ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಕ್ಷೇತ್ರ ಮಾದರಿಯ ರಂಗಮಂದಿರ

ಪಾರಿವಾಳ ಗುಡ್ಡದ ಬಳಿ ಸ್ಥಳ ಪರಿಶೀಲಿಸಿ ಟಿ.ಎಸ್‌. ನಾಗಾಭರಣ ಹೇಳಿಕೆ
Last Updated 2 ಅಕ್ಟೋಬರ್ 2020, 2:03 IST
ಅಕ್ಷರ ಗಾತ್ರ

ದೇವನಹಳ್ಳಿ: ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ಜಿಲ್ಲಾಮಟ್ಟದ ರಂಗಮಂದಿರ ನಿರ್ಮಾಣ ಮಾಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.

ಇಲ್ಲಿನ ಐತಿಹಾಸಿಕ ಪಾರಿವಾಳ ಗುಡ್ಡದ ಬಳಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ 2020-21ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ, ₹ 60 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ರಂಗಮಂದಿರ ನಿರ್ಮಾಣ ಮಾಡಲು ಮುಂದಾಗಿದ್ದು ಬೆಂಗಳೂರು ಉತ್ತರ ಭಾಗದಲ್ಲಿ ದೇವನಹಳ್ಳಿ ತಾಲ್ಲೂಕು ಇದೆ. ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾ ರಂಗಮಂದಿರ ಇಲ್ಲ. ಸೆ. 9ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5 ಎಕರೆ ಭೂ ಪ್ರದೇಶದಲ್ಲಿ ₹ 15 ಕೋಟಿ ವೆಚ್ಚದಲ್ಲಿ ರಂಗಮಂದಿರ ನಿರ್ಮಾಣ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು’ ಎಂದು ಹೇಳಿದರು.

‘ದೇವನಹಳ್ಳಿ-ಚಿಕ್ಕಬಳ್ಳಾಪುರ ಜಿಲ್ಲೆ ಮುಖ್ಯರಸ್ತೆಯ ನಂದಿಕ್ರಾಸ್ ಬಳಿ ಇರುವ ಪಾರಿವಾಳ ಗುಡ್ಡದ ಸ್ಥಳದಲ್ಲಿ 4 ಎಕರೆ ಭೂಪ್ರದೇಶವನ್ನು ಇಂದು ಪರಿಶೀಲಿಸಲಾಗಿದ್ದು, ಈ ಸ್ಥಳವು ರಂಗಮಂದಿರ ನಿರ್ಮಾಣಕ್ಕೆ ಉತ್ತಮ ಹಾಗೂ ಪೂರಕ ವಾತಾವರಣ ಹೊಂದಿದೆ. ಕಲಾವಿದರಿಗೆ ಅನುಕೂಲವಾದ ಸ್ಥಳ ಆಗಿದೆ. ಇದನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ಹಸಿರು ವಾತಾವರಣದಲ್ಲಿ ಕಲಾ ಕ್ಷೇತ್ರ ಭವನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಎಸ್.ರಂಗಪ್ಪ ಮಾತನಾಡಿ, ‘ಇಲ್ಲಿನ ಪಾರಿವಾಳ ಗುಡ್ಡ ಐತಿಹಾಸಿಕ ನೆಲೆಗಟ್ಟಿನಲ್ಲಿ ನಿರ್ಮಾಣಗೊಂಡಿರುವ ಪ್ರಕೃತಿದತ್ತ ವಾತಾವರಣದಲ್ಲಿ ಕಲಾಕ್ಷೇತ್ರ ಭವನ ನಿರ್ಮಾಣ ಸೂಕ್ತವಾಗಿದೆ. ಅಭಿವೃದ್ಧಿಯಾಗುತ್ತಿರುವ ಈ ವಾತಾವರಣಕ್ಕೆ ಪ್ರವಾಸಿಗರು ಬರುತ್ತಾರೆ. ಜತೆಗೆ ಕಲಾ ಕ್ಷೇತ್ರ ಭವನ ನಿರ್ಮಾಣಗೊಂಡರೆ ಇಡೀ ಗ್ರಾಮಾಂತರ ಜಿಲ್ಲೆಯ ವೃತ್ತಿ ಮತ್ತು ಹವ್ಯಾಸಿ ಕಲಾವಿದರಿಗೆ ಹೆಚ್ಚಿನ ಅನುಕೂಲ. ಪ್ರತಿಯೊಬ್ಬ ಕಲಾವಿದ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ಬಾರಿ ಅಭಿನಯಿಸಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾರೆ. ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ರವೀಂದ್ರ ಕಲಾ ಕ್ಷೇತ್ರ ಮಾದರಿಯಲ್ಲಿ ಎಲ್ಲಾ ರೀತಿಯ ಮೂಲ ಸೌಲಭ್ಯ ಕಲ್ಪಿಸಿ ಅವಕಾಶ ನೀಡಲು ಸರ್ಕಾರ ಆದೇಶ ನೀಡಿದೆ’ ಎಂದು ಹೇಳಿದರು.

ನಿರ್ಮಿತಿ ಕೇಂದ್ರದ ಜಿಲ್ಲಾ ಯೋಜನಾ ನಿರ್ದೇಶಕ ವಾಸುದೇವ್, ತಾಲ್ಲೂಕು ತಹಶೀಲ್ದಾರ್ ಅಜಿತ್‌ ಕುಮಾರ್ ರೈ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಜಿಲ್ಲೆಯ ಸಹಾಯಕ ನಿರ್ದೇಶಕ ಮಂಜುನಾಥ್.ಪಿ.ಆರಾಧ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT