ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತದಾನದಿಂದ ವಂಚಿತರಾಗದಿರಿ’

ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ
Last Updated 8 ಏಪ್ರಿಲ್ 2019, 13:32 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಭಗತ್‍ಸಿಂಗ್ ಕ್ರೀಡಾಂಗಣದಲ್ಲಿ ಮತದಾರರ ಬೃಹತ್ ಕಾರ್ಯಕ್ರಮ ಹಾಗೂ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಲತಾ ಬಲೂನ್ ಹಾಗೂ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮತದಾನದ ಪ್ರಮಾಣ ಹೆಚ್ಚಳಕ್ಕಾಗಿ ಮತದಾನ ಜಾಗೃತಿ ಕಾರ್ಯಕ್ರಮ ಜಿಲ್ಲೆಯಾದ್ಯಂತ ರೂಪಿಸಲಾಗಿದೆ. ಮತದಾನ ಜಾಗೃತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಮತದಾನವಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿಯೂ ಹೆಚ್ಚಿನ ಮತದಾನ ಆಗುವ ನಿರೀಕ್ಷೆಯಿದೆ ಎಂದರು.

ಈಗಾಗಲೇ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಟಕ, ಜಾಥಾ ನಡೆಸಲಾಗಿದೆ. ಈ ಬಾರಿ ಅಂಗವಿಕಲರು ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ವಾಹನ ಸೌಲಭ್ಯ ಮಾಡಲಾಗಿದೆ. ಹಿರಿಯ ನಾಗರಿಕರು, ಮಹಿಳೆಯರು, ಯುವ ಮತದಾರರು ಹಾಗೂ ತೃತೀಯ ಲಿಂಗಿಗಳು ಮತಗಟ್ಟೆಗೆ ಬರುವಂತೆ ಮಾಡಲಾಗುತ್ತಿದೆ. ಮತದಾನ ಪ್ರತಿಯೊಬ್ಬ ಮತದಾರರ ಜವಾಬ್ದಾರಿಯಾಗಿದೆ. ಪ್ರತಿಯೊಂದು ಮತವೂ ಮುಖ್ಯವಾಗಿದ್ದು, ಮತದಾನದಿಂದ ಯಾವೊಬ್ಬ ಮತದಾರರು ದೂರ ಉಳಿಯಬಾರದು. ರಜೆ ಕಾರಣದಿಂದಾಗಿ ಮತದಾನಕ್ಕೆ ಗೈರಾಗಿ ಪ್ರಜಾಪ್ರಭುತ್ವದ ಕರ್ತವ್ಯ ಮರೆಯಬಾರದು ಎಂದು ತಿಳಿಸಿದರು.

ಭಗತ್‍ಸಿಂಗ್ ಕ್ರೀಡಾಂಗಣದಲ್ಲಿ ಮತದಾನದ ಸಂದೇಶ ಹೊತ್ತ ಆಕಾಶಬುಟ್ಟಿಗಳನ್ನು ಹಾರಿ ಬಿಡಲಾಯಿತು. ಮತದಾನದ ಜಾಗೃತಿ ಮೂಡಿಸುವ ವಿಶಿಷ್ಟ ರಂಗೋಲಿ ಬರಹಗಳು ಗಮನ ಸೆಳೆದವು. ಇದೇ ವೇಳೆ ಮತದಾನ ಕುರಿತ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಎಂ.ದ್ಯಾಮಪ್ಪ, ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಶೋಭಾ, ಯೋಜನಾಧಿಕಾರಿ ರೂಪಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರುದ್ರೇಶ್, ಕ್ಷೇತ್ರ ಶಿಕ್ಷಣಾಕಾರಿ ಭೈಯಪ್ಪ ರೆಡ್ಡಿ, ಸಿಡಿಪಿಒ ಜಯಲಕ್ಷ್ಮೀ, ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಆಯುಕ್ತ ಬಿ.ಕೆ.ಶಿವಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪುಷ್ಪಾ, ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ ಕಾರ್ಯದರ್ಶಿ ಅಮಲಿ ನಾಯಕ್ ಸೇರಿದಂತೆ ನಗರಸಭೆ ಆರೋಗ್ಯ ನಿರೀಕ್ಷಕಿ ರೂಪಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಭಗತ್‍ಸಿಂಗ್ ಕ್ರೀಡಾಂಗಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಹೊರಟ ಮತದಾನ ಜಾಗೃತಿ ಜಾಥಾದಲ್ಲಿ ಅಂಗವಿಕಲರು ತ್ರಿಚಕ್ರವಾಹನಗಳೊಂದಿಗೆ ಭಾಗವಹಿಸಿದ್ದರು.

ಜಾಥಾದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತರು, ಸ್ಕೌಟ್ಸ್ ಮತ್ತು ಗೈಡ್ಸ್, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT