸ್ಕೃತ ಅಕ್ಷರಗಳಿವೆ. ತಾಲ್ಲೂಕಿಗೆ ಸಂಬಂಧಿಸಿದ ಶಾಸನಗಳನ್ನು ಡಾ.ಬಿ.ಎಲ್. ರೈಸ್ ಅವರು ಪ್ರಕಟಿಸಿರುವ 9ನೇ ಸಂಪುಟದಲ್ಲಿ ಅನೇಕ ಶಾಸನಗಳನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದರು.

‘ಕನ್ನಡ ಲಿಪಿ 80, ತಮಿಳು ಲಿಪಿ 15, ಸಂಸ್ಕೃತ ಲಿಪಿ 5 ಶಾಸನಗಳಿವೆ. ಕೆಲವು ಲಿಪಿಯ ಕೆತ್ತನೆ ಕಲ್ಲುಗಳು ತುಂಡಾಗಿವೆ. ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಅಧಿಕಾರಿಗಳು ನೂತನ ಸಂಶೋಧನೆ ಮತ್ತು ಅಧ್ಯಯನದ ಬಗ್ಗೆ ಒತ್ತು ನಿಡಬೇಕು’ ಎಂದು ಆಗ್ರಹಿಸಿದರು.

‘ತಾಲ್ಲೂಕಿನಲ್ಲಿ ಶಾಸನಗಳು, ಮಾಸ್ತಿಗಲ್ಲು, ವೀರಗಲ್ಲು ದೇವಾಲಯ, ಪಾಳು ಬಿದ್ದ ಐತಿಹಾಸಿಕ ಕಟ್ಟಡಗಳಲ್ಲಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಅನೇಕ ಕುರುಹುಗಳು, ಶಿಲ್ಪಗಳು ಹೊರಜಗತ್ತಿಗೆ ಬೆಳಕಿಗೆ ಬಂದಿವೆ. ಅರದೇಶನಹಳ್ಳಿ ಬಳಿ ಇರುವ ರಾಷ್ಟ್ರಕೂಟರ ಶಾಸನ, ಚೋಳ ಮತ್ತು ಚಾಲುಕ್ಯರ ಕಾಲದ ಬ್ಯಾಡರಹಳ್ಳಿ ಶಾಸನ, ಕಾರಹಳ್ಳಿ ಬಳಿಯ ತುರುಗೋಳ್ ಶಾಸನ, ನಂದಿಬೆಟ್ಟ ಕ್ರಾಸ್ ಬಳಿ ಇರುವ ಕುರುವತ್ತಿ ಶಾಸನಕ್ಕಿಂತ ಬನ್ನಿಮಂಗಲ ಕೆರೆ ತೂಬಿನ ಕಲ್ಲಿನ ಮೇಲೆ ಕೆತ್ತಲಾಗಿರುವ ಶಾಸನ ವಿಶೇಷವಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !