ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ| ಸಾಧನೆಯಲ್ಲಿ ಮುಂದೆ: ಸೌಲಭ್ಯಯಲ್ಲಿ ಹಿಂದೆ

ಉಪನೋಂದಣಿ ಕಚೇರಿಗೆ ಬರುವ ಸಾರ್ವಜನಿಕರ ಪರದಾಟ
Last Updated 6 ಮಾರ್ಚ್ 2023, 4:36 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ರಾಜ್ಯದಲ್ಲೇ ಅತಿ ಹೆಚ್ಚು ಮುದ್ರಾಂಕ ಶುಲ್ಕ ಮತ್ತು ಪತ್ರ ನೋಂದಣಿ ನಡೆಯುವ ದೊಡ್ಡಬಳ್ಳಾಪುರ ಉಪನೋಂದಣಿ ಕಚೇರಿಯಲ್ಲಿ ಮೂಲಸೌಲಭ್ಯ ಕೊರತೆಯಿಂದ ಸಾರ್ವಜನಿಕರು ಹಾಗೂ ಸಿಬ್ಬಂದಿ ಪರದಾಡುವಂತಾಗಿದೆ.

ಮುದ್ರಾಂಕ ಶುಲ್ಕ ಹಾಗೂ ಪತ್ರಗಳ ನೋಂದಣಿಗಾಗಿ 2021-22ನೇ ಸಾಲಿನಲ್ಲಿ ದೊಡ್ಡಬಳ್ಳಾಪುರ ಉಪನೋಂದಣಿ ಕಚೇರಿ 2ನೇ ಸ್ಥಾನ ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ. ಈ ಎಲ್ಲ ಅಂಶಗಳ ಆಧಾರದ ಮೇಲೆ ಸರ್ಕಾರ ಹೊಸದಾಗಿ ಪತ್ರಗಳ ನೋಂದಣಿ ಪ್ರಕ್ರಿಯೆ ತ್ವರಿತಗೊಳಿಸಲು ಜಾರಿಗೆ ತರುತ್ತಿರುವ ಕಾವೇರಿ ತಂತ್ರಾಂಶ-2 ಅನ್ನು ಬೆಳಗಾವಿ ದಕ್ಷಿಣ ವಿಭಾಗ ಹಾಗೂ ಚಿಂಚೋಳಿ ಉಪನೋಂದಣಿ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಇದರ ಮುಂದುವರಿದ ಭಾಗವಾಗಿ ಮಾ.9ರೊಳಗೆ ದೊಡ್ಡಬಳ್ಳಾಪುರ ಉಪನೋಂದಣಿ ಕಚೇರಿಯಲ್ಲೂ ಅಧಿಕೃತವಾಗಿ ಜಾರಿಗೆ ತರಲು ಸಿದ್ಧತೆ
ನಡೆದಿದೆ.

ಈಗಾಗಲೇ ಕಂದಾಯ ಸಚಿವ ಆರ್‌.ಅಶೋಕ, ವಿಧಾನಸಭೆ ಅಧಿವೇಶನದಲ್ಲಿ ತಿಳಿಸಿರುವಂತೆ ‘ಕಾವೇರಿ ತಂತ್ರಾಂಶದಿಂದ ನೋಂದಣಿ ಪ್ರಕ್ರಿಯೆ ಕೇವಲ 10 ನಿಮಿಗಳಲ್ಲಿ ಮುಕ್ತಾಯವಾಗಲಿದೆ. ಕಚೇರಿಯಲ್ಲಿ ಗಂಟೆಗಟ್ಟಲೆ ಕಾದು ನಿಲ್ಲುವುದು ತಪ್ಪಲಿದೆ. ಪಾಸ್‌ಪೋರ್ಟ್‌ ಕಚೇರಿ ಮಾದರಿಯಲ್ಲಿ ಉಪನೋಂದಣಿ ಕಚೇರಿ ಎಲ್ಲ ರೀತಿಯ ಸೌಲಭ್ಯಗಳಿಂದ ಆಧುನೀಕರಣ ಮಾಡಲಾಗುವುದು’ ಎಂದಿದ್ದಾರೆ.

ದೊಡ್ಡಬಳ್ಳಾಪುರ ಉಪನೋಂದಣಿ ಕಚೇರಿ 1865ರಲ್ಲಿ ಪ್ರಾರಂಭವಾಗಿದೆ. ಸಂಪುಟ 1ರಿಂದ ನೋಂದಣಿ ಪ್ರಕ್ರಿಯೆ ಕಂಪ್ಯೂಟರೀಕರಣಗೊಂಡಾಗ ಅಂದರೆ 2004ರವರೆಗೆ 2,800 ಸಂಪುಟಗಳನ್ನು ಹೊಂದಿತ್ತು. ಇದಾದ ನಂತರ ಸಿಡಿ ಕ್ರಮ ಸಂಖ್ಯೆಯ ವ್ಯವಸ್ಥೆ ಈಗ ಚಾಲ್ತಿಯಲ್ಲಿದೆ.

ಇಲ್ಲಿನ ಉಪನೋಂದಣಿ ಕಚೇರಿಯಲ್ಲಿ 2021-22ನೇ ಸಾಲಿನಲ್ಲಿ 15,888 ಪತ್ರಗಳು ನೋಂದಣಿಯಾಗಿ ₹108ಕೋಟಿ ಮುದ್ರಾಂಕ ಶುಲ್ಕ ಸಂಗ್ರಹವಾಗಿತ್ತು. 2022-23ನೇ ಸಾಲಿನಲ್ಲಿ 15,732 ಪತ್ರಗಳು ನೋಂದಣಿಯಾಗುವ ಮೂಲಕ ಮುದ್ರಾಂಕ ಶುಲ್ಕ ₹113 ಕೋಟಿ ಸಂಗ್ರಹವಾಗಿದೆ.

ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಭೂ ದಾಖಲೆ, ನೋಂದಣಿ ಪ್ರಕ್ರಿಯೆಗಳ ಕಂಪ್ಯೂಟರೀಕರಣ ವ್ಯವಸ್ಥೆ ಕಾರ್ಯನಿರ್ವಹಣೆ ಮಾಡುತ್ತಿರುವುದನ್ನು ಖುದ್ದು ವೀಕ್ಷಣೆ ಮಾಡಲು ಸಹ ಇಲ್ಲಿನ ತಾಲ್ಲೂಕು ಕಚೇರಿ, ನೋಂದಣಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಇಷ್ಟೆಲ್ಲ ಇತಿಹಾಸ ಹೊಂದಿರುವ ಹಾಗೂ ಲಾಭ ಸರ್ಕಾರಕ್ಕೆ ತಂದು ಕೊಡುತ್ತಿರುವ ಉಪ ನೋಂದಣಿ ಕಚೇರಿಯಲ್ಲಿ ಸೌಲಭ್ಯಗಳ ಕೊರತೆ ಇದೆ.

ಹಿರಿಯ ನಾಗರಿಕರಿಂದ ಮೊದಲುಗೊಂಡು ಕೆಲವೇ ಜನರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ. ಉಳಿದವರು ಆಸ್ತಿ ನೋಂದಣಿ ಪ್ರಕ್ರಿಯೆ ಮುಗಿಯುವವರೆಗೂ ಬಿಸಿಲಿನಲ್ಲಿ ಕಾದು ನಿಲ್ಲಬೇಕಾದ ಸ್ಥಿತಿ ಇದೆ. ಕಿರಿದಾದ ಕಚೇರಿಯ ಜನಸಂದಣಿಯಲ್ಲಿ ನಿಂತುಕೊಂಡೇ ನೋಂದಣಿ
ಮಾಡಿಕೊಳ್ಳಬೇಕು.

ಹಣ ಪಾವತಿ ಗೊಂದಲ ಸರಿಪಡಿಸಿ: ಪತ್ರಗಳ ನೋಂದಣಿಗೆ ಕಾವೇರಿ -2 ತಂತ್ರಾಂಶ ಜಾರಿಗೆ ಬರುತ್ತಿರುವುದು ತ್ವರಿತ ನೋಂದಣಿ ಪ್ರಕ್ರಿಯೆಗೆ ಸಹಕಾರಿ. ಆದರೆ, ಇದರಲ್ಲಿ ಸರ್ಕಾರದ ಮುದ್ರಾಂಕ ಶುಲ್ಕ ಪಾವತಿಗೆ ಇರುವ ಗೊಂದಲ ನಿವಾರಣೆಯಾಗಬೇಕು. ಎಲ್ಲ ರೈತರ ಬಳಿಯು ಎಟಿಎಂ, ಕ್ರೆಡಿಟ್‌ ಕಾರ್ಡ್‌ ಇರುವುದಿಲ್ಲ. ಕಾವೇರಿ ತಂತ್ರಾಂಶ 1ರಲ್ಲಿ ಕೆ2 ಚಲನ್‌ ಮೂಲಕ ಸರ್ಕಾರದ ಖಜಾನೆಗೆ ಹಣ ತುಂಬಿ ಪತ್ರಗಳನ್ನು ನೋಂದಣಿ ಮಾಡಿಸಲಾಗುತ್ತಿತ್ತು. ಇದೇ ವ್ಯವಸ್ಥೆ ಮುಂದುವರಿಬೇಕು. ಉಳಿದಂತೆ ಕಾವೇರಿ ತಂತ್ರಾಂಶ -2ರಲ್ಲಿನ ಸೌಲಭ್ಯ ಉತ್ತಮವಾಗಿವೆ ಎಂದು ಪತ್ರಬಹಗಾರ ಎನ್‌.ತಿರುಮಲೇಶ್‌ ತಿಳಿಸಿದರು.

ಹೊಸ ಕಚೇರಿಗೆ ಸ್ಥಳ ನೀಡಿ: ಇಲ್ಲಿನ ತಾಲ್ಲೂಕು ಕಚೇರಿ ಕಟ್ಟಡದ ಒಂದು ಸಣ್ಣ ಮೂಲೆಯಲ್ಲೇ ಉಪ ನೋಂದಣಿ ಕಚೇರಿ ಕಾರ್ಯನಿರ್ವಹಿಸುತ್ತಿದೆ. ತಾಲ್ಲೂಕು ಕಚೇರಿ ಆವರಣದಲ್ಲೇ ಇರುವ ಶೀತಲವಾಗಿರುವ ಅತ್ಯಂತ ಹಳೆ ಕಟ್ಟಟವನ್ನು ತೆಗೆಸಿ ಇದೇ ಸ್ಥಳದಲ್ಲಿ ಆಧುನಿಕ ಸೌಲಭ್ಯ ಒಳಗೊಂಡ ಉಪನೋಂದಣಿ ಕಚೇರಿ ಕಟ್ಟಡ ನಿರ್ಮಿಸಲು ಪತ್ರಬರಹಗಾರರು ಹಲವು ಮನವಿ ಸಲ್ಲಿಸಿದ್ದರೂ ಯಾವುದೇ ಉಪಯೋಗವಾಗಿಲ್ಲ ಎನ್ನುತ್ತಾರೆ ಹಿರಿಯ ಪತ್ರಬರಹಗಾರ ಕೆ.ಬಿ.ಹನುಮಂತಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT