ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಕ್ಷೇತ್ರದಲ್ಲಿ ಅಹವಾಲು ಆಲಿಸಿದ ಡಿಸಿಎಂ

ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌ ಜನಸ್ಪಂದನಾ
Published : 1 ಸೆಪ್ಟೆಂಬರ್ 2024, 16:51 IST
Last Updated : 1 ಸೆಪ್ಟೆಂಬರ್ 2024, 16:51 IST
ಫಾಲೋ ಮಾಡಿ
Comments

ಕನಕಪುರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಸ್ವಕ್ಷೇತ್ರ ಕನಕಪುರದಲ್ಲಿ ಜನರ ಅಹವಾಲು ಆಲಿಸಿ, ಸ್ಥಳದಲ್ಲೇ ಪರಿಹಾರ ಒದಗಿಸುವ ಪ್ರಯತ್ನ ನಡೆಸಿದರು.

ಕನಕಪುರದ ನಿವಾಸದಲ್ಲಿ ಜಿಲ್ಲೆ ಜನರಿಗಾಗಿ ಭಾನುವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಿವಕುಮಾರ್‌ ನೂರಾರು ಜನರಿಂದ ಅಹವಾಲು ಸ್ವೀಕರಿಸಿದರು.

ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ, ಸಹಾಯ ಧನ, ನಿವೇಶನ, ಮನೆ, ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆ ಬಾವಿ, ಸರ್ಕಾರಿ ಶಾಲೆ ಶಿಕ್ಷಕರ ನೇಮಕ, ಕಾಲೇಜು ಶುಲ್ಕ ಪಾವತಿಗೆ ಸಹಾಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಿವಿಯಾದರು.

ಸಾರ್ವಜನಿಕ ಮನವಿ ಪರಿಶೀಲಿಸಿದ ಡಿಸಿಎಂ ಅವರು ಸಂಬಂಧ ಪಟ್ಟ ಇಲಾಖೆ ಅರ್ಜಿ ವಿಲೇವಾರಿ ಮತ್ತು ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು.

ಕೂತಗೊಂಡನಹಳ್ಳಿ ಸರ್ಕಾರಿ ಶಾಲೆಯಲ್ಲಿ 80 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರಿದ್ದಾರೆ ಎಂದು ಗ್ರಾಮಸ್ಥರು ಮನವಿ ನೀಡಿದಾಗ, ಕೂಡಲೇ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಉಯ್ಯಂಬಳ್ಳಿ, ಯಡಮಾರನಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕು ಎಂಬ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಿವಕುಮಾರ್ ಭವನ ನಿರ್ಮಾಣದ ಭರವಸೆ ನೀಡಿದರು.

ಮೆಳೆಕೋಟೆ ಮಹಮದ್ ಅಸ್ಲಾಂ ತಮ್ಮ ವಾರ್ಡಿನಲ್ಲಿ ಕೊಳವೆ ಬಾವಿ ಇದ್ದರೂ ಬರುತ್ತಿಲ್ಲ. ಸ್ಲಂ ಬೋರ್ಡ್ 20 ಮನೆಗಳು ಪೂರ್ಣಗೊಂಡಿಲ್ಲ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಕೂಡಲೇ ಈ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ, ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಜನಸ್ಪಂದನಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲೆ ಸೇರಿದಂತೆ ತಾಲ್ಲೂಕಿನ 500ಕ್ಕೂ ಹೆಚ್ಚು ಜನತೆ ತಮ್ಮ ಅಹವಾಲು ಅರ್ಜಿ ಸಲ್ಲಿಸಿದರು.

ರಸ್ತೆಗಾಗಿ ಎರಡು ಬಣ ತಿಕ್ಕಾಟ

ನಲ್ಲಹಳ್ಳಿ ಗ್ರಾಮದಲ್ಲಿ ನಾಲ್ಕೈದು ಕುಟುಂಬ ಓಡಾಡುವ ರಸ್ತೆಯಲ್ಲಿ ತಡೆಗೋಡೆ ನಿರ್ಮಾಣ ವಿಚಾರದಲ್ಲಿ ಎರಡು ಬಣಗಳು ಡಿಸಿಎಂ ಎದುರೆ ವಾಗ್ವಾದ ನಡೆಸಿದರು. ಕಮಲಮ್ಮ ಮತ್ತು ಮನೆಯವರು ಉಳಿದ ನಾಲ್ಕೈದು ಮನೆಯವರು ಓಡಾಡಲು ಇರುವ ಜಾಗದಲ್ಲಿ ತಡೆಗೋಡೆ ಹಾಕಿದ್ದಾರೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ತಡೆಗೋಡೆ ನಿರ್ಮಿಸಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಒಂದು ಬಣ ವಾದ ಮಾಡಿದರೆ ಮತ್ತೊಂದು ಬಣ ಇದು ನಮಗೆ ಸೇರಿದ ಜಾಗ ಇದಕ್ಕೆ ಸಂಬಂಧಿಸಿದ ದಾಖಲೆ ನಮ್ಮ ಬಳಿ ಇವೆ. ಅವರ ಬಳಿ ಯಾವುದೇ ದಾಖಲೆ ಇಲ್ಲ. ನೀವೇ ಪರಿಶೀಲಿಸಿ. ನಮಗೆ ತಡೆಗೋಡೆ ಹಾಕಲು ಅವಕಾಶ ಮಾಡಿಕೊಡಿ ಎಂದು ಮತ್ತೊಂದು ಬಣ ವಾದಿಸಿತು. ಎರಡೂ ಬಣಗಳ ಮಾತನ್ನು ಆಲಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಜಿಲ್ಲಾಧಿಕಾರಿ ಹಾಗೂ ಉಪ ಆಯುಕ್ತರನ್ನು ಕರೆದು ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ದಾಖಲೆ ಪರಿಶೀಲಿಸಿ ಕಾನೂನು ಚೌಕಟ್ಟಿನಲ್ಲಿ ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ಸಮಸ್ಯೆ ಬಗೆಹರಿಸಿ ಎಂದು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT