‘ಸಾಮಾಜಿಕ ಬದ್ಧತೆಯ ಧರ್ಮಸ್ಥಳ ಸಂಸ್ಥೆ’

7
ಬನ್ನಿಮಂಗಲದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಧಾರ್ಮಿಕ ಸಭೆಯಲ್ಲಿ ವಸಂತ ಸಾಲಿಯಾನ್‌

‘ಸಾಮಾಜಿಕ ಬದ್ಧತೆಯ ಧರ್ಮಸ್ಥಳ ಸಂಸ್ಥೆ’

Published:
Updated:
Deccan Herald

 ದೇವನಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದು ಯೋಜನಾ ಜಿಲ್ಲಾ ಘಟಕ ನಿರ್ದೇಶಕ ವಸಂತ ಸಾಲಿಯಾನ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬನ್ನಿಮಂಗಲ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಮತ್ತು ಮಾತೃ ಭೂಮಿ ಯುವ ಸ್ವಯಂ ಸೇವಾ ಸಂಘ, ಡಾ. ಅಂಬೇಡ್ಕರ್ ಸ್ವಯಂ ಸೇವಾ ಸಂಘ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವತಿಯಿಂದ ನಡೆದ ‘ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ’ಯ ನಂತರ ಧಾರ್ಮಿಕ ಸಭಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇದು ಮಹಿಳೆಯರಿಗೆ ಸಾಲ ನೀಡುವ ಸಂಸ್ಥೆ ಎಂದು ಕೆಲವರು ಭಾವಿಸಿದ್ದಾರೆ. ವಾಸ್ತವವಾಗಿ ವೈಯಕ್ತಿಕ ಕುಟುಂಬಗಳ ಆರ್ಥಿಕ ಸುಧಾರಣೆ ಜತೆಗೆ ಸಮುದಾಯ ಭಾಗಿತ್ವದಲ್ಲಿ ಸಬಲೀಕರಣ ನಮ್ಮ ಮುಖ್ಯ ಉದ್ದೇಶ’ ಎಂದರು.

ಈ ಹಿಂದಿನ ವರ್ಷದಲ್ಲಿ ರಾಜ್ಯದಲ್ಲಿ ಒಟ್ಟು 80 ಕೆರೆಗಳ ಹೂಳು ಎತ್ತಿ ದುರಸ್ತಿ ಮಾಡಲಾಗಿದ್ದು, 2018 ನೇ ಸಾಲಿನಲ್ಲಿ 70 ಕೆರೆಗಳನ್ನು ಅಭಿವೃದ್ಧಿ ಪಡಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಕೃಷಿಕರಿಗೆ ಕಡಿಮೆ ಬಾಡಿಗೆ ದರದಲ್ಲಿ ಯಂತ್ರೋಪಕರಣ ನೀಡಿ ಕೃಷಿ ಬಗ್ಗೆ ಮಾಹಿತಿ ಶಿಬಿರ, ಸಂವಾದ ಅಗತ್ಯ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಒಂದು ವರ್ಷದಲ್ಲಿ 10 ಸಾವಿರ ದೇವಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ. 1,500 ಮದ್ಯವ್ಯಸನ ಮುಕ್ತ ಶಿಬಿರ ನಡೆಸಿ ಒಂದು ಲಕ್ಷ ಮದ್ಯವ್ಯಸನ ಮುಕ್ತ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗಿದೆ. ಜಾತಿ ಮತ್ತು ಯಾವುದೇ ಭೇದವಿಲ್ಲದೆ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಲಾಗುತ್ತಿದೆ ಎಂದರು.

ಜನ ಜಾಗೃತಿ ವೇದಿಕೆ ಜಿಲ್ಲಾ ಘಟಕ ಉಪಾಧ್ಯಕ್ಷ ಬಿ.ಕೆ ನಾರಾಯಣಸ್ವಾಮಿ ಮಾತನಾಡಿ, ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಅಶ್ವತ್ಥಕಟ್ಟೆಗಳು (ನಾಗ ಬನ) ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳ ಸ್ಥಾಪನೆಗೆ ವೈಜ್ಞಾನಿಕ ಕಾರಣವಿದೆ ಎಂದರು.

‘ಪ್ರಕೃತಿಯಲ್ಲಿನ ಪ್ರತಿಯೊಂದು ವಸ್ತುವನ್ನು ಪೂಜಿಸುವ ಪರಂಪರೆ ನಮ್ಮದು. ಧಾರ್ಮಿಕ ಕಾರ್ಯಕ್ರಮಗಳ ಉದ್ದೇಶ ಪರಸ್ಪರ ವೈಮನಸ್ಸು ತೊಡೆದು ಸಾಮರಸ್ಯ ಗಟ್ಟಿಗೊಳಿಸಿ ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳವುದಾಗಿದೆ. ಧರ್ಮಸ್ಥಳ ಸಂಸ್ಥೆಯು ಈ ವಿಷಯದಲ್ಲಿ ಉತ್ತಮ ಕೆಲಸ ಮಾಡುತ್ತಿದೆ’ ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಸಂಸ್ಥೆ ಹತ್ತು ವರ್ಷಗಳಿಂದ ತಾಲ್ಲೂಕಿನಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಅನೇಕ ಕುಟುಂಬಗಳಿಗೆ ಅನುಕೂಲ ಮಾಡುತ್ತಿದೆ. ಮುಂದೆಯೂ ನಿರಂತರವಾಗಿ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.

ಶ್ರೀ ಕ್ಷೇತ್ರ ಚಿತ್ರಮೂಲ ಶ್ರೀ ಕಾಳಿತನಯ ಉಮಾ ಮಹೇಶ್ವರ ತೀರ್ಥಸ್ವಾಮಿ ಸಾನ್ನಿಧ್ಯ ವಹಿಸಿ ಮಾತನಾಡಿ, ಧರ್ಮವು ಮಾನವನ ಕಲ್ಯಾಣದ ತಳಹದಿ, ಸರ್ಕಾರ ಮಾಡದ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ, ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿದರು.

ಪೂಜಾ ಸಮಿತಿ ಅಧ್ಯಕ್ಷ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ದೇವಾಲಯ ಸಮಿತಿ ಕಾರ್ಯದರ್ಶಿ ಶಿವರಾಮಯ್ಯ,  ಸಂಸ್ಥೆ ಯೋಜನಾಧಿಕಾರಿ ಅಕ್ಷತಾ ರೈ, ಮೇಲ್ವಿಚಾರಕಿ ವೇದಾವತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !