ಕನಸವಾಡಿ (ದೊಡ್ಡಬಳ್ಳಾಪುರ): ತಾಲ್ಲೂಕಿನ ಕನಸವಾಡಿ ಗ್ರಾಮದ ಶನಿ ಮಹಾತ್ಮ ದೇವಸ್ಥಾನಕ್ಕೆ ನೀಡಿದ್ದ ಹೂವಿನ ಹಾರವಿದ್ದ ಪ್ಲಾಸ್ಟಿಕ್ ಚೀಲದಲ್ಲಿ ಕಿಡಿಗೇಡಿಗಳು ಮಾಂಸದ ತುಂಡುಗಳನ್ನಿಟ್ಟಿದ್ದ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
15 ದಿನಗಳ ಹಿಂದೆ ದೇವಸ್ಥಾನಕ್ಕೆ ಬಂದಿದ್ದ ಇಬ್ಬರು ಅಪರಿಚಿತ ಯುವಕರು ದೇವರಿಗೆ ಹೂವಿನ ಹಾರ ಹಾಕಿ ಎಂದು ಪ್ಲಾಸ್ಟಿಕ್ ಕವರ್ ನೀಡಿದ್ದರು. ಅದರಲ್ಲಿ ಮಾಂಸದ ತುಂಡುಗಳಿದ್ದವು ಎಂದು ದೇವಸ್ಥಾನ ಮಂಡಳಿ ತಿಳಿಸಿದ್ದು, ಈ ಸಂಬಂಧ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಇಬ್ಬರು ಯುವಕರು ದೇವರ ದರ್ಶನಕ್ಕೆ ಆಗಮಿಸಿದ್ದರು. ದೇವಸ್ಥಾನದ ಆವರಣದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ, ಸಿಬ್ಬಂದಿ ಪ್ಲಾಸ್ಟಿಕ್ ಕವರ್ ಅನ್ನು ದೇವಾಲಯದ ಒಳಗೆ ತೆಗೆದುಕೊಂಡು ಹೋಗದಂತೆ ತಡೆದರು. ನಂತರ ಯುವಕರು ದೇವರಿಗೆ ಹಾಕಿ ಎಂದು ಒಳಗಡೆ ಹೂವಿನ ಹಾರದ ಮಧ್ಯೆ ಮಾಂಸ ಇಟ್ಟಿದ್ದ ಪ್ಲಾಸ್ಟಿಕ್ ಪೇಪರ್ ಕವರ್ ಅನ್ನು ದೇವಸ್ಥಾನದ ಸಿಬ್ಬಂದಿಗೆ ನೀಡಿ ಹೊರಟು ಹೋಗಿದ್ದಾರೆ’ ಎಂದು ದೇವಾಲಯದ ಧರ್ಮದರ್ಶಿ ಪ್ರಕಾಶ್ ತಿಳಿಸಿದ್ದಾರೆ.
‘ಸಿಬ್ಬಂದಿಯು ಪ್ಲಾಸ್ಟಿಕ್ ಕವರ್ ತೆರೆಯಲು ಮುಂದಾಗುತ್ತಿದ್ದಂತೆ ಮಾಂಸದ ತುಂಡುಗಳು ಹಾರದಿಂದ ಕೆಳಗೆ ಬಿದ್ದಿವೆ. ಕೂಡಲೇ ಸಿಬ್ಬಂದಿ ಕವರ್ ಅನ್ನು ಹೊರಗೆ ಎಸೆದಿದ್ದಾರೆ. ಈ ಕೃತ್ಯ ಎಸಗಿದ ಕಿಡಿಗೇಡಿಗಳು ದೇವಸ್ಥಾನಕ್ಕೆ ಬಂದು ಹೋಗುವ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಕುರಿತು ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.