ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ಬಳ್ಳೂರು ಮುಖ್ಯರಸ್ತೆ

ದ್ವಿಚಕ್ರವಾಹನ ಸವಾರರ ಸುಗಮ ಸಂಚಾರಕ್ಕೆ ಸಂಚಕಾರ
Last Updated 13 ಅಕ್ಟೋಬರ್ 2022, 7:22 IST
ಅಕ್ಷರ ಗಾತ್ರ

ಆನೇಕಲ್:ತಾಲ್ಲೂಕಿನ ಅತ್ತಿಬೆಲೆ ಟಿವಿಎಸ್‌ ಕ್ರಾಸ್‌ನಿಂದ ಬಳ್ಳೂರು ಗ್ರಾಮದ ಮುಖ್ಯರಸ್ತೆ ಗುಂಡಿಗಳಿಂದ ತುಂಬಿದ್ದು ದ್ವಿಚಕ್ರವಾಹನ ಸವಾರರು ಹರಸಾಹಸಪಟ್ಟು ಸಂಚರಿಸಬೇಕಾಗಿದೆ. ಈ ಮುಖ್ಯರಸ್ತೆ ಹದಗೆಟ್ಟಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಸಂಚರಿಸಲು ಪರದಾಡುವಂತಾಗಿದೆ.

ಹದಗೆಟ್ಟಿರುವ ಈ ರಸ್ತೆಯಲ್ಲಿ ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕಬೇಕಾಗಿದೆ. ರಸ್ತೆ, ಬೀದಿದೀಪ ಸೇರಿದಂತೆ ಮೂಲ ಸೌಲಭ್ಯ ಪಡೆಯುವುದು ಸಾರ್ವಜನಿಕರ ಹಕ್ಕಾಗಿದೆ. ಆದರೆ, ಅತ್ತಿಬೆಲೆ ಟಿವಿಎಸ್‌ ಸರ್ಕಲ್‌ನಿಂದ ಬಳ್ಳೂರು ಗ್ರಾಮಕ್ಕೆ ತೆರಳುವ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದ್ದು ಓಡಾಡಲು ಯೋಗ್ಯವಾಗಿಲ್ಲ. ಪ್ರತಿದಿನ ದ್ವಿಚಕ್ರವಾಹನ ಸವಾರರು ಎದ್ದುಬಿದ್ದು ಈ ರಸ್ತೆಯಲ್ಲಿಯೇ ಓಡಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಅತ್ತಿಬೆಲೆ ಸಮೀಪದ ಈ ರಸ್ತೆಯು ಹಲವು ತಿಂಗಳುಗಳಿಂದ ಇದೇ ಸ್ಥಿತಿಯಲ್ಲಿದೆ. ಪತ್ರಿಕೆಗಳಲ್ಲಿ ವರದಿ ಪ್ರಕಟವಾದಾಗ ಸಂಬಂಧಪಟ್ಟ ಇಲಾಖೆಯವರು ಗುಂಡಿ ಮುಚ್ಚುತ್ತಾರೆ. ಕೆಲವೇ ದಿನಗಳಲ್ಲಿ ಆ ಗುಂಡಿ ಕಿತ್ತು ಹೋಗಿ ಮತ್ತೆ ಅದೇ ಸ್ಥಿತಿಗೆ ಮರಳುತ್ತದೆ.

ಗುಂಡಿಗಳನ್ನು ಮುಚ್ಚುವುದರ ಬದಲು ಈ ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿ ಮಾಡಬೇಕು. ಇದರಿಂದ ಸುತ್ತಮುತ್ತಲ ಗ್ರಾಮಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ದಾಸನಪುರ, ಭಕ್ತಿಪುರ, ಬಳ್ಳೂರು ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಚರಿಸಲು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಹಾಗಾಗಿ, ಈ ರಸ್ತೆಯನ್ನು ಶೀಘ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ದಾಸನಪುರದ ಸುನೀಲ್‌ ತಿಳಿಸಿದರು.

ತಮಿಳುನಾಡಿಗೆ ಸಂಪರ್ಕ ರಸ್ತೆಯಾಗಿರುವ ಅತ್ತಿಬೆಲೆ ಟಿವಿಎಸ್‌ ಸರ್ಕಲ್‌-ಬಳ್ಳೂರು ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಲಾರಿಗಳು ಸಂಚರಿಸುತ್ತವೆ. ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ರಸ್ತೆಯಲ್ಲಿ ಗುಂಡಿಗಳೇ ಹೆಚ್ಚಾಗಿರುವುದರಿಂದ ಜನರು ಪ್ರಾಣವನ್ನು ಕೈಯಲ್ಲಿಡಿದು ಸಂಚರಿಸಬೇಕಾಗಿದೆ.

ಒಂದೆಡೆ ಗುಂಡಿಗಳ ಸಮಸ್ಯೆ ಮತ್ತೊಂದೆಡೆ ಹೆಚ್ಚು ಲಾರಿಗಳ ಸಂಚಾರದ ನಡುವೆ ದ್ವಿಚಕ್ರವಾಹನ ಸವಾರರು ಹರಸಾಹಸಪಟ್ಟು ವಾಹನ ಚಲಿಸಬೇಕಾಗಿದೆ. ಗುಂಡಿಗಳನ್ನು ತಪ್ಪಿಸಲು ಹೋದಾಗ ಹೆಚ್ಚು ಅಪಘಾತಗಳು ಸಂಭವಿಸುತ್ತವೆ.

ಹೆಚ್ಚಾದ ಅಪಘಾತಗಳು:ತಾಲ್ಲೂಕಿನ ಅತ್ತಿಬೆಲೆ ಟಿವಿಎಸ್‌ ಕ್ರಾಸ್‌-ಬಳ್ಳೂರು ರಸ್ತೆ ಹದಗೆಟ್ಟಿರುವುದರಿಂದ ಅಪಘಾತಗಳು ಹೆಚ್ಚಾಗಿವೆ. ದೂಳು, ಗುಂಡಿಗಳ ಕಾರುಬಾರು, ಭಾರಿ ಗಾತ್ರದ ಲಾರಿಗಳ ಸಂಚಾರದಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಇದೇ ರಸ್ತೆಯಲ್ಲಿ ಅಪಘಾತ ಸಂಭವಿಸಿ ದ್ವಿಚಕ್ರವಾಹನ ಸವಾರರೊಬ್ಬರು ಮೃತಪಟ್ಟಿದ್ದಾರೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಒತ್ತಾಯ.

ಅತ್ತಿಬೆಲೆಯು ಕರ್ನಾಟಕ ಮತ್ತು ತಮಿಳುನಾಡಿನ ಗಡಿಪ್ರದೇಶ ಮತ್ತು ಕೈಗಾರಿಕಾ ಪ್ರದೇಶವೂ ಆಗಿದೆ. ಹಲವಾರು ಶಾಲಾ, ಕಾಲೇಜುಗಳಿವೆ. ತಮಿಳುನಾಡಿನ ಜನರು ಸರ್ಜಾಪುರ, ಆನೇಕಲ್‌ ಕಡೆಗೆ ಸಂಚರಿಸಲು ಇದೇ ರಸ್ತೆ ಬಳಸುತ್ತಾರೆ. ಆದರೆ, 3 ಕಿ.ಮೀಗೂ ಹೆಚ್ಚು ದೂರ ಈ ರಸ್ತೆಯಲ್ಲಿ ಸಾಗಬೇಕಾದರೆ ಅರ್ಧ ತಾಸಿಗೂ ಹೆಚ್ಚು ಸಮಯ ಹಿಡಿಯುತ್ತದೆ.

ರಸ್ತೆ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಬೇಕು. ಆಮೆ ವೇಗದಲ್ಲಿ ನಡೆಯುತ್ತಿರುವ ಮೇಲ್ಸುತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT