ಸರ್ಕಾರಿ ನೌಕರರ ಕ್ರೀಡಾಕೂಟದ ನಿರ್ಲಕ್ಷ್ಯ ಬೇಡ

7
1,400 ಸ್ಪರ್ಧಿಗಳ ಪೈಕಿ ಕನಿಷ್ಠ 600 ಸ್ಪರ್ಧಿಗಳೂ ಇಲ್ಲ

ಸರ್ಕಾರಿ ನೌಕರರ ಕ್ರೀಡಾಕೂಟದ ನಿರ್ಲಕ್ಷ್ಯ ಬೇಡ

Published:
Updated:
Prajavani

ದೇವನಹಳ್ಳಿ: ‘ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಪ್ರತಿಭಾನ್ವಿತ ಕ್ರೀಡಾಪಟುಗಳೇ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ‘ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಹನುಮಂತರಾಯಪ್ಪ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸರ್ಕಾರಿ ನೌಕರರ ಸಂಘ ಸಹಭಾಗಿತ್ವದಲ್ಲಿ ನಡೆದ ‘ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಲ್ಕು ತಾಲ್ಲೂಕಿನಿಂದ 350 ವಿಜೇತರನ್ನು ಆಯ್ಕೆ ಮಾಡಲಾಗಿತ್ತು. ಒಟ್ಟು 1,400 ಸ್ಪರ್ಧಿಗಳ ಪೈಕಿ ಕನಿಷ್ಠ 600 ಸ್ಪರ್ಧಿಗಳು ಇಲ್ಲವೆಂದರೆ ನೌಕರರಲ್ಲಿ ಒಗ್ಗಟ್ಟಿಲ್ಲ ಎಂಬ ಭಾವನೆ ಸಹಜವಾಗಿ ಬರಲಿದೆ. ಪ್ರತಿ ವರ್ಷ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕ್ರೀಡಾಕೂಟ ಈ ಬಾರಿ ದೇವನಹಳ್ಳಿಯಲ್ಲಿ ನಡೆಸಲಾಗುತ್ತಿದೆ. ಗಣ್ಯರು ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದರೂ ಕೈಕೊಟ್ಟ ಪರಿಣಾಮ ವಿಳಂಬವಾಗಿದೆ ಎಂದರು.

ಸರ್ಕಾರಿ ನೌಕರರ ಸಂಘ ಗ್ರಾಮಾಂತರ ಜಿಲ್ಲಾ ಘಟಕ ಅಧ್ಯಕ್ಷ ಶಿವರಾಜು ಮಾತನಾಡಿ, ‘ಕಾರ್ಯಕ್ರಮ ಬೆಳಿಗ್ಗೆ 10ಕ್ಕೆ ನಿಗದಿಯಾಗಿತ್ತು. ಮಧ್ಯಾಹ್ನ 12.30ಕ್ಕೆ ಆರಂಭವಾಗಿದೆ. ಇದಕ್ಕಾಗಿ ಕ್ಷಮೆ ಕೇಳುತ್ತೇನೆ. ಮೊದಲ ಬಾರಿಗೆ ದೇವನಹಳ್ಳಿ ತಾಲ್ಲೂಕಿನಲ್ಲಿ ಕ್ರೀಡಾಕೂಟ ಆಯೋಜನೆ ಮಾಡಿರುವುದರಿಂದ ಸ್ವಲ್ಪ ಗೊಂದಲವಾಗಿದೆ. ಆದರೂ ಕ್ರೀಡಾಪಟುಗಳು ಜಿಲ್ಲಾ ಮಟ್ಟದಲ್ಲಿ ಆಯ್ಕೆಗೊಂಡು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಗೊಳ್ಳಬೇಕು’ ಎಂದರು.

ಪೊಲೀಸ್ ಇನ್‌ಸ್ಪೆಕ್ಟರ್ ಶಿವಕುಮಾರ್ ಮಾತನಾಡಿದರು. ಹೊಸಕೋಟೆ ತಾಲ್ಲೂಕು ನೌಕರರ ಸಂಘ ಅಧ್ಯಕ್ಷ ನರೇಶ್, ನೆಲಮಂಗಲ ತಾಲ್ಲೂಕು ಅಧ್ಯಕ್ಷ ವಾಸುದೇವ ಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಸಿದ್ಧಗಂಗಯ್ಯ, ಜಿಲ್ಲಾ ಸರ್ಕಾರಿ ನೌಕರ ಸಂಘಟನಾ ಕಾರ್ಯದರ್ಶಿ ನಟರಾಜ್, ರಾಜ್ಯ ಘಟಕ ಸಹ ಕಾರ್ಯದರ್ಶಿ ಆಂಜಿನಪ್ಪ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ದೇವಿಕಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !