ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ ಬಂದ್‌: ಬೆಂಬಲಕ್ಕೆ ರೈತರ ರ್‍ಯಾಲಿ

Last Updated 16 ಜೂನ್ 2022, 3:09 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ವತಿಯಿಂದ 1,777 ಎಕರೆ ಕೃಷಿ ಜಮೀನು ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ವತಿಯಿಂದ ಜೂನ್‌ 17ರಂದು ಹಮ್ಮಿಕೊಂಡಿರುವ 'ದೇವನಹಳ್ಳಿ ಪಟ್ಟಣ ಸ್ವಯಂ ಘೋಷಿತ ಬಂದ್‌' ಬೆಂಬಲಿಸುವಂತೆ ರೈತರು ಕರ ಪತ್ರ ವಿತರಣೆ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಕಾಲ್ನಡಿಗೆ ಜಾಥಾ ಮೂಲಕ ಬುಧವಾರ ತೆರಳಿದ ರೈತ ಮುಖಂಡರು ಪ್ರಮುಖ ಬೀದಿಗಳು, ಅಂಗಡಿ ಪ್ರದೇಶಗಳಿಗೆ ತೆರಳಿ, ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಮೈಕ್‌ ಹಿಡಿದು ಅನ್ನದಾತರು ಅನುಭವಿಸುತ್ತಿರುವ ಕಷ್ಟಕ್ಕೆ ಸಾರ್ವಜನಿಕರು ಬಂದ್‌ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಕೈಜೋಡಿಸಲು ವಿನಂತಿಸಿಕೊಂಡರು.

ಹಳೆ ಬಸ್‌ ನಿಲ್ದಾಣದ ಮಾರ್ಗವಾಗಿ ವೇಣುಗೋಪಾಲಸ್ವಾಮಿ ದ್ವಾರ, ಚೌಕ ವೃತ್ತ, ಹೊಸಬಸ್‌ ನಿಲ್ದಾಣ, ವಿಜಯಪುರ ವೃತ್ತ, ಗಿರಮ್ಮ ಸರ್ಕಲ್‌ಗಳಲ್ಲಿ ರ್‍ಯಾಲಿ ಸಾಗಿತು 'ಕಳೆದ 74ದಿನಗಳಿಂದ ರೈತರು ನಿರಂತರವಾಗಿ ಚನ್ನರಾಯಪಟ್ಟಣದ ನಾಡಕಚೇರಿಯ ಮುಂದೆ ಧರಣಿ ಮಾಡುತ್ತಿದ್ದಾರೆ. ಈವರೆಗೂ ಯಾವ ಸರ್ಕಾರದ ಸಚಿವರು ನಮ್ಮ ಸಮಸ್ಯೆ ಆಲಿಸಿಲ್ಲ, ಜೂನ್‌ 17ರ ನಂತರ ಹೋಬಳಿ ಕೇಂದ್ರದಿಂದ ತಾಲ್ಲೂಕು ಕೇಂದ್ರಕ್ಕೆ ಧರಣಿಯೂ ವರ್ಗಾವಣೆಗೊಂಡು, ಹೋರಾಟ ಮತ್ತಷ್ಟು ತೀವ್ರವಾಗುತ್ತದೆ' ಎಂದು ರೈತರು ತಿಳಿಸಿದರು.

ಅತ್ಯಾವಶ್ಯಕ ಸೇವೆಗಳನ್ನು ಹೊರತು ಪಡಿಸಿ, ಉಳಿದೆಲ್ಲಾ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವಂತೆ, ಸಂಪೂರ್ಣ ಪಟ್ಟಣ ಸ್ತಬ್ಧಗೊಳಿಸಲು, ರೈತರಿಗೆ ಬೆಂಬಲ ಸೂಚಿಸಿ ಎಲ್ಲ ಜನತೆಯೂ ಸ್ವಯಂ ಘೋಷಿತವಾಗಿ ಬಂದ್‌ಗೆ ಬೆಂಬಲ ನೀಡಿ ಎಂದು ಎಲ್ಲೆಡೆ ಮನವಿ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT