ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸಾರ್ಹತೆ ಮಾಧ್ಯಮದ ಜೀವಾಳ

ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಹೇಳಿಕೆ
Last Updated 19 ಜೂನ್ 2018, 11:09 IST
ಅಕ್ಷರ ಗಾತ್ರ

ಕಮಲಾಪುರ (ಹೊಸಪೇಟೆ ತಾಲ್ಲೂಕು): ‘ವಿಶ್ವಾಸಾರ್ಹತೆ ಮಾಧ್ಯಮದ ಜೀವಾಳ. ಆದರೆ, ಇತ್ತೀಚಿನ ದಿನಗಳಲ್ಲಿ ಅದಕ್ಕೆ ಕುಂದು ತರುವಂಥ ಕೆಲಸಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಹೇಳಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯದಿಂದ ಸೋಮವಾರ ಆಯೋಜಿಸಿದ್ದ 2017–18ನೇ ಸಾಲಿನ ಸ್ನಾತಕೋತ್ತರ ಪತ್ರಿಕೋದ್ಯಮ, ಸಮಾಜಶಾಸ್ತ್ರ ಹಾಗೂ ಡಿಪ್ಲೋಮಾ ಕೋರ್ಸ್‌ಗಳ ಸಂಪರ್ಕ ತರಗತಿಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

‘ವಿದ್ಯುನ್ಮಾನ ಮಾಧ್ಯಮಗಳಿಗೆ ಹೋಲಿಸಿದರೆ ಪತ್ರಿಕೆಗಳು ಈಗಲೂ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ. ವಿದ್ಯುನ್ಮಾನ ಮಾಧ್ಯಮಗಳು ರೋಚಕತೆ, ಜನರಿಗೆ ಬೇಕಿಲ್ಲದ ಸುದ್ದಿಗಳನ್ನು ಬಿತ್ತರಿಸುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಒಳ್ಳೆಯದನ್ನು ಮಾಡಬೇಕಾದ ಪತ್ರಕರ್ತರು ನಕಾರಾತ್ಮಕ ವಿಷಯಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ. ದೇಶದ ಆರ್ಥಿಕತೆ, ಸಮಾಜದ ಬಗ್ಗೆ ಏನೂ ಮಾಡುತ್ತಿಲ್ಲ’ ಎಂದರು.

‘ಮಾಧ್ಯಮ ಕ್ಷೇತ್ರ ಈ ಹಿಂದೆಯೂ ಉದ್ಯಮವಾಗಿತ್ತು. ಈಗಲೂ ಉದ್ಯಮವಾಗಿಯೇ ಇದೆ. ಆದರೆ, ಅಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಅದೊಂದು ವೃತ್ತಿ ಆಗಿದೆ. ಹಿಂದೆ ಪತ್ರಿಕೆಗಳ ಮುಖಪುಟದ ತುಂಬೆಲ್ಲ ಸುದ್ದಿಗಳೇ ಇರುತ್ತಿದ್ದವು. ಈಗ ಅವುಗಳ ಜಾಗ ಜಾಹೀರಾತುಗಳು ಆಕ್ರಮಿಸಿಕೊಳ್ಳುತ್ತಿವೆ. ಅದು ತಪ್ಪಲ್ಲ. ಅದೊಂದು ವಿದ್ಯಮಾನವಷ್ಟೇ. ಉದಾರೀಕರಣದ ನಂತರ ಪತ್ರಿಕೆಯ ಓದುಗರು ಗ್ರಾಹಕರಾಗಿ ಬದಲಾದರು’ ಎಂದರು.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಎಸ್‌. ಜಯಶ್ರೀ ಮಾತನಾಡಿ, ‘ಜಾಗತೀಕರಣದ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ಸ್ಥಳೀಯ ಸಮಸ್ಯೆಗಳಾದ ಅಪೌಷ್ಟಿಕತೆ, ಬಡತನದ ಕುರಿತು ಯಾರೂ ಮಾತನಾಡುತ್ತಿಲ್ಲ. ಮಾಧ್ಯಮದವರು ಅದರ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ. ಸಮಾಜಶಾಸ್ತ್ರಜ್ಞರು ಅದರ ಕುರಿತು ಆಳ ಅಧ್ಯಯನ ಮಾಡಬೇಕು’ ಎಂದು ಹೇಳಿದರು.

‘ಶಿಕ್ಷಣದಿಂದ ಮನುಷ್ಯ ನಾಗರಿಕರಾಗುತ್ತಾನೆ. ಅದು ಸಮಾಜದಲ್ಲಿ ಬದಲಾವಣೆ ತರುತ್ತದೆ. ಆದರೆ, ಶಿಕ್ಷಣ ಕ್ಷೇತ್ರಕ್ಕೆ ಕಾರ್ಪೊರೇಟ್‌ನವರು ಪ್ರವೇಶಿಸಿದ ನಂತರ ಅದು ಮಾರುಕಟ್ಟೆಯ ಸ್ವರೂಪ ಪಡೆದುಕೊಂಡಿದೆ’ ಎಂದರು.

ಕುಲಸಚಿವ ಡಿ. ಪಾಂಡುರಂಗಬಾಬು, ಕಾರ್ಯಕ್ರಮದ ಸಂಚಾಲಕ ಕೆ.ಎಂ. ಮೇತ್ರಿ, ನಿರ್ದೇಶಕ ವಾಸುದೇವ ಬಡಿಗೇರ, ಪ್ರಾಧ್ಯಾಪಕ ಎಸ್‌.ವೈ.ಸೋಮಶೇಖರ್‌ ಇದ್ದರು.

‘ಮೇಲ್ಜಾತಿಯವರ ದುರಹಂಕಾರ’

ಕಮಲಾಪುರ: ‘ಎಂಟನೇ ತರಗತಿ ಓದಿದವರು ಉನ್ನತ ಶಿಕ್ಷಣ ಖಾತೆ ಸಚಿವರಾಗಿದ್ದಾರೆ ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡಲಾಯಿತು. ಇದು ಮೇಲ್ಜಾತಿಯವರ ದುರಹಂಕಾರವಲ್ಲದೇ ಮತ್ತೇನು?’ ಎಂದು ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಪ್ರಶ್ನಿಸಿದರು.

‘ಈ ಹಿಂದೆಯೂ ಕಡಿಮೆ ಓದಿದ ಅನೇಕರು ಉನ್ನತ ಶಿಕ್ಷಣ ಖಾತೆ ಸಚಿವರಾಗಿದ್ದರು. ಅದರಲ್ಲಿ ಹೊಸ ತೇನಿದೆ. ಹಾಗಿದ್ದರೆ ಆರೋಗ್ಯ ಕ್ಷೇತ್ರವನ್ನು ವೈದ್ಯರಾದವರಿಗೆ ಕೊಡಬೇಕು. ಯಾರಿಗೆ ಯಾವ ಖಾತೆ ಕೊಟ್ಟರೇನು, ಅಂತಿಮವಾಗಿ ಎಲ್ಲವನ್ನೂ ನೋಡಿಕೊಳ್ಳುವವರು ಅಧಿಕಾರಿಗಳೇ. ಸಚಿವರಾದವರು ಅದರ ಮೇಲೆ ನಿಗಾ ವಹಿಸುವುದಷ್ಟೇ ಕೆಲಸ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT