ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚರತ್ನ ಪಾಂಚಜನ್ಯಕ್ಕೆ ದೇವನಹಳ್ಳಿ ಸಜ್ಜು

ಇಂದು ಕಾರಹಳ್ಳಿ ಕ್ರಾಸ್‌ನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರವೇಶ: ಇಮ್ಮಡಿಸಿದ ಕಾರ್ಯಕರ್ತರ ಉತ್ಸವ
Last Updated 28 ನವೆಂಬರ್ 2022, 4:46 IST
ಅಕ್ಷರ ಗಾತ್ರ

ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ‘ಪಂಚರತ್ನ’ ರಥಯಾತ್ರೆಯು ನ. 28ರಂದು ಇಲ್ಲಿನ ಕಾರಹಳ್ಳಿ ಕ್ರಾಸ್‌ ಮೂಲಕ ಪ್ರವೇಶಿಸಲಿದ್ದು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಂಡಿದೆ.

ಕಳೆದ ಏಪ್ರಿಲ್‌ನಲ್ಲಿ ಕ್ಷೇತ್ರದಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮವೂ ಯಶಸ್ವಿಯಾಗಿತ್ತು. ವಿಜಯಪುರ ಪಟ್ಟಣದಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಸಭೆಗೆ ಸಾವಿರಾರು ಕಾರ್ಯಕರ್ತರು ಬೈಕ್‌ ರ್‍ಯಾಲಿ ಮೂಲಕ ಆಗಮಿಸಿ ಯಶಸ್ವಿಗೊಳಿಸಿದ್ದರು.

ಮತ್ತೊಮ್ಮೆ ನೆಚ್ಚಿನ ನಾಯಕರು ಕ್ಷೇತ್ರಕ್ಕೆ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಗ್ರಾಮೀಣ ಭಾಗಕ್ಕೆ ಆಗಮಿಸುತ್ತಿದ್ದಾರೆ. ರೈತರ ಗಮನ ಸೆಳೆದು ಪಾಂಚಜನ್ಯ ಮೊಳಗಿಸಲು ಶಾಸಕ ನಿಸರ್ಗ ನಾರಾಯಣಸ್ವಾಮಿ ರಣತಂತ್ರ ರೂಪಿಸಿದ್ದಾರೆ. ಡಿ. 1ರಿಂದ ದೇವನಹಳ್ಳಿ ಪಟ್ಟಣದ ವೇಣುಗೋಪಾಲ ಸ್ವಾಮಿ ಲಕ್ಷ ದೀಪೋತ್ಸವ ಕಾರ್ಯಕ್ರಮದ ಒತ್ತಡದ ನಡುವೆಯೂ ಮುಖಂಡರ ನೇತೃತ್ವದಲ್ಲಿ ರಥಯಾತ್ರೆಗೆ ಸಕಲ ಸಿದ್ಧತೆ ನಡೆಸಿದ್ದಾರೆ.

ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿಯೂ ದೇವೇಗೌಡರ ಬೆಂಬಲಿಗರು ಜನತಾದಳದಿಂದ ಗೆಲುವು ಸಾಧಿಸಿದ್ದರು. ಈ ಹಿಂದಿನ ನಗರ ಸ್ಥಳೀಯ ಸಂಸ್ಥೆಗಳು, ವಿಧಾನ ಪರಿಷತ್, ವಿಧಾನಸಭೆ ಚುನಾವಣೆಗಳ ಮತ ಗಳಿಕೆಯ ಲೆಕ್ಕ ನೋಡಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳಾಗಿವೆ.

ಜೆಡಿಎಸ್‌ನ ಸಾಂಪ್ರದಾಯಿಕ ಮತದಾರರು ಎನಿಸಿರುವ ಒಕ್ಕಲಿಗರ ಪ್ರಾಬಲ್ಯವೂ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿರುವುದು ವಿಶೇಷ. ಸಾಂಪ್ರದಾಯಿಕ ಮತದಾರರು ತನ್ನ ತೆಕ್ಕೆಯಿಂದ ಬೇರೆ ಪಕ್ಷಗಳಿಗೆ ಜಾರದಂತೆ ಕಾಪಾಡಿಕೊಳ್ಳಬೇಕಾದ ಜರೂರು ಜೆಡಿಎಸ್‌ಗೆ ಈಗ ಎದುರಾಗಿದೆ.

ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕಿನಲ್ಲಿ ನೆಲೆ ಉತ್ತಮಗೊಳಿಸಲು ಬಿಜೆಪಿ ದೊಡ್ಡ ಮಟ್ಟದಲ್ಲಿಯೇ ಹೆಜ್ಜೆ ಇಟ್ಟಿದೆ. ಸಚಿವ ಡಾ.ಕೆ. ಸುಧಾಕರ್‌ ಉಸ್ತುವಾರಿ ಮಂತ್ರಿಯಾದ ಮೇಲೆ ಮುನ್ನೆಲೆಗೆ ಬರಲು ಇತರೆ ಪಕ್ಷದ ನಾಯಕರಿಗೆ ಗಾಳ ಹಾಕುತ್ತಿದ್ದಾರೆ.ಈ ಎಲ್ಲ ದೃಷ್ಟಿಯಿಂದ ಪಂಚರತ್ನ ರಥಯಾತ್ರೆ ಪಕ್ಷದ ಬೆಳವಣಿಗೆಗೆ ಪೂರಕವಾಗಲಿದೆ ಎನ್ನುವ ವಿಶ್ವಾಸ ಜೆಡಿಎಸ್‌
ಮುಖಂಡರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT