ಡಿಜಿಟಲ್‌ ಅಲ್ಲ ಡಿಲಿಟ್‌ ಇಂಡಿಯ: ಡಾ.ಸುನೀಲಂ ಅಭಿಪ್ರಾಯ

7
ಎನ್ಎಪಿಎಂ ರಾಷ್ಟ್ರೀಯ ಸಂಚಾಲಕ

ಡಿಜಿಟಲ್‌ ಅಲ್ಲ ಡಿಲಿಟ್‌ ಇಂಡಿಯ: ಡಾ.ಸುನೀಲಂ ಅಭಿಪ್ರಾಯ

Published:
Updated:
Deccan Herald

ದೊಡ್ಡಬಳ್ಳಾಪುರ: ‘ದಲಿತಪರ ಸಂಘಟನೆಗಳ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಮತ್ತೆ ಬಲಪಡಿಸಲು ಮುಂದಾಗಿದೆ’ ಎಂದು ನ್ಯಾಷನಲ್‌ ಅಲಯನ್ಸ್‌ ಆಫ್‌ ಪೀಪಲ್ಸ್‌ ಮೂವ್‌ಮೆಂಟ್‌ (ಎನ್ಎಪಿಎಂ) ರಾಷ್ಟ್ರೀಯ ಸಂಚಾಲಕ ಡಾ.ಸುನೀಲಂ ಆರೋಪಿಸಿದರು.

ನಗರದ ಬೆಸೆಂಟ್ ಪಾರ್ಕ್‌ನಲ್ಲಿ ಶನಿವಾರ ಆರಂಭವಾದ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಮಟ್ಟದ ಪದಾಧಿಕಾರಿಗಳ ‘ಎರಡು ದಿನಗಳ ಅಧ್ಯಯನ ಶಿಬಿರ’ ಉದ್ಘಾಟಿಸಿ ಅವರು ಮಾತನಾಡಿದರು.

‘ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಭರವಸೆಗಳಂತೆ ಕೇಂದ್ರದ ಮೋದಿ ಸರ್ಕಾರ ನಡೆದುಕೊಳ್ಳುತ್ತಿಲ್ಲ.  ರೈತರು, ಕಾರ್ಮಿಕರು, ದಲಿತರು ಹಾಗೂ ಬಡಕಟ್ಟು ವರ್ಗದವರ ಪರವಾಗಿದ್ದ ಎಲ್ಲ ಕಾನೂನುಗಳನ್ನು ಡಿಲಿಟ್ (ಅಳಿಸಿ ಹಾಕುವ) ಮಾಡುತ್ತಿದೆ. ಡಿಜಿಟಲ್ ಇಂಡಿಯಾಕ್ಕೆ ಬದಲಾಗಿ ಡಿಲಿಟ್ ಇಂಡಿಯಾ ಜಾರಿಗೊಳಿಸುತ್ತಿದೆ’ ಎಂದರು.

‘ಕಾರ್ಮಿಕರ ಕಲ್ಯಾಣಕ್ಕಾಗಿ ಸಂಗ್ರಹವಾಗುತ್ತಿದ್ದ ಶೇ1ರಷ್ಟು ಸೆಸ್ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಇದರಿಂದ ದೇಶದಲ್ಲಿನ ಶೇ 96ರಷ್ಟು ಜನ ಅಸಂಘಟಿತ ಕ್ಷೇತ್ರದಲ್ಲಿರುವ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಬೃಹತ್ ರಸ್ತೆಗಳ ನಿರ್ಮಾಣದ ಹೆಸರಿನಲ್ಲಿ ಶೇ20 ರಷ್ಟು ಭೂಮಿಯನ್ನು ರೈತರಿಂದ ಕಬಳಿಸಲಾಗುತ್ತಿದೆ’ ಎಂದು ದೂರಿದರು.

ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಶೇ 40ರಷ್ಟು ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. ಕಾರ್ಪೊರೇಟ್ ವಲಯದಲ್ಲಿನ ಕಂಪನಿಗಳ ಸಾಲವನ್ನು ಮನ್ನಾ ಮಾಡಲಾಗುತ್ತಿದೆ. ಆದರೆ ರೈತರ ಸಾಲ ಮನ್ನಾ ಮಾಡಲು ಮಾತ್ರ ಹಿಂದೇಟು ಹಾಕಲಾಗುತ್ತಿದೆ ಎಂದು ದೂರಿದರು.

‘ವಿಚಾರವಾದಿಗಳ ಹಾಗೂ ಮಾನವ ಹಕ್ಕುಗಳ ಹೋರಾಟಗಾರರಿಗೆ ‘ನಗರ ನಕ್ಸಲ್’ ಹಣೆಪಟ್ಟಿ ಕಟ್ಟಿ ಬಂಧಿಸಲಾಗುತ್ತಿದೆ. ಬಹುತ್ವದ ವಾದಕ್ಕೆ ಮನ್ನಣೆ ನೀಡದೆ ಎಲ್ಲವನ್ನು ಡಿಲಿಟ್ ಮಾಡಲಾಗುತ್ತಿದೆ’ ಎಂದರು.

‘ಧರ್ಮದ ಆಧಾರದ ಮೇಲೆ ದೇಶ ನಿರ್ಮಿಸಲು ಮುಂದಾದ ಜಿನ್ನಾರನ್ನು ಧಿಕ್ಕರಿಸಿದ ಮುಸ್ಲಿಮರು, ಗಾಂಧೀಜಿಯ ಭಾರತವನ್ನು ನಂಬಿ ಇಲ್ಲಿಯೇ ಉಳಿದರು. ಆದರೆ ಇಂದು ಅಲ್ಪಸಂಖ್ಯಾತ ಸಮುದಾಯ ಆತಂಕದಲ್ಲಿ ಬದುಕು ನಡೆಸುತ್ತಿದೆ. ಗೋ ಸಂರಕ್ಷಣೆ ಹೆಸರಿನಲ್ಲಿ ದಲಿತರು ಸೇರಿದಂತೆ ಎಲ್ಲರ ಆಹಾರವನ್ನು ಮನುವಾದಿಗಳು ನಿರ್ಧರಿಸುವಂತಾಗಿರುವುದು ದುರಂತದ ಸಂಗತಿ’ ಎಂದರು.

ಅಧ್ಯಯನ ಶಿಬಿರದ ಸಾನ್ನಿಧ್ಯವನ್ನು ಟಿ.ನರಸೀಪುರದ ನಳಂದ ಬುದ್ಧ ವಿಹಾರದ ಭಂತೆ ಬುದ್ಧರತ್ನ ವಹಿಸಿದ್ದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ  ಅಧ್ಯಕ್ಷತೆ ವಹಿಸಿದ್ದರು. ಕಲ್ಬುರ್ಗಿ ವಿಭಾಗೀಯ ಸಂಚಾಲಕ ಶರಣಪ್ಪ ಗುಳಬಾಳ, ರಾಜ್ಯ ಖಜಾಂಚಿ ಕೆಂಪಣ್ಣಸಾಗ್ಯ, ವಿಜಯಪುರ ಜಿಲ್ಲಾ ಸಂಚಾಲಕ ಸುರೇಶ್ ಮಣ್ಣೂರು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !