ಕಾಮಗಾರಿಗೆ ಒಪ್ಪಿಗೆಗೆ ಸಿ.ಎಂ. ಬರಬೇಕು!

7
45 ಕುಟುಂಬಗಳು ವಾಸವಾಗಿರುವ ಕಾಲೊನಿ l ಪಂಚಾಯಿತಿ ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ

ಕಾಮಗಾರಿಗೆ ಒಪ್ಪಿಗೆಗೆ ಸಿ.ಎಂ. ಬರಬೇಕು!

Published:
Updated:
Deccan Herald

ದೇವನಹಳ್ಳಿ: ಸುಧಾರಣೆ ಕಾಣದ ರಸ್ತೆ, ಉರಿಯದ ವಿದ್ಯುತ್ ದೀಪಗಳು, ಗಬ್ಬುನಾರುತ್ತಿರುವ ಚರಂಡಿ ಮತ್ತು ಅಲ್ಲಿ ಬೆಳೆದಿರುವ ಗಿಡಗಳು. ಇದು ನಾಡಪ್ರಭು ರಣಭೈರೇಗೌಡರ ಕರ್ಮಭೂಮಿ ಆವತಿ ಗ್ರಾಮದ ಕಾಲೊನಿಯ ಸದ್ಯದ ಪರಿಸ್ಥಿತಿ.

ರಾಷ್ಟ್ರೀಯ ಹೆದ್ದಾರಿ 7ರ ಚಿಕ್ಕಬಳ್ಳಾಪುರ ರಸ್ತೆ ಮಾರ್ಗದ ಪಕ್ಕದಲ್ಲಿರುವ ತಾಲ್ಲೂಕು ಕೇಂದ್ರದಿಂದ ಕೇವಲ 5.ಕಿ.ಮೀ ದೂರದ ಐತಿಹಾಸಿಕ ಗ್ರಾಮ ಆವತಿ. 18ವರ್ಷಗಳ ಹಿಂದೆ ರಸ್ತೆ ವಿಸ್ತರಣೆ ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ ರಸ್ತೆ ಪಕ್ಕದಲ್ಲಿದ್ದ ನಿವಾಸಿಗರನ್ನು ಒಕ್ಕಲೆಬ್ಬಿಸಿ ಗ್ರಾಮದಿಂದ 200ಮೀ. ದೂರದಲ್ಲಿ ಆವತಿ ಬೆಟ್ಟದ ಬುಡದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಕಲ್ಲು ಬಂಡೆಗಳ ಇಕ್ಕಟ್ಟಿನಲ್ಲಿ ಚಿಕ್ಕಚಿಕ್ಕ ಮನೆಗಳಲ್ಲಿ 45 ಕುಟುಂಬಗಳಿರುವ ಕಾಲೊನಿ ಇದು. ಇಲ್ಲಿ ಸೂಕ್ತ ಮೂಲ ಸೌಲಭ್ಯಗಳಿಲ್ಲ ಎಂಬುದು ಸ್ಥಳೀಯರ ಆಕ್ರೋಶ.

ಮೂಲ ಸೌಕರ್ಯಗಳ ಕೊರತೆ ಕುರಿತು ಸುರೇಶ್‌ ಮಾತನಾಡಿ, ಸ್ಥಳೀಯರಾದ ರಾಮು, ತಿಮ್ಮರಾಜು, ಕುಟುಂಬಗಳು ಇಲ್ಲಿಗೆ ಸ್ಥಳಾಂತರಗೊಂಡ ನಂತರ ಜಿಲ್ಲಾಧಿಕಾರಿ ಒಂದು ಬಾರಿ ಭೇಟಿ ನೀಡಿ ನಿವೇಶನದ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ನೀಡಿಲ್ಲ ಎಂದು ವಿವರಿಸಿದರು.

ಕಲ್ಲು ಬಂಡೆ ಬುಡದಲ್ಲಿ ಮನೆಗಳಿರುವುದರಿಂದ ರಾತ್ರಿ ಸಮಯ ಹಾವುಗಳ ವಿಪರೀತ ಕಾಟ. ವಿದ್ಯುತ್ ಕಂಬಗಳಿವೆ, ಆದರೆ ದೀಪಗಳಿಲ್ಲ. ಕುಡಿಯಲು ಅಳವಡಿಸಿರುವ ಪೈಪ್‌ಲೈನ್ ಒಡೆದು ಸಾಕಷ್ಟು ನೀರು ಸೋರಿಕೆಯಾಗುತ್ತಿದೆ. ಪೈಪ್ ಸಿಮೆಂಟ್‌ನಿಂದ ಮುಚ್ಚಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ, ‘ಇಂದು ನಾಳೆ’ ಎಂಬ ಸಿದ್ಧ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಂದ್ರಶೇಖರ್, ರವಿಕುಮಾರ್, ಮುನಿರಾಜು, ಮಹೇಶ್ ಮಾತನಾಡಿ, ಮುಖ್ಯ ರಸ್ತೆಯಿಂದ ಕೇವಲ 150 ಮೀಟರ್ ಅಂತರದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಮಾಡಿ, ಎರಡೂ ಕಡೆ ಚರಂಡಿ ದುರಸ್ತಿ ಮಾಡಿದರೆ ಸಾಕು. ಈ ಕಾಮಗಾರಿಗೆ ಕನಿಷ್ಠ ₹10 ಲಕ್ಷ ಅನುದಾನ ಬೇಕಾಗುತ್ತದೆ. ಈ ಕಾಮಗಾರಿಗೆ ಉದ್ಘಾಟನೆಗೆ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು ಭೇಟಿ ನೀಡಬೇಕು ಎಂದು ಅಧಿಕಾರಿಗಳು, ಜಬಪ್ರತಿನಿಧಿಗಳ ಉದ್ಧಟತನದ ಮಾತು. ಮತಕ್ಕಾಗಿ ಪೀಡಿಸುವ ವಿವಿಧ ಪಕ್ಷಗಳ ಮುಖಂಡರು ಇಲ್ಲಿ ಪರಿಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಹೇಗೆ ಎಂಬುದು ಸ್ಥಳೀಯರ ಆಕ್ರೋಶ.

ಕಾಲೊನಿಯಲ್ಲಿನ ಸಮಸ್ಯೆಗಳ ಕುರಿತು ಪ್ರತಿಕ್ರಿಯಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ, ಸಿಮೆಂಟ್ ರಸ್ತೆ ನಿರ್ಮಾಣ ಆಗಬೇಕಾಗಿರುವುದು ನಿಜ. ಬೀದಿ ದೀಪ, ಚರಂಡಿ, ತ್ಯಾಜ್ಯ ಶುಚಿತ್ವ ತಕ್ಷಣದಿಂದಲೇ ಕ್ರಮ ತೆಗೆದುಕೊಳ್ಳವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !