ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಅಕ್ರಮ ಖಾತೆ ವಜಾಗೊಳಿಸಿ: ಸ್ಥಳೀಯರ ಒತ್ತಾಯ

ಮಳ್ಳೂರು ಗ್ರಾಮ ಪಂಚಾಯಿತಿ ಮುಂದೆ ಅಂಕತಟ್ಟಿ ಗ್ರಾಮಸ್ಥರ ಪ್ರತಿಭಟನೆ
Last Updated 17 ಅಕ್ಟೋಬರ್ 2019, 13:51 IST
ಅಕ್ಷರ ಗಾತ್ರ

‌ವಿಜಯಪುರ: ‘ಬೇಕೆ ಬೇಕು ನ್ಯಾಯ ಬೇಕು, ಅಕ್ರಮ ಖಾತೆ ಮಾಡಿರುವ ಅಧಿಕಾರಿಗಳಿಗೆ ಧಿಕ್ಕಾರ, ಭೂ ಕಬಳಿಕೆ ಮಾಡಿಕೊಳ್ಳುವವರಿಗೆ ಸಹಕಾರ ನೀಡಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ’ ಎನ್ನುವ ಘೋಷಣಾ ಫಲಕಗಳನ್ನು ಹಿಡಿದು ಅಂಕತಟ್ಟಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.

ಹೋಬಳಿ ಸಮೀಪದ ಮಳ್ಳೂರು ಗ್ರಾಮ ಪಂಚಾಯಿತಿ ಮುಂದೆ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಅವರ ಸಹಯೋಗದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ಅಕ್ರಮ ಖಾತೆ ಮಾಡಿರುವ ಅಧಿಕಾರಿಗಳನ್ನು ಕೂಡಲೇ ಅಮಾನತುಪಡಿಸಬೇಕು ಎಂದು ಒತ್ತಾಯಿಸಿದರು.

ಅಂಕತಟ್ಟಿ ಗ್ರಾಮದ ಮುಖಂಡ ಎಸ್.ವೆಂಕಟರೆಡ್ಡಿ ಮಾತನಾಡಿ, ‘ಅಂಕತಟ್ಟಿ ಗ್ರಾಮದ ಸರ್ವೇ ನಂಬರ್ 7/2ರಲ್ಲಿ 4.86 ಹೆಕ್ಟೇರ್ (12 ಎಕರೆ 30 ಗುಂಟೆ) ಭೂಮಿ ಇದೆ. ಈ ಭೂಮಿಯನ್ನು ಇದುವರೆಗೂ ಹೌಸ್‌ಲಿಸ್ಟ್ ಮಾಡಿಲ್ಲ. 4 ಎಕರೆ ಸರ್ಕಾರಿ ಗ್ರಾಮಠಾಣೆ ಜಾಗಕ್ಕೆ ದಾಖಲೆಗಳೇ ಇಲ್ಲ. ಈ ಜಾಗವನ್ನು ಗ್ರಾಮದ ಪ್ರಭಾವಿಗಳು 2017ರಲ್ಲಿ ಒತ್ತುವರಿ ಮಾಡಲು ಪ್ರಯತ್ನ ಮಾಡಿದ್ದರು. ಕೂಡಲೇ ಎಚ್ಚೆತ್ತುಕೊಂಡ ಗ್ರಾಮಸ್ಥರು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಎಲ್ಲರಿಗೂ ದೂರು ನೀಡಿದ್ದೆವು. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಇಲಾಖೆ ಮೇಲಧಿಕಾರಿಗಳು ಆದೇಶ ನೀಡಿದ್ದರು’ ಎಂದು ತಿಳಿಸಿದರು.

‘ಮೇಲಧಿಕಾರಿಗಳ ಆದೇಶದಂತೆ ಅಂತಕಟ್ಟಿ ಗ್ರಾಮಕ್ಕೆ ಬಂದಿದ್ದ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸದರಿ ಭೂಮಿಯನ್ನು ಸರ್ವೇ ಮಾಡಿ ಗಡಿ ಗುರುತಿಸಿದ್ದರು. ಸರ್ಕಾರಿ ಗ್ರಾಮಠಾಣಾ ಜಾಗವನ್ನು ಪಂಚಾಯಿತಿ ವಶಕ್ಕೆ ತೆಗೆದುಕೊಳ್ಳುವಂತೆ, ಅಕ್ರಮವಾಗಿ ಅನುಭವದಲ್ಲಿರುವವರಿಗೆ ನೋಟಿಸ್ ಜಾರಿ ಮಾಡುವಂತೆ ಆದೇಶ ಮಾಡಿದ್ದರೂ, ಇದುವರೆಗೂ ಸದರಿ ಭೂಮಿಯನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿಲ್ಲ. ಅಧಿಕಾರಿಗಳು ಶಾಮೀಲಾಗಿ ಸದರಿ ಭೂಮಿಯನ್ನು ನಿಯಮಬಾಹಿರವಾಗಿ ದಾಖಲೆ ಸೃಷ್ಟಿಸಿಕೊಟ್ಟಿದ್ದಾರೆ’ ಎಂದು ಆರೋಪಿಸಿದರು.

ರೈತ ಮುಖಂಡ ಮಳ್ಳೂರು ಶಿವಣ್ಣ, ಗ್ರಾಮಸ್ಥರಾದ ಜಗನ್ನಾಥ್, ಬಾಬು, ನಾರಾಯಣಸ್ವಾಮಿ, ಎಸ್.ದೇವರಾಜು, ಕೆ.ದೇವರಾಜು, ಅನಿತಮ್ಮ, ಅಮೃತ, ರತ್ನಮ್ಮ, ಗೌರಮ್ಮ, ನಾರಾಯಣಮ್ಮ, ರಾಧಮ್ಮ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಶ್ರೀನಿವಾಸ್, ಅರುಣ್‌ ಕುಮಾರ್, ಚನ್ನೇಗೌಡ, ನಾಗರಾಜ್, ಶಂಕರನಾರಾಯಣ, ಶ್ರೀನಿವಾಸ್, ಶ್ರೀಧರ್, ಚಿಕ್ಕವೆಂಕಟರಾಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT