ಮಂಗಳವಾರ, ಆಗಸ್ಟ್ 20, 2019
27 °C

ಓದುವ ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಿ

Published:
Updated:
Prajavani

ವಿಜಯಪುರ: ‘ವಿದ್ಯಾರ್ಥಿಗಳು ತಮ್ಮ ಜ್ಞಾನ ವಿಕಾಸಕ್ಕೆ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಪುರಸಭಾ ಮುಖ್ಯಾಧಿಕಾರಿ ಎ. ಎಚ್. ನಾಗರಾಜ್ ಹೇಳಿದರು.

ಇಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ 20 ನೇ ಬೆಂಗಳೂರು ಗ್ರಾಮಾಂತರ ಜಿಲ್ಲಾ 3 ನೇ ದಿನದ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

‘ಮಕ್ಕಳು ಬಾಲ್ಯದಿಂದಲೇ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಸಾಹಿತ್ಯ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ವಿದ್ಯೆ ಜ್ಞಾನದ ಸಂಪತ್ತು ನಮ್ಮಿಂದ ಯಾರೂ ಕದಿಯಲಾಗದ ಆಸ್ತಿಯಾಗಿದೆ. ನಮ್ಮ ತಂದೆ-ತಾಯಿಗಳು ನೀಡಿದ ಹಣ ಹಾಗೂ ಆಸ್ತಿಯನ್ನು ಯಾರು ಬೇಕಾದರೂ ಕದ್ದೊಯ್ಯಬಹುದು. ಆದರೆ ನಾವು ಗಳಿಸಿದ ಜ್ಞಾನದ ಸಂಪತ್ತು ನಮ್ಮಲ್ಲಿ ಶಾಶ್ವತವಾಗಿ ಇರುತ್ತದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ. ಸುಧಾಕರ್ ಮಾತನಾಡಿ, ‘ಮಕ್ಕಳು ತಮ್ಮ ವಿದ್ಯಾರ್ಜನೆಯ ಸಮಯದಲ್ಲಿ ಏಕಾಗ್ರತೆಯಿಂದ ವ್ಯಾಸಂಗ ಮಾಡಲು ಗಮನಹರಿಸಬೇಕು. ಏಕಲವ್ಯನಂತೆ ಶ್ರದ್ಧಾಭಕ್ತಿಯಿಂದ ವ್ಯಾಸಂಗ ಮಾಡಿ ಜೀವನದಲ್ಲಿ ಜೀವನ ರೂಪಿಸಿಕೊಳ್ಳಬೇಕು. ಗುರುಹಿರಿಯರು ಹಾಗೂ ಪೋಷಕರ ಮಾರ್ಗದರ್ಶನದೊಂದಿಗೆ ನಡೆದರೆ ತಮ್ಮ ಗುರಿ ಸಾಧನೆ ಸುಲಭವಾಗುತ್ತದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಗೌರವಾಧ್ಯಕ್ಷ ಸೂರ್ಯಪ್ರಕಾಶ್ ಮಾತನಾಡಿ, ‘ನಮ್ಮ ಜೀವನಾನುಭವಗಳೇ ಕವಿತೆಗಳಾಗಿ, ಕಾವ್ಯಗಳಾಗಿ ಹೊರಹೊಮ್ಮಬೇಕು. ಜನಸಾಮಾನ್ಯರನ್ನು ಜಾಗೃತಿಗೊಳಿಸಲು ಶರಣರು ವಚನಗಳನ್ನು ಹಾಗೂ ಕೀರ್ತನೆಗಳನ್ನು ರಚಿಸಿದರು’ ಎಂದರು.

‘ಮೌಢ್ಯದಿಂದ ಜನರನ್ನು ಹೊರತರಲು, ಯುವಜನರನ್ನು ಬಡಿದೆಬ್ಬಿಸಲು ಕವಿಗಳಾದ ಕುವೆಂಪು, ಬೇಂದ್ರೆ, ಪುತಿನ, ಮಾಸ್ತಿ, ಅವರಂತಹ ಸಾಹಿತಿಗಳು ಕವಿತೆಗಳು ಹಾಗೂ ಕಾವ್ಯಗಳನ್ನು ರಚಿಸಿ ಕ್ರಾಂತಿ ಮಾಡಿದರು’ ಎಂದರು.

ಪ್ರಥಮ ಪಿಯುಸಿ ವಿದ್ಯಾರ್ಥಿನಿ ಶಿಲ್ಪ ಮಾತನಾಡಿ, ತಾಯ್ನಾಡಿನ ಭಾಷೆ, ಸಂಸ್ಕೃತಿಯನ್ನು ಪ್ರೀತಿಯಿಂದ ಕಾಣದವರು ಜಗತ್ತನ್ನು ಪ್ರೀತಿಸಲು ಸಾಧ್ಯವಿಲ್ಲ. ಬದಲಾವಣೆ ಜಗದ ನಿಯಮ. ಪರಭಾಷೆಗಳು ನಮ್ಮ ಅವಶ್ಯಕತೆಗಳನ್ನು ಪೂರೈಕೆ ಮಾಡಬೇಕೆ ಹೊರತು ಅನಿವಾರ್ಯವಾಗಬಾರದು ಎಂದರು.

ವಿದ್ಯಾರ್ಥಿಗಳಾದ ವಿಜಯ್, ಕಾವ್ಯ, ಅಕ್ಷತ, ಮಂಜುಳಾ, ಶಾಬುದ್ಧೀನ್, ಕವನಗಳನ್ನು ಓದಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿಕೊಂಡಿರುವ ವಿದ್ಯಾರ್ಥಿಗಳಾದ ವನಿತ, ಚಂದು, ಅಶ್ವಿನಿ, ಸಹನಶ್ರೀ ಮತ್ತು 8 ಮತ್ತು 9 ನೇ ತರಗತಿಯ ರಕ್ಷಿತ, ಶೈಲಜ, ಪ್ರೇಮ, ಭಾರತಿ, ಚಂದನ. ಎಂ, ವಿಜೇತ.ಎಂ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕವಿ ವೆಂಕಟೇಶ್, ಕಸಾಪ ನಗರ ಘಟಕದ ಅಧ್ಯಕ್ಷ ಜೆ.ಆರ್. ಮುನಿವೀರಣ್ಣ, ಆರ್. ಮುನಿರಾಜು, ಮೂರ್ತಿ, ರಾಮಾಂಜಿನಿ, ಸರಳಮ್ಮ ಇದ್ದರು.

Post Comments (+)