ಬುಧವಾರ, ಸೆಪ್ಟೆಂಬರ್ 18, 2019
26 °C

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ: ಸಂತಸ

Published:
Updated:
Prajavani

ದೇವನಹಳ್ಳಿ: 2019–20ನೇ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎ.ಎಂ. ನಾಗೇಶ್ ಅವರಿಗೆ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ಅರ್ಹ ಎಂದು ಪ್ರಾಂಶುಪಾಲೆ ವಾಣಿಶ್ರೀ ಹೇಳಿದರು.

ಇಲ್ಲಿನ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ನಡೆದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶಿಕ್ಷಕರು ದೈನಂದಿನ ಬೋಧನಾ ವೃತ್ತಿಯ ಜೊತೆಗೆ ವಿದ್ಯಾರ್ಥಿಗಳೊಂದಿಗೆ ಒಡನಾಟ ಇಟ್ಟುಕೊಳ್ಳಬೇಕು, ವಿದ್ಯಾರ್ಥಿಗಳ ವೈಯಕ್ತಿಕ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಪರಿಹಾರ ಸೂಚಿಸಿ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹಾಗೂ ಮಾರ್ಗದರ್ಶನ ನೀಡಬೇಕು’ ಎಂದರು.

ವಿದ್ಯಾರ್ಥಿಗಳು ಪೋಷಕರಿಗಿಂತ ಶಿಕ್ಷಕರ ಮಾತಿನಲ್ಲಿ ಹೆಚ್ಚು ನಂಬಿಕೆ ಇಟ್ಟಿರುತ್ತಾರೆ, ಉತ್ತಮ ಮಾರ್ಗದರ್ಶನ ನೀಡಿ ಪ್ರಾಥಮಿಕ ಶಿಕ್ಷಣದ ಅಡಿಗಲ್ಲು ಹಾಕಿದಾಗ ಭವಿಷ್ಯದ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎ.ಎಂ. ನಾಗೇಶ್, 2002ರಲ್ಲಿ ಜನ ಮೆಚ್ಚಿದ ಶಿಕ್ಷಕ, 2003 ರಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಉತ್ತಮ ಶಿಕ್ಷಕ, 2010 ರಲ್ಲಿ ವಿಭಾಗೀಯ ಮಟ್ಟದ ಶ್ರೇಷ್ಠ ಬಿ.ಆರ್.ಸಿ. ಅಧಿಕಾರಿ ಪ್ರಶಸ್ತಿ, 2017 ರಲ್ಲಿ ನ್ಯಾಷನಲ್ ಡೆವಲಪರ್ ರೋಟರಿರವರಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತ್ತು ಎಂದರು.

‘ಈ ಬಾರಿ ಸಾರ್ವಜನಿಕ ಇಲಾಖೆಯಿಂದ ಗುರುತಿಸಿರುವುದು ಖುಷಿಯ ವಿಷಯವಾದರೂ ನಿಮ್ಮೆಲ್ಲರ ಸಹಕಾರದಿಂದ ಲಭಿಸಿದೆ. ಸತತ 26 ವರ್ಷಗಳ ಶಿಕ್ಷಣ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಇಲಾಖೆ ಅವಕಾಶ ಮಾಡಿಕೊಟ್ಟಿದೆ’ ಎಂದು ಹೇಳಿದರು.

ಶಿಕ್ಷಕರಾದ ಬಸವರಾಜು, ಗೋಪಾಲಯ್ಯ, ಸುಧಾಕರ್, ಶ್ರೀನಿವಾಸ ಮೂರ್ತಿ ಇದ್ದರು.

Post Comments (+)