ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯವಾಗುತ್ತಿದೆ ಹಳ್ಳಿ ಸೊಗಡು!

ಅವಸರದ ಜೀವನಶೈಲಿ ಆರೋಗ್ಯಯುತ ಬದುಕಿನ ಬಹುಭಾಗವನ್ನು ನುಂಗಿದೆ
Last Updated 9 ಏಪ್ರಿಲ್ 2019, 19:46 IST
ಅಕ್ಷರ ಗಾತ್ರ

ದೇವನಹಳ್ಳಿ: ನಗರೀಕರಣ ಹಾಗೂ ಜಾಗತೀಕರಣದ ಪರಿಣಾಮವಾಗಿ ಹಳ್ಳಿಯ ಸೊಗಡು ಮಾಯವಾಗುತ್ತಿದೆ. ಮಣ್ಣಿನ ಒಲೆ, ಮಣ್ಣಿನ ಮಡಿಕೆಗಳು ಇಂದು ಬಲು ಅಪರೂಪ. ಖಾರ ರುಬ್ಬವ ಕಲ್ಲು ಗುಂಡು, ಧಾನ್ಯ ಶೇಖರಿಸುತ್ತಿದ್ದ ಬಂಡಲ್‌ಗಳು ಆಧುನಿಕತೆಯ ಭರದಲ್ಲಿ ಮೂಲೆಗುಂಪಾಗುತ್ತಿವೆ. ಹಳ್ಳಿಯ ಸಂಪೂರ್ಣ ಚಿತ್ರಣವನ್ನು ತೆರೆದಿಡುತ್ತಿದ್ದ ಅಪೂರ್ವ ದೃಶ್ಯಗಳು ಇಲ್ಲವಾಗುತ್ತಿವೆ.

ಆಡುವ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗಿನ ಜೀವನ ಶೈಲಿ ಬದಲಾಗುತ್ತಿದೆ. ಖಾರ ರುಬ್ಬವ ಕಲ್ಲಿನ ಜಾಗವನ್ನು ಮಿಕ್ಸಿ, ಗ್ರೈಂಡರ್‌ ಆಕ್ರಮಿಸಿಕೊಂಡಿವೆ. ಒನಕೆ, ಒರಳು ಕಲ್ಲು ಮದುವೆ ಮತ್ತಿತರ ಸಮಾರಂಭದ ಶಾಸ್ತ್ರಕ್ಕೆ ಮಾತ್ರ ಸೀಮಿತವಾಗುತ್ತಿವೆ. ಶೇಖರಿಸಿದ ಹಾಲು, ಮೊಸರು, ಮಜ್ಜಿಗೆ ಅಟ್ಟಣಿಗೆ ಸೇರುವ ಬದಲು ರೆಫ್ರಿಜರೇಟ್‌ ಒಳಗೆ ಭದ್ರ ಪಡಿಸಲಾಗುತ್ತಿದೆ.

ನಾಲ್ಕು ದಶಕಗಳ ಹಿಂದೆ ಪ್ರತಿಯೊಂದು ಕುಟುಂಬದಲ್ಲಿ ಹಸುಗಳು, ಎಮ್ಮೆ, ಕುರಿ, ಕೋಳಿ ಸಾಕಾಣಿಕೆ ಇತ್ತು. ಕೃಷಿ ಚುಟವಟಿಕೆಯು ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿತ್ತು. ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳು, ತಿನಿಸುಗಳಲ್ಲಿ ಪರಸ್ಪರ ಕೊಡುಕೊಳ್ಳುವಿಕೆ ಇರುತ್ತಿತ್ತು. ಆದರೆ ಪ್ರಸ್ತುತ ಅಂತಹ ವಾತಾವರಣ ಇಲ್ಲವಾಗಿದೆ. ಅಕ್ಕ ಪಕ್ಕದವರು ಸಹ ಅಪ್ಪಟ ಅಪರಿಚಿತರಂತೆ ಬದುಕುತ್ತಿರುವುದು ಆತಂಕಕಾರಿ ಸಂಗತಿ ಎನ್ನುತ್ತಾರೆ ಹಿರಿಯರಾದ ಲಕ್ಷ್ಮಿನಾರಾಯಣಪ್ಪ.

ಹೆಚ್ಚು ದವಸ ಧಾನ್ಯ ಬೆಳೆದಾಗ ಅದನ್ನು ಮಣ್ಣಿನ ವಾಡೆ, ನೆಲದಲ್ಲಿನ ಹಗೆವು, ಕಣಜದಲ್ಲಿ ದಾಸ್ತಾನು ಮಾಡಲಾಗುತ್ತಿತ್ತು. ತೊಗರಿ, ಅವರೆ, ಅಲಸಂದೆ, ಹೆಸರು ಕಾಳು, ಇತರೆ ಕಡಿಮೆ ಬೆಳೆಯುವ ಧಾನ್ಯಗಳನ್ನು ಒಣಗಿದ ಬಾಳೆಪಟ್ಟೆಯನ್ನು ಬಳಸಿ, ಭತ್ತದ ಹುಲ್ಲಿನ ಬಿಗಿಯಾದ ಹಗ್ಗದಿಂದ ಸುತ್ತು ಹಾಕಿ, ಧಾನ್ಯಗಳು ಕೆಡದಂತೆ, ಹುಳುಗಳಿಂದ ಹಾಳಾಗದಂತೆ ಸಂರಕ್ಷಿಸಲಾಗುತ್ತಿತ್ತು. ಚೌಳು ಮಣ್ಣು, ಬೇವಿನ ಸೊಪ್ಪು ಮಿಶ್ರಣ ಮಾಡಿ ವಾರ್ಷಿಕ ಮುಂಗಾರು ಬಿತ್ತನೆಗೆ ಶೇಖರಿಸಲಾಗುತ್ತಿತ್ತು. ದಿನಬಳಕೆಗೆ ಪ್ರತ್ಯೇಕವಾಗಿ ಇಡಲಾಗುತ್ತಿತ್ತು.

ಈಗ ಪ್ರತಿಯೊಂದು ಧಾನ್ಯಕ್ಕೂ ಗೋಣಿ ಚೀಲ, ಪ್ಲಾಸ್ಟಿಕ್ ಚೀಲ ಬಳಕೆ ಮಾಡಲಾಗುತ್ತಿದೆ. ರಾಸಾಯಿನಿಕ ಗೊಬ್ಬರ ಬಳಸಿ ಬೆಳೆಯುವ ಧಾನ್ಯಗಳಲ್ಲಿ ಶಕ್ತಿಯೇ ಇರುವುದಿಲ್ಲ. ಪರಿಣಾಮವಾಗಿ ಬಿ.ಪಿ, ಸಕ್ಕರೆ ಕಾಯಿಲೆಯಂತಹ ರೋಗಗಳು ಬರುತ್ತಿವೆ ಎನ್ನುತ್ತಾರೆ ಮೇಲಿನ ತೋಟದ ಗೋಪಾಲಪ್ಪ.

ಮನೆಗಳಲ್ಲಿ ಮೊಸರು ಕಡೆದು ಮಜ್ಜಿಗೆ ಮಾಡಲಾಗುತ್ತಿತ್ತು. ತುಪ್ಪ ಕಾಯಿಸಿದರೆಅದರ ಪರಿಮಳ‌ ಇಡೀ ಕೇರಿಗೆ ಬೀರುತ್ತಿತ್ತು. ಸಾಂಬಾರ ಪುಡಿಗಳನ್ನು ಮನೆಯಲ್ಲೇ ಸಿದ್ಧಪಡಿಸಿಕೊಳ್ಳಲಾಗುತ್ತಿತ್ತು. ಈಗ ಅವೆಲ್ಲ ಇಲ್ಲ. ಪ್ರತಿಯೊಂದು ರೆಡಿಮೇಡ್ ಆಹಾರ ಎನ್ನುತ್ತಾರೆ ಚಿಕ್ಕಮುನಿಯಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT