ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಜಿಲ್ಲಾಡಳಿತ ಕೇಂದ್ರಕ್ಕೆ ಸ್ಥಳಾಂತರವಾಗದ ಡಯಟ್

Last Updated 3 ಜುಲೈ 2019, 19:45 IST
ಅಕ್ಷರ ಗಾತ್ರ

ದೇವನಹಳ್ಳಿ: ಬೆಂಗಳೂರು ನಗರದಲ್ಲಿರುವ ಶಿಕ್ಷಕರಿಗೆ ತರಬೇತಿ ನೀಡುವ ಜಿಲ್ಲಾ ಡಯಟ್ ಕೇಂದ್ರ ಈವರೆಗೆ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರವಾಗದ ಹಿನ್ನಲೆಯಲ್ಲಿ ತರಬೇತಿಗೆ ನಿಯೋಜನೆಗೊಳ್ಳುವ ವಿಷಯವಾರು ಶಿಕ್ಷಕರು ಪರದಾಟ ನಡೆಸುವಂತಾಗಿದೆ.

2018ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರು ನಗರದಲ್ಲಿದ್ದ ಜಿಲ್ಲಾಡಳಿತ ಕಚೇರಿ ಮತ್ತು ನಗರದ ವಿವಿಧೆಡೆ ಹರಡಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾಮಟ್ಟದ ವಿವಿಧ ಇಲಾಖೆಗಳು ಹಂತ ಹಂತವಾಗಿ ಸ್ಥಳಾಂತರಗೊಂಡು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.ಡಯಟ್ ಜಿಲ್ಲಾ ಕೇಂದ್ರ ಬೆಂಗಳೂರಿನ ರಾಜಾಜಿನಗರದಲ್ಲೇ ಇರುವುದರಿಂದ ನಾಲ್ಕು ತಾಲ್ಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಷಯವಾರು ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ತ್ವರಿತವಾಗಿ ಸ್ಥಳಾಂತರವಾಗಬೇಕು ಎಂಬುದು ಶಿಕ್ಷಕರ ಒತ್ತಾಯ.

ಶಿಕ್ಷಕರಿಗೆ ವಾರ್ಷಿಕವಾಗಿ 5 ರಿಂದ 15 ದಿನಗಳವರೆಗೆ ತರಬೇತಿ ಹಮ್ಮಿಕೊಳ್ಳಲಾಗುತ್ತದೆ. ಒಂದು ಬಾರಿ ತರಬೇತಿಗೆ 150ರಿಂದ 200 ಶಿಕ್ಷಕರು ಬೆಂಗಳೂರಿನ ಡಯಟ್ ಕೇಂದ್ರಕ್ಕೆ ಹೋಗಬೇಕು. ಇದು ಇಡೀ ವರ್ಷ ನಡೆಯುವ ತರಬೇತಿ ಪ್ರಕ್ರಿಯೆ. ಬೆಳಗಿನ ವೇಳೆ ಸಕಾಲದಲ್ಲಿ ತರಬೇತಿಗೆ ಹೋಗಲು ಕಷ್ಟವಾಗುತ್ತಿದೆ. ವಿಪರೀತ ವಾಹನ ದಟ್ಟಣೆಯಿಂದಾಗಿ ಹೋಗಿ ಬರುವುದು ಕಷ್ಟ ಎನ್ನುತ್ತಾರೆ ನಿವೃತ್ತ ಅಂಚಿನಲ್ಲಿರುವ ಶಿಕ್ಷಕಿಯೊಬ್ಬರು.

‘ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಶಿಕ್ಷಕರ ಸಂಖ್ಯೆ ಜಿಲ್ಲೆಯಲ್ಲಿ ಕನಿಷ್ಠ 4 ಸಾವಿರ ಇದೆ. ಪ್ರೌಢಶಾಲೆ ಶಿಕ್ಷಕರಿಗೆ ಅಯಾ ತಾಲ್ಲೂಕಿನಲ್ಲಿ ಡಯಟ್‌ನ ವಿಷಯವಾರು ಶಿಕ್ಷಣಾಧಿಕಾರಿಗಳು ಬೋಧನಾ ತರಬೇತಿ ನೀಡುತ್ತಾರೆ. ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಅತಿಹೆಚ್ಚು ತರಬೇತಿ ನೀಡಲಾಗುತ್ತದೆ. ತರಬೇತಿಗಾಗಿಯೇ ಹೆಚ್ಚುವರಿ ಭತ್ಯೆ ನೀಡುವುದಿಲ್ಲ. ನಗರಕ್ಕೆ ಹೋಗಿ ತರಬೇತಿ ಪಡೆದು ಮನೆಗೆ ಬರುವುದು ನಮಗೆ ನರಕಯಾತನೆಯಾಗಿದೆ. ಮನೆಗಳಲ್ಲಿ ವೃದ್ಧರು, ಪುಟ್ಟ ಮಕ್ಕಳನ್ನು ಬಿಟ್ಟು ತರಬೇತಿಗೆ ಹೋಗಬೇಕು. ಅಸಹಾಯಕ ಸ್ಥಿತಿಯಲ್ಲಿ ನಾವಿದ್ದೇವೆ’ ಎನ್ನುತ್ತಾರೆ ಶಿಕ್ಷಕಿ ನಾಗರತ್ನ ಬಾಯಿ.

‘ಪ್ರಸ್ತುತ ಜಿಲ್ಲೆಯಲ್ಲಿ 3,107 ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ ಶಿಕ್ಷಕರಿದ್ದಾರೆ. 622 ಸರ್ಕಾರಿ ಪ್ರೌಢಶಾಲೆ ಶಿಕ್ಷಕರಿದ್ದಾರೆ. ಒಟ್ಟು 3,789 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮದು ತರಬೇತಿ ನೀಡುವುದಲ್ಲ. ಶೈಕ್ಷಣಿಕ ಆಡಳಿತಾತ್ಮಕ ಕೆಲಸ ಅಷ್ಟೇ’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ) ಕೃಷ್ಣಮೂರ್ತಿ.

‘ಜಿಲ್ಲಾಡಳಿತ ಭವನದಲ್ಲಿ ಎರಡು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಏಕಾಕಾಲಕ್ಕೆ ತರಬೇತಿ ನೀಡಲು 50 ಕಂಪ್ಯೂಟರ್‌ಗಳಿವೆ. ಡಯಟ್ ಆಡಳಿತಾತ್ಮಕವಾಗಿ ಕೆಲಸ ನಿರ್ವಹಿಸಲು ಸಾಕಾಗುತ್ತದೆ. ಅದು ತರಬೇತಿಗೆ ಸಾಲದು. ಜಿಲ್ಲಾಡಳಿತ ಭವನದ ಪಕ್ಕದಲ್ಲಿ ಡಯಟ್‌ಗಾಗಿ ಸರ್ಕಾರದಿಂದ 4 ಎಕರೆ ಜಾಗ ನೀಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಬೇಕು. ನಮ್ಮದು ತರಬೇತಿ ನೀಡುವುದಷ್ಟೇ ಕೆಲಸ. ಅಂತಿಮ ತೀರ್ಮಾನ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತೆಗೆದುಕೊಳ್ಳಬೇಕು. ಆಡಳಿತಾತ್ಮಕವಾಗಿ ಸ್ಥಳಾಂತರ ಮಾಡಿಕೊಳ್ಳಿ ಎಂದು ಆದೇಶ ಬಂದರೆ ತಕ್ಷಣ ಸ್ಥಳಾಂತರಗೊಳ್ಳುತ್ತೇವೆ’ ಎಂಬುದಾಗಿ ಡಯಟ್ ತರಬೇತಿ ಪ್ರಾಂಶುಪಾಲ ಉಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT