ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿಯಲ್ಲಿ 20 ಗಂಟೆ ನಿರಂತರ ಯಾತ್ರೆ : ಎಚ್‌.ಡಿ. ಕುಮಾರಸ್ವಾಮಿ

142 ಕಿ.ಮೀ ಸಂಚಾರ: ವಿವಿಧೆಡೆ 48 ಸಭೆ ನಡೆಸಿದ ಎಚ್‌.ಡಿ. ಕುಮಾರಸ್ವಾಮಿ
Last Updated 30 ನವೆಂಬರ್ 2022, 4:59 IST
ಅಕ್ಷರ ಗಾತ್ರ

ದೇವನಹಳ್ಳಿ: ಜೆಡಿಎಸ್‌ನ ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪಂಚರತ್ನ ರಥಯಾತ್ರೆ ಮೂಲಕ ಸಂಚಾರ ಮಾಡುತ್ತಿದ್ದು, ದೇವನಹಳ್ಳಿಯಲ್ಲಿ 20 ಗಂಟೆ ಕಾಲ ನಿರಂತರವಾಗಿ ಯಾತ್ರೆ ನಡೆದಿದೆ. 142 ಕಿ.ಮೀ ಕ್ರಮಿಸಿ 48 ಸಭೆ ನಡೆಸಲಾಗಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ತಾಲ್ಲೂಕಿನ ಕುಂದಾಣ ಹೋಬಳಿಯ ಆಲೂರು ದುದ್ದನಹಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಡರಾತ್ರಿ 1 ಗಂಟೆಗೆ ಈ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಸ್ಥಳೀಯರು ಅಭೂತಪೂರ್ವವಾಗಿ ಸ್ವಾಗತಿಸಿ ಯಶಸ್ವಿಗೊಳಿಸಿದ್ದಾರೆ’ ಎಂದು ತಿಳಿಸಿದರು.

ಪ್ರಧಾನಿ ಮೋದಿ ದೇಶ ವಿಶ್ವ ಗುರುವಾಗುತ್ತಿದೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪ್ರಗತಿಯತ್ತ ದಾಪುಗಾಲು ಹಾಕಿದ್ದೇವೆ ಎನ್ನುತ್ತಾರೆ. ಪ್ರಪಂಚಕ್ಕೆ ಭಾರತವೇ ನಂ 1 ಎಂಬ ಅವರ ಪ್ರಚಾರ ಸಂಪೂರ್ಣವಾಗಿ ಕೃತಕವಾಗಿದೆ. ದೇಶದ ಬಡತನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ, ಶ್ರೀಮಂತರು ಮಾತ್ರ ಮತ್ತಷ್ಟು ಸಿರಿವಂತರಾಗುತ್ತಿದ್ದಾರೆ ಎಂದು ಟೀಕಿಸಿದರು.

ಮೋದಿ ಇಂದು ರೈತರು ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿಗೆ ಕಾರಣರಾಗಿದ್ದಾರೆ. ಪ್ರತಿಭಾವಂತರಿಗೆ ಉದ್ಯೋಗ ನೀಡುತ್ತಿಲ್ಲ. ಚುನಾವಣೆ ಸಮಯದಲ್ಲಿ 5 ಲಕ್ಷ ಮನೆ ನಿರ್ಮಾಣ ಮಾಡಿದ್ದೇವೆ ಎನ್ನುವ ಸರ್ಕಾರ ಎಲ್ಲಿ ವಸತಿ ಸೌಲಭ್ಯ ಕಲ್ಪಿಸಿದ್ದಾರೆ ಎಂದು ಪ್ರಶ್ನಿಸಿದರು.

ಪಂಚರತ್ನ ಯೋಜನೆಯ ಕಾರ್ಯರೂಪಕ್ಕೆ ₹ 1.25 ಲಕ್ಷ ಸಾವಿರ ಕೋಟಿ ಕ್ರಿಯಾಯೋಜನೆ ಸಿದ್ಧಪಡಿಸಿದ್ದೇವೆ. ಈ ಯಾತ್ರೆಯೂ ಚುನಾವಣಾ ಗಿಮಿಕ್‌ ಎಂಬುದು ಸಂಪೂರ್ಣ ಸುಳ್ಳು ಎಂದರು.

11 ದಿನಗಳ ಯಾತ್ರೆಯಿಂದ ಭಾರತದ ನಿಜವಾದ ಹಳ್ಳಿಗಳ ಬಗ್ಗೆ ತಿಳಿಯಲು ಸಹಕಾರಿಯಾಗಿದೆ. ಮಾರ್ಚ್‌ 20ರವರೆಗೂ ಯಾತ್ರೆ ಜಾರಿಯಲ್ಲಿ ಇರಲಿದೆ. ವಿರೋಧ ಪಕ್ಷದವರು, ಜೆಡಿಎಸ್‌ಗೆ ಎಲ್ಲಿ ಬಹುಮತ ಸಿಗುತ್ತದೆ ಎಂದು ಲೇವಡಿ ಮಾಡುತ್ತಿರುವವರಿಗೆ ಅಂಡರ್‌ ಕರೆಂಟ್‌ ಪಾಸ್‌ ಆಗುತ್ತಿದೆ ಎಂದು ತೀರುಗೇಟು
ನೀಡಿದರು.

ದೊಡ್ಡಬಳ್ಳಾಪುರದಲ್ಲಿರುವ ಗೊಂದಲ ಕುರಿತು ಪಕ್ಷ ಸೂಕ್ತ ನಿರ್ಧಾರಕ್ಕೆ ಬರಲಿದೆ. ಸಾ.ರಾ. ಮಹೇಶ್‌ ಜೊತೆ ಗುರುತಿಸಿಕೊಂಡ ಕೆಲವರು ಸ್ವಾಭಿಮಾನಿ ಕಾರ್ಯಕರ್ತರೆಂದು ಹೇಳುತ್ತಿದ್ದಾರೆ. ಅವರು ಈ ಮೊದಲಿಗೆ ಕುಮಾರಸ್ವಾಮಿ ಜೊತೆ ಗುರುತಿಸಿಕೊಂಡವರು. ಪಕ್ಷದ ಸಂಘಟನೆಗಾಗಿ ದುಡಿದವರು. ಇಂದು ಸ್ವಾಭಿಮಾನಿ ಪಡೆ ಎಂದು ಕರೆದುಕೊಳ್ಳುತ್ತಿದ್ದಾರೆ. ಜಿ.ಟಿ. ದೇವೇಗೌಡರು ಮನಸ್ಸು ಮಾಡಿದ್ದ ಪಕ್ಷದಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದರು.

‌ಸಚಿವರು ಕಾಲಜ್ಞಾನಿಯೇ?:ರೌಡಿ ಶೀಟರ್‌ಗಳು ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಕುರಿತು ಮಾತನಾಡಿದ ಅವರು, ‘ಮಂಡ್ಯ ಹಾಗೂ ಚಾಮರಾಜಪೇಟೆಯಲ್ಲಿ ಬಿಜೆಪಿ ಸೇರ್ಪಡೆಗೊಂಡವರು ಯಾರೆಂದು ಎಲ್ಲರಿಗೂ ತಿಳಿದಿದೆ’ ಎಂದು ಹರಿಹಾಯ್ದರು.

ಸಚಿವ ಅಶ್ವತ್ಥನಾರಾಯಣ ಅವರು ಕಾಲಜ್ಞಾನಿಯಾಗಿರಬೇಕು. ಅವರು ಜೆಡಿಎಸ್‌ನವರನ್ನು ರಕ್ತ ಪೀಪಾಸುಗಳೆಂದು ಹೇಳಿದ್ದಾರೆ. ಮಂಡ್ಯದಲ್ಲಿ ಅವರ ಪಕ್ಷಕ್ಕೆ ಸೇರ್ಪಡೆಯಾದವರ ಇತಿಹಾಸವನ್ನು ಒಂದೊಮ್ಮೆ ನೋಡಿದರೆ ಯಾರು ರಕ್ತ ಹೀರುತ್ತಿದ್ದರು ಎನ್ನುವುದು ತಿಳಿಯುತ್ತದೆ. ಯಾವ ಸನ್ನಿವೇಶದಲ್ಲಿ ಹಣ ಮಾಡಿ ಮನೆಗಳನ್ನು ಹಾಳು ಮಾಡುತ್ತಿದ್ದರು ಎಂಬುದೂ ಅರಿವಾಗುತ್ತದೆ. ಅಂತಹ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡವರು ನರಬಲಿ ಪಡೆದು ಸರ್ಕಾರ ನಡೆಸುವವರಾಗಿದ್ದಾರೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT