ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈದಿಯೊಬ್ಬನ ಡೈರಿಯಿಂದ ಹೊರಬಂದ ‘ಜೈಲು ಜೀವಗಳು’

ಆವೇಶಕ್ಕೆ ಒಳಗಾಗಿ ಹತ್ಯೆ ಮಾಡಿ ಬರೋಬ್ಬರಿ 14 ವರ್ಷ 8 ತಿಂಗಳು ಜೈಲು ಶಿಕ್ಷೆ
Last Updated 5 ಜನವರಿ 2019, 17:06 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಅಪರಾಧ ಜಗತ್ತಿನ ಕಡೆಗೆ ಆಕರ್ಷಿತರಾಗುವ ಯುವ ಸಮೂಹವನ್ನು ಅತ್ತ ಕಡೆಗೆ ಹೋಗದಂತೆ ನನ್ನ ಲೇಖನಗಳು ಹಾಗೂ ಉಪನ್ಯಾಸಗಳ ಮೂಲಕ ತಿದ್ದಬೇಕು ಎನ್ನುವುದೇ ನನ್ನ ಜೀವನದ ಗುರಿ. ಹೀಗಾಗಿಯೇ ಜೈಲು ಜೀವಗಳು ಕೃತಿ ಬರೆದು ಪ್ರಕಟಿಸಲು ಮುಂದಾದೆ’ ಎಂದು ಜಿ.ಯಲ್ಲಪ್ಪ ಹೇಳಿದರು.

ದೊಡ್ಡಬಳ್ಳಾಪುರದ ಅನಿಕೇತನ ಟ್ರಸ್ಟ್ ವತಿಯಿಂದ ಪ್ರಕಟಿಸಲಾಗಿರುವ ‘ಜೈಲು ಜೀವಗಳು’ ಪುಸ್ತಕ ಜ.6 ರಂದು ಮಧ್ಯಾಹ್ನ 3 ಗಂಟೆಗೆ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿರುವ ಅವರು, ‘ಮನೆಯ ಬಡತನದ ಕಾರಣ 7ನೇ ತರಗತಿಗೇ ಶಾಲೆ ಬಿಟ್ಟೆ. ಕಬಡ್ಡಿ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದೆ. 2004 ರಲ್ಲಿ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ನೋಡಲು ತೆರಳಿದ್ದಾಗ ಸ್ಥಳೀಯ ಗಿರಿಬಾಬು ಎಂಬಾತನೊಂದಿಗೆ ಜಗಳವಾಗಿತ್ತು’ ಎಂದರು.

‘ಜಗಳ ವಿಕೋಪಕ್ಕೆ ಹೋಗಿ ಗಿರಿಬಾಬು ಮಚ್ಚಿನಿಂದ ಹಲ್ಲೆ ಮಾಡಿದ್ದ. ಆದರೆ ಅದೇ ಮಚ್ಚು ಯಲ್ಲಪ್ಪ ಕೈಸೇರಿ ಆವೇಶದಲ್ಲಿ ಕೊಲೆ ನಡೆದುಹೋಗಿತ್ತು. ಪರಿಣಾಮ ತಪ್ಪಿಗೆ, ಆವೇಶಕ್ಕೆ ಒಳಗಾಗಿ ಹತ್ಯೆ ಮಾಡಿ ಬರೋಬ್ಬರಿ 14 ವರ್ಷ 8 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗಿ ಬಂತು’ ಎಂದರು.

‘ಜೈಲು ಸೇರಿದ ವೇಳೆ ದೃಢಕಾಯನಾಗಿದ್ದುದರಿಂದ ತಂಡ ಸೇರಿಕೊಳ್ಳುವಂತೆ ಹಲವು ರೌಡಿ ಬಣಗಳು ಆಹ್ವಾನಿಸಿದವು. ಆದರೆ ಈಗಾಗಲೇ ಅನಿರೀಕ್ಷಿತ ಹಾಗೂ ಆವೇಶದ ಕ್ಷಣದಲ್ಲಿ ನಡೆದಿದ್ದ ದುರ್ಘಟನೆಯಿಂದ ಮಾನಸಿಕವಾಗಿ ಬೇಸತ್ತಿದ್ದೆ. ಬದುಕು ಮತ್ತೆ ರಕ್ತಸಿಕ್ತವಾಗುವುದು ಇಷ್ಟವಿರಲಿಲ್ಲ. ಹೀಗಾಗಿ ಸಾಮಾನ್ಯ ಕೈದಿಯಂತೆ ಜೈಲು ಶಿಕ್ಷೆಯನ್ನು ಮುಂದುವರೆಸಿದೆ. ಜೈಲಿನಲ್ಲಿ ಇದ್ದುಕೊಂಡೇ ಎರಡು ಪದವಿ ಹಾಗೂ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದ ಕೈದಿ ಎಂಬ ಹೆಗ್ಗಳಿಕೆಯೊಂದಿಗೆ ಕಳೆದ ಗಣರಾಜ್ಯೋತ್ಸವ ದಿನದಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದೆ. ತನ್ನೊಂದಿಗೆ ಇದ್ದ ಜೈಲುವಾಸಿಗಳ ನೈಜ್ಯ ಘಟನೆಗಳನ್ನು ಆಧರಿಸಿ ಕಥೆಗಳನ್ನು ಬರೆಯಲಾಗಿದೆ’ ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಪತ್ರಿಕೋದ್ಯಮ ಹಾಗೂ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಯಲ್ಲಪ್ಪ, ಡಿಪ್ಲೊಮಾ ಇನ್ ಅಂಬೇಡ್ಕರ್ ಸ್ಟಡೀಸ್ ಕೋರ್ಸ್ ಸೇರಿದಂತೆ ಜೈಲಿನಲ್ಲಿ ಇದ್ದುಕೊಂಡೇ ನಾಲ್ಕು ಪದವಿ ಪಡೆದರು. ಆ ಬಳಿಕ ಮನಪರಿವರ್ತನೆಗೊಂಡ ಇತರ ಕೈದಿಗಳಿಗೆ ಶಿಕ್ಷಣ ಮುಂದುವರೆಸಲು ನೆರವು ನೀಡಿ ಅಧಿಕಾರಿಗಳ ಮೆಚ್ಚುಗೆ ಗಳಿಸಿದರು.

ಇವೆಲ್ಲವೂ ಆದ ಬಳಿಕ ‘ಸೆರೆವಾಸಿಗಳ ಮನ ಪರಿವರ್ತನೆಯಲ್ಲಿ ಜೈಲು ಅಧಿಕಾರಿಗಳ ಪಾತ್ರ’ ವಿಚಾರದಲ್ಲಿ ಪಿಎಚ್‍ಡಿ ಪಡೆಯಲು ಮುಂದಾಗಿರುವ ಯಲ್ಲಪ್ಪ ಜೈಲು ಅಧಿಕಾರಿಗಳ ಅನುಮತಿ ಪಡೆದು ರಾಜ್ಯದ ಇತರೆಡೆ ಇರುವ ಬಳ್ಳಾರಿ, ಬೆಳಗಾವಿ, ಮೈಸೂರು, ಕೋರಮಂಗಲ ಸೇರಿದಂತೆ ಒಟ್ಟು 8 ಸೆಂಟ್ರಲ್ ಜೈಲುಗಳಿಗೆ ಭೇಟಿ ನೀಡಿ ಅಲ್ಲೇ ಕೆಲ ಕಾಲ ಇದ್ದು ಅಧ್ಯಯನ ನಡೆಸಿ ಬಂದಿದ್ದಾರೆ. ಇದೀಗ ಅದೇ ವಿಚಾರದಲ್ಲಿ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆಯುವ ಕನಸು ನನಸಾಗಿಸುವ ಪ್ರಯತ್ನದಲ್ಲಿದ್ದಾರೆ.

ಶತ್ರುಗಳ ಮಾತೇ ಸಾಧನೆಗೆ ಮೆಟ್ಟಿಲು: ‘ಪದವಿಯನ್ನು ತೆಗೆದುಕೊಂಡು ಓದುವ ಆರಂಭದಲ್ಲಿ ಪ್ರೋತ್ಸಾಹಿಸುವ ಬದಲಾಗಿ ತಿರಸ್ಕಾರ ಮಾಡಿದವರೆ ಹೆಚ್ಚು. ಸಹ ಖೈದಿಗಳು ಓದುವುದನ್ನು ನೋಡಿ ಹೀಯಾಳಿಸುವುದು, ಅಪಹಾಸ್ಯ ಮಾಡುವುದು ಮಾಡುತ್ತಿದ್ದರು. ಈ ಅಪಹಾಸ್ಯಗಳನ್ನೆಲ್ಲಾ ಮೆಟ್ಟಿಲುಗಳನ್ನಾಗಿ ಬದಲಾಯಿಸಿಕೊಂಡೆ. ನನಗೆ ಶಿಕ್ಷೆಯಾದಾಗ ಜೀವನ ಇಷ್ಟೇನಾ ಎನ್ನುವ ಭೀತಿ ಕಾಡತೊಡಗಿತು. ಆ ಬಳಿಕ ಶಿಕ್ಷಣ ನನ್ನ ಕೈಹಿಡಿದು ಆತ್ಮಸ್ಥೈರ್ಯ ತುಂಬಿತು. ಪೆರೋಲ್ ಮೇಲೆ ಹೊರಬಂದಾಗ ರಾಜ್ಯ ರೈತ ಸಂಘದ ಹಿರಿಯಾರಾಗಿದ್ದ ಡಾ.ವೆಂಕಟರೆಡ್ಡಿ ಅವರ ಮಾರ್ಗದರ್ಶನ ನನಗೆ ಸಿಕ್ಕಿತು. ನಿತ್ಯ ನಾನಾ ಹೋರಾಟಗಳ ಬಳಿಕವೂ ನನಗೆ ಅವರು ಮನಶ್ಶಾಸ್ತ್ರ ಭೋದಿಸುತ್ತಿದ್ದರು. ಅವರ ಹಾಗೂ ನಟ ಸುದೀಪ್‍ರ ಪ್ರೇರಣೆಯಿಂದ ಇಂದು ನಾನೊಬ್ಬ ಲೇಖಕನಾಗಲು ಸಾಧ್ಯವಾಯಿತು. ಹೀಗಾಗಿಯೇ ಜೈಲು ಜೀವಗಳು ಪುಸ್ತಕವನ್ನು ಡಾ.ವೆಂಕಟರೆಡ್ಡಿ ಅವರಿಗೆ ಅರ್ಪಣೆ ಮಾಡಿದ್ದೇನೆ’ ಎಂದರು.

8 ನೈಜ ಘಟನೆ
ಅನಿರೀಕ್ಷಿತ ಘಟನೆಗಳಲ್ಲಿ ಕೋಪದ ಕೈಗೆ ಬುದ್ದಿಕೊಟ್ಟು ಕೊಲೆ ಮತ್ತಿತರ ಅಪರಾಧ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾದ 8 ಮಂದಿಯ ಬದುಕಿನ ನೈಜ ಘಟನೆಗಳನ್ನು ಪುಸ್ತಕದ ರೂಪದಲ್ಲಿ ಹೊರ ತರುತ್ತಿದ್ದಾರೆ. ಕೊಲೆಗಾರ ಎನ್ನಿಸಿಕೊಂಡು ಜೈಲು ಸೇರಿದ್ದ ಯಲ್ಲಪ್ಪ ಇಂದು ‘ಜೈಲು ಜೀವಗಳು’ ಎಂಬ 200 ಪುಟಗಳ ಪುಸ್ತಕದ ಲೇಖಕರಾಗಿದ್ದಾರೆ.

ಕೆಟ್ಟ ಗಳಿಗೆಯಲ್ಲಿ ಆವೇಶಕ್ಕೆ ಒಳಗಾಗಿ, ಮುಂದಾಗುವ ಅನಾಹುತಗಳ ಅರಿವಿಲ್ಲದೆ ಅಪರಾಧ ಎಸಗುವ ಜನರಿಗೆ ಎಚ್ಚರಿಕೆಯ ಸಂದೇಶವಾಗಿ ಪುಸ್ತಕವನ್ನು ರೂಪಿಸಿದ್ದೇನೆ ಎನ್ನುವ ಯಲ್ಲಪ್ಪ ನನ್ನ ಬರವಣಿಗೆಯ ಧ್ಯೇಯ ಅಪರಾಧ ಲೋಕದ ಕಡೆಗೆ ಆಕರ್ಷಿತರಾಗುವ ಯುವ ಸಮೂಹವನ್ನು ಎಚ್ಚರಿಸುವುದಷ್ಟೇ ಎಂದಿದ್ದಾರೆ.

ಇಂದು ಪುಸ್ತಕ ಬಿಡುಗಡೆ
ಅನಿಕೇತ ಟ್ರಸ್ಟ್ ವತಿಯಿಂದ ಪ್ರಕಟಿಸಲಾಗಿರುವ ಜೈಲು ಜೀವಗಳು ಪುಸ್ತಕ ಬಿಡುಗಡೆ ಸಮಾರಂಭ ಜ.6 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಡಾ.ರಾಜ್ ಕುಮಾರ್ ಕಲಾ ಭವನದಲ್ಲಿ ನಡೆಯಲಿದೆ.

ಜಿಲ್ಲಾಧಿಕಾರಿ ಕರೀಗೌಡ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಹೈ ಕೋರ್ಟ್ ವಕೀಲರಾದ ಎಂ.ಎಸ್.ಶ್ಯಾಮಸುಂದರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪುಸ್ತಕ ಕುರಿತು ಕೆ.ಎ.ಎಸ್.ಅಧಿಕಾರಿ ಹಾಗೂ ಬರಹಗಾರ ಡಾ.ನೆಲ್ಲುಕುಂಟೆ ವೆಂಕಟೇಶ್ ಮಾತನಾಡಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಪತ್ರಕರ್ತ ಮಂಜುನಾಥ ಅದ್ದೆ, ಬೆಂಗಳೂರಿನ ಆಡುಗೋಡಿ ಸಂಚಾರ ವಿಭಾಗದ ಆಯುಕ್ತರಾದ ಎಸ್.ಟಿ.ಸಿದ್ದಲಿಂಗಪ್ಪ, ಸರ್ಕಲ್ ಇನ್ ಸ್ಪೆಕ್ಟರ್ ಪುರುಷೋತ್ತಮ್ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT