ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ ಪೊಲೀಸರಿಗೆ ಭತ್ಯೆ ಕಡಿತ

Last Updated 31 ಆಗಸ್ಟ್ 2022, 5:20 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನ ವ್ಯಾಪ್ತಿಯ ದೇವನಹಳ್ಳಿ ಟೌನ್‌ ಪೊಲೀಸ್‌ ಠಾಣೆ, ಚಿಕ್ಕಜಾಲ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿಗೆ ಗಣೇಶ ಚತುರ್ಥಿ ಸಮಯದಲ್ಲಿಯೇ ಗೃಹ ಇಲಾಖೆ ಕಹಿ ಸುದ್ದಿ ನೀಡಿದೆ.

ದೇವನಹಳ್ಳಿ ಟೌನ್‌, ಚಿಕ್ಕಜಾಲ, ವಿಮಾನ ನಿಲ್ದಾಣ ಠಾಣೆಗಳು ಬೆಂಗಳೂರು ನಗರ ಪೊಲೀಸ್‌ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕಂದಾಯ ಇಲಾಖೆ ಅನ್ವಯ ಇವುಗಳು ಗ್ರಾಮಾಂತರ ಜಿಲ್ಲೆಗೆ ಸೇರಿವೆ. ಇದರಿಂದ ಇಲಾಖೆಯು ಸಿಬ್ಬಂದಿಗೆ ನೀಡಲಾಗುತ್ತಿದ್ದ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆಯನ್ನು ಗ್ರಾಮಾಂತರ ವ್ಯಾಪ್ತಿಗೆ ಸೀಮಿತಗೊಳಿಸಿ ಪ್ರಸ್ತುತ ನೀಡಲಾಗುತ್ತಿದ್ದ ಭತ್ಯೆಗಳಿಗೆ ಕತ್ತರಿ ಹಾಕಲಾಗಿದೆ.

ಪ್ರತಿ ಠಾಣೆಯಲ್ಲಿಯೂ ಅಂದಾಜು 80-100 ಪೊಲೀಸ್‌ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇವರೆಲ್ಲರೂ ಬೆಂಗಳೂರು ನಗರ ಪೊಲೀಸ್‌ ವಿಭಾಗಕ್ಕೆ ನೇಮಕವಾಗಿದ್ದರೂ ಬಿಬಿಎಂಪಿ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿ ಕೇವಲ ಶೇ 8ರಷ್ಟು ಭತ್ಯೆ ನೀಡುವಂತೆ ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರು ಜ್ಞಾಪಕ ಪತ್ರದ ಮೂಲಕ ತಿಳಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಿಬ್ಬಂದಿಯೊಬ್ಬರು, ‘ನಾವೆಲ್ಲರೂ ನಗರ ಪೊಲೀಸ್‌ ವಿಭಾಗಕ್ಕೆ ನೇಮಕವಾಗಿದ್ದೇವೆ. ಏಕಾಏಕಿ ಭತ್ಯೆ ಕಡಿತ ಮಾಡಿದರೆ ಸರಾಸರಿ ಒಬ್ಬರಿಗೆ ಪ್ರತಿ ತಿಂಗಳು₹ 8 ಸಾವಿರ ನಷ್ಟವಾಗುತ್ತದೆ. ಕಮಿಷನರೇಟ್‌ ವ್ಯಾಪ್ತಿ ಕರ್ತವ್ಯ ನಿರ್ವಹಣೆ ಮಾಡುವವರಿಗೆಲ್ಲಾ ಒಂದೇ ರೀತಿಯ ಸಂಬಂಳ ನೀಡಬೇಕು. ಈ ಆದೇಶದಿಂದ ಸಂಸಾರ ಸಾಗಿಸುವುದು ಕಷ್ಟಕರವಾಗಲಿದೆ’ ಎಂದು ಅಳಲು ತೋಡಿಕೊಂಡರು.

‘ಸಾಕಷ್ಟು ಸಿಬ್ಬಂದಿಯ ಮನೆ, ಮಕ್ಕಳು ಎಲ್ಲ ನಗರದಲ್ಲಿಯೇ ವಾಸವಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಆದೇಶದಿಂದ ಆರ್ಥಿಕವಾಗಿ ತೊಂದರೆಯಾಗಲಿದ್ದು, ₹ 2.88 ಕೋಟಿ ವಾರ್ಷಿಕವಾಗಿ ಇಲಾಖೆಗೆ ಉಳಿತಾಯವಾಗಲಿದೆ. ಆದೇಶವನ್ನು ಮತ್ತೊಮ್ಮೆ ಪರಿಶೀಲಿಸಿ ಸಿಬ್ಬಂದಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಮಹಿಳಾ ಸಿಬ್ಬಂದಿಯೊಬ್ಬರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT