ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸಿ

ದೊಮ್ಮಸಂದ್ರದಲ್ಲಿ ಶಿಕ್ಷಣ ಇಲಾಖೆಯಿಂದ ಮಕ್ಕಳ ವಿಜ್ಞಾನ ಹಬ್ಬ
Last Updated 11 ಡಿಸೆಂಬರ್ 2019, 14:30 IST
ಅಕ್ಷರ ಗಾತ್ರ

ಆನೇಕಲ್: ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸಬೇಕು. ಹಾಗಾಗಿ ಅವಕಾಶಗಳನ್ನು ಕಲ್ಪಿಸಿಕೊಟ್ಟು ಅವರಲ್ಲಿನ ಪ್ರತಿಭೆ ಹೊರಬರಲು ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ವಾತ್ಸಲ್ಯ ಲಕ್ಷ್ಮೀನಾರಾಯಣ್‌ ತಿಳಿಸಿದರು.

ಅವರು ತಾಲ್ಲೂಕಿನ ದೊಮ್ಮಸಂದ್ರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಮಕ್ಕಳ ವಿಜ್ಞಾನ ಹಬ್ಬ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಜ್ಞಾನವಿಲ್ಲದೇ ಜೀವನವಿಲ್ಲ. ಜೀವನದ ಎಲ್ಲ ಅಂಶಗಳು ವಿಜ್ಞಾನವನ್ನು ಅವಲಂಬಿಸಿದೆ. ಮಹಾನ್‌ ವ್ಯಕ್ತಿಗಳ ಸಂಶೋಧನೆಯ ಸಾಧನೆಯಿಂದಾಗಿ ಜನರಿಗೆ ಹಲವಾರು ಸೌಲಭ್ಯಗಳು ದೊರೆತಿವೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಂಶೋಧನೆ ಮಾಡುವ ನಿಟ್ಟಿನಲ್ಲಿ ಸಜ್ಜುಗೊಳಿಸಲು ಮತ್ತು ಅಲೋಚನೆ ಶಕ್ತಿಯನ್ನು ಬೆಳೆಸಲು ವಿಜ್ಞಾನ ಹಬ್ಬ ವೇದಿಕೆಯಾಗಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಕಲಾ.ಟಿ.ವಿ.ಬಾಬು ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಶಾಲೆಗಳನ್ನು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹಾಗಾಗಿ ಸರ್ಕಾರಿ ಶಾಲೆಗಳನ್ನು ಬಲಪಡಿಸಿ ದಾಖಲಾತಿ ಹೆಚ್ಚಳ ಮಾಡಲು ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರಿ ಶಾಲೆಗಳನ್ನು ಸಜ್ಜುಗೊಳಿಸಬೇಕಾಗಿದೆ. ಸರ್ಕಾರಿ ಶಾಲೆಗಳ ಸಾಮರ್ಥ್ಯವನ್ನು ಜನರಿಗೆ ತಿಳಿಸಿಕೊಡುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬೆಂಬಲವಾಗಿ ನಿಲ್ಲಬೇಕು ಎಂದರು.

ಪ್ರತಿಭಾ ಕಾರಂಜಿ, ಕ್ರೀಡೆಗಳು, ವಿಜ್ಞಾನ ಮೇಳಗಳಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಶಿಕ್ಷಕರು ಸಜ್ಜುಗೊಳಿಸಬೇಕು. ಈ ಮೂಲಕ ಜನರಲ್ಲಿ ಸರ್ಕಾರಿ ಶಾಲೆಗಳ ಬಗೆಗಿನ ತಾತ್ಸರ ಮನೋಭಾವನೆಯನ್ನು ಹೋಗಲಾಡಿಸಬೇಕಾಗಿದೆ ಎಂದರು.

ಮೇಳದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ‘ಊರು ಸುತ್ತೋಣ’ ಕಾರ್ಯಕ್ರಮದಡಿಯಲ್ಲಿ ಗ್ರಾಮದಲ್ಲಿನ ವಿವಿಧ ಸ್ಥಳಗಳಿಗೆ ಕರೆದೊಯ್ದು ಅದರ ಮಹತ್ವವನ್ನು ತಿಳಿಸಿಕೊಡಲಾಯಿತು. ಪಕ್ಷಿಗಳು, ಕೆರೆ, ಗಿಡ ಮರಗಳ ಬಗ್ಗೆ ತಜ್ಞರಿಂದ ಮಾಹಿತಿಯನ್ನು ತಿಳಿಸಿಕೊಡಲಾಯಿತು. ವಿದ್ಯಾರ್ಥಿಗಳು ಸಂತಸದಿಂದ ವೀಕ್ಷಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್‌.ರಾಮಮೂರ್ತಿ, ಸಮನ್ವಯಾಧಿಕಾರಿ ಎನ್‌.ಶಂಕರಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಭಾಸ್ಕರ್‌, ಮುನಿರಾಜು, ಮುಖಂಡರಾದ ರಾಧ ಪ್ರಸಾದ್‌, ಬಾಬು, ಸಮೂಹ ಸಂಪನ್ಮೂಲ ವ್ಯಕ್ತಿ ಭಾರತಿ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ವೆಂಕಟಸ್ವಾಮಿರೆಡ್ಡಿ, ಪ್ರೇಮಕುಮಾರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT