ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಧನೆಗೆ ಶ್ರದ್ಧೆ, ಕಠಿಣ ಶ್ರಮ ಅವಶ್ಯ’

ವಿಜಯಪುರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ
Last Updated 14 ಅಕ್ಟೋಬರ್ 2019, 21:35 IST
ಅಕ್ಷರ ಗಾತ್ರ

ವಿಜಯಪುರ: ಒಬ್ಬ ಸಾಮಾನ್ಯ ವ್ಯಕ್ತಿ ಶ್ರದ್ಧೆ ಮತ್ತು ಕಠಿಣ ಪರಿಶ್ರಮ ವಹಿಸಿದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ವಾಲ್ಮೀಕಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಹೇಳಿದರು.

ಇಲ್ಲಿನ ಗಾಂಧಿ ಚೌಕದಲ್ಲಿ ಕಸಾಪ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಪವಿತ್ರವಾದ ರಾಮಾಯಣ ಕಾವ್ಯವನ್ನು ಪ್ರತಿಯೊಬ್ಬರು ಓದಬೇಕು. ಅದರಲ್ಲಿನ ತತ್ವ ಎಲ್ಲರೂ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಿಸಬೇಕು. ಸರ್ಕಾರ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಸೌಲಭ್ಯ ಒದಗಿಸಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಅಭಿವೃದ್ಧಿ ಹೊಂದಬೇಕು. ವಾಲ್ಮೀಕಿ ಸಾಮಾನ್ಯ ಬುಡಕಟ್ಟು ಸಮುದಾಯದಲ್ಲಿ ಬೇಡನಾಗಿ ಜನಿಸಿದರೂ ಅವರ ಚಿಂತನೆಗಳಿಂದ ಹಾಗೂ ಸುತ್ತಲಿನ ಪರಿಸರದಿಂದ ಮಹಾನ್ ಕವಿಯಾಗಿ ರೂಪುಗೊಳ್ಳುತ್ತಾರೆ. ದೇಶದ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣ ಕಾವ್ಯ ರಚಿಸಿ ವಿದ್ಯೆ ಯಾರ ಸ್ವತ್ತಲ್ಲ ಎಂಬುದನ್ನು ನಿರೂಪಿಸಿದ್ದಾರೆ ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಹಡಪದ್ ಮಾತನಾಡಿ, ರಾಮಾಯಣದಲ್ಲಿ ರಾಜನೀತಿ, ಮಾನವೀಯ ಮೌಲ್ಯ, ಸಮಾಜ ಸುಧಾರಣೆ, ಶಿಕ್ಷಣ, ಅಹಿಂಸೆ ಪ್ರತಿಪಾದನೆ, ಸಹನೆ, ಸಮಾನತೆ, ಪ್ರಾಮಾಣಿಕತೆ ತತ್ವ ಕಾಣಬಹುದು. ಇವುಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಉತ್ತಮ ಜೀವನ ನಡೆಸಬಹುದು. ಮಾನವೀಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ ಮಹಾನ್ ದಾರ್ಶನಿಕ. ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆ ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಪಿ.ವೆಂಕಟೇಶ್ ಮಾತನಾಡಿ, ವಾಲ್ಮೀಕಿ ಮಾನವ ಕುಲಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಇಡೀ ವಿಶ್ವಕ್ಕೆ ರಾಮಾಯಣ ಜನರ ಮನದಲ್ಲಿ ಮನೆ ಮಾಡುವಂತಹ ಸುಂದರವಾದ ಮಹಾಕಾವ್ಯ ಕಟ್ಟಿಕೊಟ್ಟ ಕೀರ್ತಿ ವಾಲ್ಮೀಕಿ ಅವರದ್ದು. ದೇಶದ ಅನೇಕ ಭಾಷೆಗಳಲ್ಲಿ ರಾಮಾಯಣ ರಚನೆಗೊಂಡಿದೆ. ವಾಲ್ಮೀಕಿ ಸಮಾಜಕ್ಕೆ ನೀಡಿರುವ ಕೊಡುಗೆ ಬಗ್ಗೆ ಎಲ್ಲರೂ ಹೆಮ್ಮೆ ಪಡಬೇಕು ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ವಿ.ಎನ್.ರಮೇಶ್, ಶಿವಕುಮಾರ್, ಎ.ಬಿ.ಪರಮೇಶ್, ನಾರಾಯಣಸ್ವಾಮಿ, ಮುನಿರಾಜು, ಮುನಿವೆಂಕಟರಮಣಪ್ಪ,ವಿ. ವಿಶ್ವನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT